ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿರುವ 'ಜೇಮ್ಸ್' ಚಿತ್ರದ ಬಗ್ಗೆ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ, ಅಪ್ಪು ಅವರನ್ನು ಕೊನೆಯ ಬಾರಿ ಅಭಿಮಾನಿಗಳು ಬೆಳ್ಳಿ ತೆರೆಯ ಮೇಲೆ ಕಣ್ತುಂಬಿಕೊಳ್ಳಲಿದ್ದಾರೆ. ಹೀಗಾಗಿ, 'ಜೇಮ್ಸ್' ಚಿತ್ರದ ರಿಲೀಸ್‌ಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹಾಗೆಯೇ, ಪುನೀತ್ ರಾಜ್‌ಕುಮಾರ್ ಅವರ ಹುಟ್ಟು ಹಬ್ಬಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ.
ಈಗಾಗಲೇ, ರಿಲೀಸ್ ಆದ ಈ ಚಿತ್ರದ ಪೋಸ್ಟರ್ ಮತ್ತು ಟೀಸರ್ ಅಪ್ಪು ಅವರನ್ನು ಸಿನಿಮಾದಲ್ಲಿ ನೋಡಬೇಕು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ತುಂಬಾನೆ ಹೆಚ್ಚಿಸಿದೆ. ಇನ್ನು, ಅಪ್ಪು ಅಭಿಮಾನಿಗಳ ಕುತೂಹಲ ಮತ್ತು ಸಂತೋಷ ಹೆಚ್ಚಿಸಲು 'ಜೇಮ್ಸ್' ಚಿತ್ರತಂಡ ಮತ್ತೊಂದು ಸರ್ಪ್ರೈಸ್ ನೀಡಲು ರೆಡಿಯಾಗಿದ್ದಾರೆ. ಹೌದು, ಈ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದೆ.
'ಜೇಮ್ಸ್' ಚಿತ್ರದ ಮೊದಲ ಹಾಡಾದ 'ಟ್ರೇಡ್ ಮಾರ್ಕ್' ಮಾರ್ಚ್ 1 ರಂದು ಬೆಳಗ್ಗೆ 11:11 ಗಂಟೆಗೆ ಬಿಡುಗಡೆಯಾಗಲಿದೆ. ಈ ಹಾಡಿಗೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಅವರೆ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಾಡು ರಿಲೀಸ್ ಮಾಡುವುದಾಗಿ ಚಿತ್ರತಂಡ ಸಿನಿಮಾದ ಮತ್ತೊಂದು ಹೊಸ ಪೋಸ್ಟರ್ ಮೂಲಕ ಪ್ರಕಟಸಿದ್ದಾರೆ. ಸದ್ಯದಲ್ಲೇ, ಸಿನಿಮಾದ ಟ್ರೈಲರ್ ಕೂಡಾ ಬಿಡುಗಡೆಯಾಗಲಿದೆ.
ನಟ ಪುನೀತ್ ರಾಜ್‌ಕುಮಾರ್ ಅವರು ನಿಧನ ಹೊಂದಿ ಇಂದಿಗೆ ನಾಲ್ಕು ತಿಂಗಳು ಕಳೆದಿದ್ದು, ಅಪ್ಪು ಕುಟುಂಬಸ್ಥರು ಇಂದು ಫೆ.28 ರಂದು ಸಮಾಧಿಯ ಬಳಿ ನಾಲ್ಕನೇ ತಿಂಗಳ ಪೂಜೆ ಮಾಡಿದ್ದಾರೆ. ಇಂದು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಕ್ಕಳಾದ ಧೃತಿ ಹಾಗೂ ವಂದಿತಾ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಅಪ್ಪುಗೆ ನಮಿಸಿದ್ದಾರೆ. ಇನ್ನು, ನಾಲ್ಕನೇ ತಿಂಗಳ ಹಿನ್ನೆಲೆಯಲ್ಲಿ ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಇದೇ ಸಂದರ್ಭದಲ್ಲಿ ಹಾಡು ಬಿಡುಗಡೆಯಾಗಲಿರುವ ಸುದ್ದಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಸಂತಸ ತಂದಿದೆ.