ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹಲವು ಮಂದಿಯನ್ನು ಮುಂಬೈ ಪೊಲೀಸ್ ವಿಚಾರಣೆ ನಡೆಸುತ್ತಿದೆ. ಇತ್ತ ನಿನ್ನೆಯಷ್ಟೇ ಹೊಸದಾಗಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ಕೇಸ್ ಕೂಡ ದಾಖಲಾಗಿದೆ. ಸುಶಾಂತ್ ಆತ್ಮಹತ್ಯೆಗೆ ರಿಯಾಳೇ ಪರೋಕ್ಷ ಕಾರಣವೆಂದು ಆಪಾದನೆ ಮಾಡಿ ದೂರು ನೀಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ಈ ವಿಚಾರ ಬಹು ಚರ್ಚೆಯಾಗುತ್ತಿದ್ದು, ತನಿಖೆಗೆ ಆದೇಶಿಸಲಾಗಿದೆ. ರಿಯಾ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ, ಎಂದೂ ಮಾತನಾಡದ ಒಂದಷ್ಟು ಮಂದಿ ದನಿಗೂಡಿಸುತ್ತಿದ್ದಾರೆ.
ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ, ಇದೀಗ ಮತ್ತೆ ಸುಶಾಂತ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ರಿಯಾ ವಿರುದ್ಧ ಬಿಹಾರದ ಪಾಟ್ನಾದಲ್ಲಿ ದೂರು ದಾಖಲಾಗುತ್ತಿದ್ದಂತೆ, ಸೊಷಿಯಲ್ ಮೀಡಿಯಾದಲ್ಲಿ ‘ಸತ್ಯಕ್ಕೆ ಜಯ’ ಎಂದು ದೊಡ್ಡದಾಗಿ ಬರೆದುಕೊಂಡಿದ್ದಾರೆ. ಸತತ ಆರು ವರ್ಷಗಳ ಕಾಲ ರಿಲೇಷನ್ಶಿಪ್ನಲ್ಲಿದ್ದ ಅಂಕಿತಾ ಮತ್ತು ಸುಶಾಂತ್, 2016ರಲ್ಲಿ ಬೇರೆ ಬೇರೆಯಾಗಿದ್ದರು. ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿ ಮನೆಮಾತಾಗಿದ್ದರು.
ಹೀಗೆ ಅಂಕಿತಾ ಬಳಿಕ ಸುಶಾಂತ್ ಜೀವನಕ್ಕೆ ಎಂಟ್ರಿ ಕೊಟ್ಟಿದ್ದು ರಿಯಾ. ಇದೀಗ ಸುಶಾಂತ್ ಸಾವಿಗೆ ರಿಯಾಳೇ ಕಾರಣ ಎಂದು ಆರೋಪಿಸಿ ಸುಶಾಂತ್ ತಂದೆ ಕೆಕೆ ಸಿಂಗ್ ಪಾಟ್ನಾದ ರಾಜೀವ್ ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ರಿಯಾ ಮೇಲೆ ಎಫ್ಐಆರ್ ದಾಖಲಾಗಿದ್ದೇ ತಡ, ಮಾಜಿ ಪ್ರಿಯತಮೆ ಅಂಕಿತಾ ಸತ್ಯಕ್ಕೆ ಜಯ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ.
ಇನ್ನು ನವಾಜುದ್ದೀನ್ ಸಿದ್ಧೀಕಿ ಸಹೋದರ ಶಮಸ್ ನವಾಬ್ ಸಿದ್ಧೀಕಿ ಸಹ ರಿಯಾ ವಿರುದ್ಧ ಬ್ಯಾಟ್ ಬೀಸಿ, ಟ್ವಿಟರ್ನಲ್ಲಿ ರಿಯಾ ವಿರುದ್ಧ ಖಡಕ್ ಮಾತುಗಳಿಂದಲೇ ತರಾಟೆ ತೆಗೆದುಕೊಂಡಿದ್ದರು. ‘ನಮ್ಮ ನಡುವೆ ರಿಯಾ ಚಕ್ರವರ್ತಿ ರೀತಿಯ ಜನರೇ ಹೆಚ್ಚಿದ್ದಾರೆ. ಅವರ ಕೆಲಸವೇ ಬ್ಲಾಕ್ಮೇಲ್ ಮಾಡುವುದು. ಬೇರೊಬ್ಬರ ಶ್ರಮ ಮತ್ತು ಘನತೆಯ ಮೇಲೆ ನೀರು ಸುರಿಯುತ್ತಾರೆ. ಹಣ ಸೇರಿ ಎಲ್ಲವನ್ನು ದೋಚುತ್ತಾರೆ’ ಎಂದು ರಿಯಾ ವಿರುದ್ಧ ಹರಿಹಾಯ್ದಿದ್ದರು (ಏಜೆನ್ಸೀಸ್)