ಸಿನಿವಾಣಿ

ಯಾವ ಪಕ್ಷದೊಂದಿಗೂ ಸಹಮತ ಇಲ್ಲ! ಆದರೂ, ರಾಜಕೀಯಕ್ಕೆ ಎಂಟ್ರಿ?: ರಮಿಕಾ ಸೇನ್

ಹಲವು ಸಿನಿಮಾ ನಟ-ನಟಿಯರು ರಾಜಕೀಯವನ್ನು ತಮ್ಮ 'ರಿಟೈರ್‌ಮೆಂಟ್ ಪ್ಲಾನ್' ಮಾಡಿಕೊಂಡಿದ್ದಾರೆ. ಹೌದು, ತಮಗೆ ಬೇಡಿಕೆ ಇರುವವರೆಗೂ ಸಿನಿಮಾ ರಂಗದಲ್ಲಿದ್ದು ಹಣ ಮತ್ತು ಖ್ಯಾತಿ ಗಳಿಸುವ ನಟ-ನಟಿಯರು, ಬೇಡಿಕೆ ಕಡಿಮೆ ಆದ ಕೂಡಲೇ ರಾಜಕೀಯಕ್ಕೆ ಧುಮುಕಿ, ಚಿತ್ರರಂಗದಲ್ಲಿ ಗಳಿಸಿರುವ ಹೆಸರನ್ನು ಬಳಸಿಕೊಂಡು ಚುನಾವಣೆಗಳನ್ನು ಎದುರಿಸುತ್ತಾರೆ. ಕೆಲವರು ಗೆದ್ದು ಬೀಗಿದರೆ, ಉಳಿದವರು ಸೋಲು ಒಪ್ಪಿಕೊಳ್ಳುತ್ತಾರೆ. ಈಗಾಗಲೇ ತುಂಬಾ ಸಿನಿಮಾ ಮಂದಿ ರಾಜಕೀಯದಲ್ಲಿ ಹೆಸರು ಮಾಡಿದ್ದು, ಈಗ ಈ ಪಟ್ಟಿಗೆ ಬಹುಭಾಷಾ ನಟಿಯೊಬ್ಬರು ಸೇರಲಿದ್ದಾರೆ. ಅವರೇ, ಬಾಲಿವುಡ್​ನ ಖ್ಯಾತ ನಟಿ ರವೀನಾ ಟಂಡನ್. ಹಲವು ಭಾಷೆಗಳಲ್ಲಿ ನಟಿಸಿರುವ ರವೀನಾಗೆ ಈಗಲೂ ಬೇಡಿಕೆ ಕಡಿಮೆಯಾಗಿದಿದ್ದರೂ, ಸಿನಿಮಾಗಳಲ್ಲಿ ನಾಯಕಿ ಪಾತ್ರದ ಬದಲಿಕೆ ಪೋಷಕ ಪಾತ್ರಗಳನ್ನು ಮಾಡುತ್ತಿದ್ದಾರೆ.
ಇದೀಗ, ರವೀನಾ ರಾಜಕೀಯಕ್ಕೆ ಸೇರುವ ಯೋಚನೆ ಇದೆ ಎಂದಿದ್ದಾರೆ. ಹೌದು, ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಡೆದ ಅಭಿಮಾನಿಗಳೊಟ್ಟಿಗಿನ ಒಂದು ಲೈವ್ ಸಂಭಾಷಣೆಯಲ್ಲಿ ಮಾತನಾಡಿದಾಗ, ರವೀನಾ ಅವರಿಗೆ ಅಭಿಮಾನಿಯೊಬ್ಬರು, ''ರಾಜಕೀಯದಲ್ಲಿ ಕರಿಯರ್ ನಿರ್ಮಿಸಿಕೊಳ್ಳುವ ಉದ್ದೇಶವಿದೆಯಾ? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಆಗ, ನಟಿ ಲೀವ್​ನಲ್ಲಿ ಈ ಪ್ರಶ್ನೆಗೆ, ''ಯಾವುದಕ್ಕೂ, ಯಾವತ್ತು ಇಲ್ಲ ಎಂದು ಹೇಳಬಾರದು. ಈ ಮೊದಲೇ ರಾಜಕೀಯ ಸೇರುವ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದೆ. ಆಗ, ನನಗೆ ಹಲವು ರಾಜಕೀಯ ಪಕ್ಷಗಳ ಆಫರ್‌ ಸಹ ಬಂದಿತ್ತು. ಪಶ್ಚಿಮ ಬಂಗಾಳ, ಪಂಜಾಬ್, ಮುಂಬೈ ಗಳಲ್ಲಿ ಚುನಾವಣೆ ಟಿಕೆಟ್ ಕೂಡ ಅರಸಿ ಬಂದಿದ್ದವು. ಆದರೆ, ಆ ಸಮಯದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡಲು ರೆಡಿ ಇರಲಿಲ್ಲ. ಹೀಗಾಗಿ, ಅರಸಿ ಬಂದ ಅವಕಾಶಗಳನ್ನು ನಿರಾಕರಿಸುತ್ತಲೇ ಇದ್ದೆ'', ಎಂದು ನಟಿ ಉತ್ತರಿಸಿದ್ದಾರೆ.
ರವೀನಾ ಅವರು, ''ಸದ್ಯ, ದೇಶದಲ್ಲಿ ಇರುವ ಯಾವ ರಾಜಕೀಯ ಪಕ್ಷಗಳೊಂದಿಗೆ ನನ್ನ ಸಹಮತ ಇಲ್ಲ. ಕೆಲವು ಪಕ್ಷಗಳ ಕೆಲವು ಸಿದ್ಧಾಂತಗಳು ಇಷ್ಟವಾಗುತ್ತವೆ. ಉಳಿದ ಸಿದ್ಧಾಂತಗಳು ಇಷ್ಟವಾಗುವುದಿಲ್ಲ. ಯಾವುದೋ ಒಂದು ಪಕ್ಷ ಸೇರಿದರೆ, ನಂತರ ಅವರ ಸಿದ್ಧಾಂತ ನನಗೆ ಹಿಡಿಸಲಿಲ್ಲ ಎಂದರೆ ಆ ಪಕ್ಷದೊಡನೆ ಮುಂದುವರೆಯುವುದು ಕಷ್ಟವಾಗುತ್ತದೆ. ಜತೆಗೆ, ಆ ಪಕ್ಷವೇ ನನ್ನನ್ನು ಮೂಲೆಗುಂಪು ಮಾಡಬಹುದು. ಯಾರಿಗೆ ಗೊತ್ತು.? ಹಾಗಾಗಿ, ಪಕ್ಷ ರಾಜಕೀಯ ಹಾಗೂ ಅದರಿಂದ ಎದುರಾಗುವ ಸಮಸ್ಯೆಗಳನ್ನು ಸಹಿಸಿಕೊಳ್ಳುವ ಮತ್ತು ಹ್ಯಾಂಡಲ್ ಮಾಡುವ ಶಕ್ತಿ ನನ್ನಲ್ಲಿ ಇದೆ ಎಂದು ನನಗೆ ಅನಿಸಿದಾಗ, ಪಕ್ಕಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆ'' ಎಂದಿದ್ದಾರೆ. ಇನ್ನು, ರವೀನಾ ಅವರು ರಮಿಕಾ ಸೇನ್ ಆಗಿ 'ಕೆಜಿಎಫ್ 2'ನಲ್ಲಿ ರಾಜಕಾರಣಿ ಪಾತ್ರದಲ್ಲಿ ನಟಿಸಿದ್ದು, ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.