ಆಕಾಶದಲ್ಲೂ ಹೊಳೆಯಲಿದ್ದಾರೆ ಕರುನಾಡ ರಾಜ'ರತ್ನ'! ಉಪಗ್ರಹಕ್ಕೆ ಅಪ್ಪು ಹೆಸರು...

Published on
ಬೆಂಗಳೂರು: ಕನ್ನಡದ ಪವರ್ ಸ್ಟಾರ್ ನಟ ಪುನೀತ್​ ರಾಜ್​ಕುಮಾರ್ ಮೇಲೆ ಅವರ ಕುಟುಂಬ, ಸ್ನೇಹಿತರು, ಸಿನಿತಾರೆಯರು, ಅಭಿಮಾನಿ ದೇವರುಗಳು ಇಟ್ಟಿರುವ ಪ್ರೀತಿ, ಗೌರವ ಅಷ್ಟಿಷ್ಟಲ್ಲ. ಅಪ್ಪು ಅವರು ನಿಧನ ಹೊಂದಿದ ನಂತರದಲ್ಲಿ ಅವರ ಅಭಿಮಾನಿ ದೇವರುಗಳು ನಾನಾ ರೀತಿಯ ಕೆಲಸಗಳ ಮೂಲಕ ತಮ್ಮ ಮೀತಿಯಿಲ್ಲದ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಹೌದು, ರಸ್ತೆ, ವೃತ್ತ, ಏರಿಯಾಗಳಿಗೆ ನಟ ಪುನೀತ್ ರಾಜ್​ಕುಮಾರ್ ಅವರ ಹೆಸರನ್ನು ಇಡಲಾಗುತ್ತಿದೆ. ಇನ್ನು, ನೇತ್ರ ದಾನ, ರಕ್ತ ದಾನ, ಅಂಗಾಂಗ ದಾನ, ಅನ್ನ ದಾನ, ನಮನ ಮತ್ತು ಗೌರವ ಸಲ್ಲಿಸುವ ಕಾರ್ಯಕ್ರಮಗಳು, ಸಮಾಜ ಸೇವೆಯ ಮೂಲಕ ಕೂಡಾ ತಮಗೆ ಅಪ್ಪು ಮೇಲಿರುವ ಪ್ರೀತಿಯನ್ನು ಅಭಿಮಾನಿಗಳು ತೋರಿಸುತ್ತಿದ್ದಾರೆ.
ಆದರೆ, ಈಗ ಬಹಳ ವಿಶೇಷವಾಗಿ ಪುನೀತ್ ಅವರಿಗೆ ಒಂದು ಗೌರವ ಸಲ್ಲಿಸಲಾಗುತ್ತಿದೆ. ಅದು, ಏನು ಅಂತೀರಾ...? ಅಪ್ಪು ಹೆಸರಲ್ಲಿ ಒಂದು ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ. ಇದರ ಬಗ್ಗೆ ಸ್ವತಃ ಉನ್ನತ ಶಿಕ್ಷಣ ಹಾಗೂ ಐಟಿಬಿಟಿ ಸಚಿವ ಅಶ್ವತ್ಥ್ ನಾರಾಯಣ ಅವರು ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಮಾಹಿತಿ ಹೊರಹಾಕಿದ್ದಾರೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಅಪ್ಪು ಅವರ ಅಪ್ಪಟ ಅಭಿಮಾನಿಗಳ ಖುಷಿಗೆ ಅಂತ್ಯವಿಲ್ಲ ಎಂಬಂತಾಗಿದೆ.
'‘ವಿದ್ಯಾರ್ಥಿಗಳು ಮಾಡುತ್ತಿರುವ ಉಪಗ್ರಹವನ್ನು ನಟ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಉಡಾವಣೆ ಮಾಡಲಾಗುತ್ತಿದೆ. ಮುಂಬರುವ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ ತಿಂಗಳಲ್ಲಿ ಉಪಗ್ರಹ ಲಾಂಚ್​ ಆಗಬಹುದು. 1.90 ಕೋಟಿ ರೂ. ವೆಚ್ಚದಲ್ಲಿ ಉಪಗ್ರಹ ಸಿದ್ಧವಾಗುತ್ತಿದೆ. 1.5 ಕೆ.ಜಿ. ತೂಕದ ಉಪಗ್ರಹ ಸಿದ್ಧವಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ, ಸುಮಾರು 20 ಶಾಲೆಗಳ ಮಕ್ಕಳು ಭಾಗಿಯಾಗಲಿದ್ದಾರೆ.’' ಎಂದು ಸಚಿವರು ಹೇಳಿಕೆ ನೀಡಿದ್ದಾರೆ.
ಅಂದಹಾಗೆ, ಈ ಉಪಗ್ರಹ ತಯಾರಿಸಲು ಕರ್ನಾಟಕದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು, ಅದರಲ್ಲೂ ಮಲ್ಲೇಶ್ವರಂ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಉತ್ಸುಕರಾಗಿದ್ದಾರೆ. ಇದು ಸರ್ಕಾರಿ ಶಾಲಾ ವಿದ್ಯಾರ್ಥಿಗಳು ತಯಾರಿಸುತ್ತಿರುವ ಮೊದಲ ಉಪಗ್ರಹವಾಗಿದೆ. ಇದಕ್ಕೆ, ಪುನೀತ್ ಅವರ ಹೆಸರು ಇಡುವುದಕ್ಕೆ ಚಿಂತನೆ ನಡೆದಿದೆ. ಅಪ್ಪು ಎಂದರೆ ಬರೀ ಅಭಿಮಾನಿಗಳಿಗಷ್ಟೇ ಅಲ್ಲ, ಪ್ರತಿ ಕನ್ನಡಿಗರಿಗೂ ಅದರಲ್ಲೂ ಯುವಕರು, ಮಕ್ಕಳಿಗೆ ಅವರು ಫೇವರೇಟ್‌ ಎಂದೇ ಹೇಳಬೇಕು. ಹೀಗಾಗಿ, ವಿದ್ಯಾರ್ಥಿಗಳು ತಯಾರಿಸುತ್ತಿರುವ ಈ ಉಪಗ್ರಹಕ್ಕೆ ಪುನೀತ್ ಹೆಸರಿಟ್ಟು, ಅಪ್ಪು ಅವರ ಸಮಾಜಸೇವೆ ಹಾಗೂ ಕನ್ನಡ ಚಿತ್ರರಂಗದಲ್ಲಿ ನಟ ಪುನೀತ್ ಮಾಡಿರುವ ಸಾಧನೆಗೆ ಗೌರವ ಸಲ್ಲಿಸುವ ಯೋಚನೆ ಇದಾಗಿದೆ.
ಸಾಮಾನ್ಯವಾಗಿ ಒಂದು ಉಪಗ್ರಹ ಅಭಿವೃದ್ಧಿಪಡಿಸಲು ಸುಮಾರು 50 ಕೋಟಿಯಿಂದ 60 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ. ಅಲ್ಲದೆ, ಅದರ ತೂಕ ಕೂಡಾ 50 ಕಿಲೋ ಇರುತ್ತದೆ. ಆದರೆ, ''ಈಗ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ, ಪರಿವರ್ತನೆ ಆಗಿದೆ. ಇಲ್ಲಿ ಒಂದೂವರೆ ಕಿಲೋ ತೂಕದಲ್ಲಿ, 1. ಕೋಟಿ 90 ಲಕ್ಷ ರೂಪಾಯಿ ವೆಚ್ಚದಲ್ಲಿ ವಿದ್ಯಾರ್ಥಿ ಉಪಗ್ರಹ ಉಡಾವಣೆ ಯೋಜನೆಯ ಪರಿಕಲ್ಪನೆ ರೂಪಿಸಲಾಗಿದೆ'' ಎಂದು ಅಶ್ವತ್ಥ್ ನಾರಾಯಣ ಅವರು ತಿಳಿಸಿದ್ದಾರೆ.
ಇತ್ತೀಚೆಗೆ, ಪುನೀತ್ ರಾಜ್‍ಕುಮಾರ್ ಅವರ ಹೆಸರನ್ನು ರಸ್ತೆಯೊಂದಕ್ಕೆ ಇಡಲು ಬಿಬಿಎಂಪಿ ಅನುಮೋದನೆ ನೀಡಿತ್ತು. ಬರೋಬ್ಬರಿ 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ ‘ಶ್ರೀ ಪುನೀತ್ ರಾಜ್‍ಕುಮಾರ್ ರಸ್ತೆ’ ಎಂದು ನಾಮಕಾರಣ ಮಾಡುವ ಬಗ್ಗೆ ನಿರ್ಣಯ ಕೈಗೊಂಡು ಅನುಮೋದನೆ ನೀಡಲಾಗಿದೆ. ಇದೀಗ, ಉಪಗ್ರಹಕ್ಕೆ ಅಪ್ಪು ಹೆಸರಿಡುವ ಮೂಲಕ ಕರ್ನಾಟಕ ಸರ್ಕಾರ ಅಪ್ಪುಗೆ ಹೆಚ್ಚು ಹೆಚ್ಚು ಗೌರವ ನೀಡುತ್ತಿದೆ ಎಂದು ಎಲ್ಲರಿಗೂ ಅರ್ಥವಾಗುತ್ತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net