ಸಿನಿವಾಣಿ

ಕಂಗನಾ ರಣಾವತ್​ಗೆ ತಾಯಿಯಾದರು ಹಿರಿಯ ನಟಿ ಭಾಗ್ಯಶ್ರೀ​

ಬಾಲಿವುಡ್​ನಲ್ಲಿ ತಲೈವಿ ಸಿನಿಮಾ ಸಿದ್ಧವಾಗುತ್ತಿದೆ. ಕಂಗನಾ ರಣಾವತ್​ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ಫಸ್ಟ್​ ಲುಕ್​ ಮೂಲಕವೇ ಸದ್ದು ಮಾಡಿದ್ದ ಈ ಸಿನಿಮಾ ಪಾತ್ರವರ್ಗದ ವಿಚಾರವಾಗಿಯೂ ಸುದ್ದಿಯಲ್ಲಿತ್ತು. ಘಟಾನುಘಟಿ ಕಲಾವಿದರು ಈ ‘ತಲೈವಿ’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಅದರಂತೆ ಇದೀಗ ಚಿತ್ರದಲ್ಲಿ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿರುವ ಭಾಗ್ಯಶ್ರೀ ಪಾತ್ರ ರಿವೀಲ್​ ಆಗಿದೆ.

ಹೌದು ಈಗಾಗಲೇ ಕನ್ನಡದಲ್ಲಿ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ಭಾಗ್ಯಶ್ರೀ, ಹಿಂದಿಯಲ್ಲಿ ತೆರೆಕಂಡಿದ್ದ 2 ಸ್ಟೇಟ್ಸ್​ ತೆಲುಗು ರಿಮೇಕ್​ನಲ್ಲಿಯೂ ನಟಿಸುತ್ತಿದ್ದಾರೆ. ಇದರ ಜತೆಗೆ ಪ್ರಭಾಸ್​ ನಟನೆಯ ರಾಧೆ ಶ್ಯಾಮ್​ ಚಿತ್ರದಲ್ಲಿಯೂ ಪ್ರಮುಖ ಪಾತ್ರಕ್ಕೆ ಭಾಗ್ಯಶ್ರೀ ಜೀವ ತುಂಬಲಿದ್ದಾರೆ. ಹೀಗಿರುವಾಗಲೇ ತಲೈವಿ ಚಿತ್ರದಲ್ಲಿಯೂ ಭಾಗ್ಯಶ್ರೀ ನಟಿಸುತ್ತಿದ್ದು, ಅವರ ಪಾತ್ರ ರಿವೀಲ್​ ಆಗಿದೆ.

ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್​ ಕಾಣಿಸಿಕೊಂಡರೆ, ಜಯಲಲಿತಾ ತಾಯಿ ಪಾತ್ರವನ್ನು ಭಾಗ್ಯಶ್ರೀ ನಿಭಾಯಿಸಲಿದ್ದಾರಂತೆ. ಜಯಲಲಿತಾ ಜೀವನದಲ್ಲಿ ಅವರ ತಾಯಿಯ ಪಾತ್ರ ದೊಡ್ಡದಿದೆ. ಅಷ್ಟೇ ಭಾವನಾತ್ಮಕವಾಗಿಯೂ ಕಾಡಲಿದೆಯಂತೆ. ಹಾಗಾಗಿ ಆ ಪಾತ್ರವನ್ನು ಭಾಗ್ಯಶ್ರೀ ಕಡೆಯಿಂದ ಮಾಡಿಸುವ ಲೆಕ್ಕಾಚಾರ ನಿರ್ದೇಶಕರದಾಗಿತ್ತು. ಅದರಂತೆ ಕಥೆ ಕೇಳಿ ಒಂದೇ ಮಾತಿಗೆ ನಟಿಸುವ ಬಗ್ಗೆ ಒಪ್ಪಿಗೆ ಸೂಚಿಸಿದ್ದರು ಭಾಗ್ಯಶ್ರೀ.

ಸದ್ಯ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್​ ಸ್ಥಗಿತಗೊಂಡಿದ್ದರಿಂದ, ಸೆಪ್ಟಂಬರ್ ವೇಳೆಗೆ ಚಿತ್ರೀಕರಣಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆಯಂತೆ. ಎ.ಎಲ್​ ವಿಜಯ್​ ನಿರ್ದೇಶನದ ಈ ಚಿತ್ರದಲ್ಲಿ ಅರವಿಂದ್ ಸ್ವಾಮಿ, ಪ್ರಕಾಶ್​ ರಾಜ್​ ಸೇರಿ ಹಲವು ಘಟಾನುಘಟಿ ಕಲಾವಿದರ ದಂಡೇ ಇದೆ. (ಏಜೆನ್ಸೀಸ್​)