ಸಿನಿವಾಣಿ

ಆದಿಪುರುಷ ಚಿತ್ರದಲ್ಲಾಗಿರುವ ತಪ್ಪನ್ನು ಒಪ್ಪಿಕೊಂಡ ಬರಹಗಾರ: ಕ್ಷಮೆಯಾಚಿಸಿದರೂ ಕರಗದ ನೆಟ್ಟಿಗರ ಕೋಪ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಮುಂಬೈ: ಆದಿಪುರುಷ ಸಿನಿಮಾದಲ್ಲಿರುವ ತಪ್ಪನ್ನು ಒಪ್ಪಿಕೊಂಡಿರುವ ಬರಹಗಾರ ಮನೋಜ್​ ಮುಂತಾಶಿರ್​, ವಿವಾದಾತ್ಮಕ ಡೈಲಾಗ್​ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕೆ ಜನರಲ್ಲಿ ಕ್ಷಮೆಯಾಚಿಸಿದ್ದಾರೆ.

ಇಂದು (ಜು. 8) ಬೆಳಗ್ಗೆ ಟ್ವೀಟ್​ ಮಾಡಿರುವ ಮನೋಜ್​, ಆದಿಪುರುಷ ಸಿನಿಮಾದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಎರಡೂ ಕೈಗಳನ್ನು ಮುಗಿದು ಬೇಷರತ್ ಕ್ಷಮೆಯಾಚಿಸುತ್ತೇನೆ. ಪ್ರಭು ಬಜರಂಗ ಬಲಿ ನಮ್ಮನ್ನು ಒಗ್ಗೂಡಿಸಲಿ ಮತ್ತು ನಮ್ಮ ಪವಿತ್ರ ಸನಾತನ ಹಾಗೂ ನಮ್ಮ ಮಹಾನ್ ರಾಷ್ಟ್ರದ ಸೇವೆ ಮಾಡಲು ನಮಗೆ ಶಕ್ತಿಯನ್ನು ನೀಡಲಿ ಎಂದು ಹೇಳಿದ್ದಾರೆ.

ಇದೀಗ ಮನೋಜ್​ ಅವರ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕ್ಷಮೆ ಕೇಳಲು ತುಂಬಾ ತಡವಾಯಿತು ಎಂದಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಅದರ ಪ್ರಭಾವ ಕಡಿಮೆಯಾದ ಬಳಿಕ ಕ್ಷಮೆಯಾಚಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಮಂದಿಯ ಭಾವನೆಗಳನ್ನು ಕದಡಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಆದಿಪುರುಷ ಸಿನಿಮಾವನ್ನು ಓಂ ರಾವರ್​ ಅವರು ನಿರ್ದೇಶನ ಮಾಡಿದ್ದಾರೆ. ಮಹಾಕಾವ್ಯ ರಾಮಾಯಣ ಆಧಾರಿತ ಸಿನಿಮಾ ಆಗಿದ್ದು, ಭಾರೀ ಬಜೆಟ್​ನೊಂದಿಗೆ ಸಿನಿಮಾವನ್ನು ಯುವಿ ಕ್ರಿಯೇಷನ್ಸ್, ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡಿದೆ. ಪ್ಯಾನ್​ ಇಂಡಿಯಾ ಸೂಪರ್​ಸ್ಟಾರ್​ ಪ್ರಭಾಸ್​ ರಾಮನ ಪಾತ್ರದಲ್ಲಿ, ನಟಿ ಕೃತಿ ಸನೋನ್​ ಸೀತೆಯ ಪಾತ್ರದಲ್ಲಿ, ಸನ್ನಿ ಸಿಂಗ್​ ಲಕ್ಷ್ಮಣನ ಪಾತ್ರದಲ್ಲಿ ಹಾಗೂ ಸೈಫ್​ ಅಲಿಖಾನ್​ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ವಿವಾದಾತ್ಮಕ ಡೈಲಾಗ್ಸ್​, ತಿರುಚಿದ ಚಿತ್ರಕತೆ ಮತ್ತು ಕಳಪೆ ಗ್ರಾಫಿಕ್ಸ್​ ಕಾರಣದಿಂದಾಗಿ ಈ ಸಿನಿಮಾ ಭಾರೀ ಟೀಕೆಗೆ ಗುರಿಯಾಯಿತು. (ಏಜೆನ್ಸೀಸ್​)