ಸಿನಿವಾಣಿ

ರಿಷಬ್ ಶೆಟ್ಟಿ ‘ಗಿರಿಕಥೆ‘ಗೆ ಹುಡುಗಿ ಬೇಕಂತೆ!; 18ರಿಂದ 28 ವಯಸ್ಸಿನೊಳಗೇ ಇರಬೇಕಂತೆ!

ನಿರ್ದೇಶನಕ್ಕಿಂತ, ನಟನೆಯಲ್ಲಿಯೇ ಹೆಚ್ಚು ಬಿಜಿಯಾಗಿರುವ ರಿಷಬ್, ಈಗಾಗಲೇ ನಾಲ್ಕೈದು ಸಿನಿಮಾಗಳನ್ನು ಒಪ್ಪಿಕೊಂಡು ಆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗಲೇ ಆ ಬತ್ತಳಿಕೆಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದೆ. ಅದೇ, ‘ಹರಿಕಥೆ ಅಲ್ಲ ಗಿರಿಕಥೆ’! ಇದೇ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿದ್ದು, ನಾಯಕಿ ಪಾತ್ರಕ್ಕೆ ಆಡಿಷನ್​ ಏರ್ಪಡಿಸಿದ್ದಾರೆ. 18ರಿಂದ 28 ವರ್ಷದ ಒಳಗಿನವರು ಪಾಲ್ಗೊಳ್ಳಬಹುದು.

ಅಚ್ಚರಿ ವಿಚಾರ ಏನೆಂದರೆ ಈ ಸಿನಿಮಾ ನಿರ್ದೇಶನ ಮಾಡುತ್ತಿರುವ ನಿರ್ದೇಶಕರ ಹೆಸರೂ ಗಿರಿ.. ಗಿರಿಕೃಷ್ಣ. ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ನಟಿಸಿದ್ದ ಗಿರಿಕೃಷ್ಣ, ಈ ಕಥೆ ಸಿದ್ಧಪಡಿಸಿಕೊಂಡಿದ್ದು, ಇತ್ತೀಚೆಗಷ್ಟೇ ಸರಳ ಮುಹೂರ್ತವನ್ನೂ ನೆರವೇರಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ವಿಜಯವಾಣಿ ಜತೆ ಮಾತನಾಡುವ ಗಿರಿಕೃಷ್ಣ, ‘ಇದೊಂದು ಔಟ್ ಆ್ಯಂಡ್ ಔಟ್ ಕಾಮಿಡಿ ಸಿನಿಮಾ. ರಿಷಬ್ ಅವರಿಗೆ ಈ ಪಾತ್ರ ಹೇಳಿ ಮಾಡಿಸಿದಂತಿದೆ. ‘ಕಿರಿಕ್ ಪಾರ್ಟಿ’ ಸಿನಿಮಾ ಮಾಡುವುದಕ್ಕೂ ಮುನ್ನವೇ ಈ ಕಥೆ ಹೊಳೆದಿತ್ತು. ಅದನ್ನು ರಕ್ಷಿತ್ ಮತ್ತು ರಿಷಬ್ ಇಬ್ಬರಿಗೂ ಹೇಳಿದ್ದೆ. ಅಂದಿನಿಂದ ನಡೆಯುತ್ತಲೇ ಬಂದಿತ್ತು. ಇದೀಗ ಎಲ್ಲವೂ ಮುಗಿದು ಶೂಟಿಂಗ್‌ಗೆ ಹೊರಡಲು ಸಿದ್ಧವಾಗಿದ್ದೇವೆ. 60 ದಿನಗಳ ಚಿತ್ರೀಕರಣ ಪ್ಲ್ಯಾನ್ ಇದೆ. ಬಹುತೇಕ ಬೆಂಗಳೂರಿನಲ್ಲಿಯೇ ನಡೆಯಲಿದೆ’ ಎನ್ನುತ್ತಾರೆ.

ಅದೇ ರೀತಿ, ಚಿತ್ರದ ನಾಯಕ ರಿಷಬ್ ಶೆಟ್ಟಿ ಸಹ ಸಿನಿಮಾದ ಕಥೆ ಬಗ್ಗೆ ತುಂಬ ಎಗ್ಸೈಟ್​ ಆಗಿದ್ದಾರೆ. ‘‘ಕಿರಿಕ್ ಪಾರ್ಟಿ’ ಶೂಟಿಂಗ್ ಸೆಟ್‌ನಲ್ಲೇ ಗಿರಿ ಈ ಕಥೆ ಹೇಳಿದ್ದ. ಆ ಕಥೆ ಇದೀಗ ಸಿನಿಮಾ ಹಂತಕ್ಕೆ ಬಂದಿದ್ದು, ಪೂರ್ಣ ಪ್ರಮಾಣದ ಕಾಮಿಡಿ ಸಿನಿಮಾ ಇದು. ಕಥೆ ಮಜವಾಗಿದೆ’ ಎಂಬುದು ರಿಷಬ್ ಮಾತು.

ಇನ್ನು ಸಂದೇಶ್ ಪ್ರೊಡಕ್ಷನ್ಸ್ ಮತ್ತು ರಿಷಬ್ ಶೆಟ್ಟಿ ಫಿಲಂಸ್ ಸಹಭಾಗಿತ್ವದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಎಂದಿನಂತೆ ಅಜನೀಶ್ ಲೋಕನಾಥ್ ಸಂಗೀತ, ‘ಕಥಾಸಂಗಮ’ ಖ್ಯಾತಿಯ ಛಾಯಾಗ್ರಾಹಕ ರಂಗನಾಥ್, ಸಿ.ಎಂ ಇಲ್ಲಿಯೂ ಕ್ಯಾಮರಾ ಕೈ ಚಳಕ ತೋರಿಸಲಿದ್ದಾರೆ. ಇನ್ನುಳಿದ ತಾರಾಬಳಗದ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದ್ದು, ಶೀಘ್ರದಲ್ಲಿ ಶೂಟಿಂಗ್ ಸಹ ಶುರುವಾಗಲಿದೆ.