ಸಿನಿವಾಣಿ

ರಾಷ್ಟ್ರ ಪ್ರಶಸ್ತಿ ವಿಜೇತ ಸ್ಟಾರ್​ ಹೀರೋ ಚಿತ್ರಕ್ಕೆ ನೋ ಎಂದ ನಟಿ ಸಾಯಿ ಪಲ್ಲವಿ! ಕಾರಣ ಹೀಗಿದೆ... Sai Pallavi

Sai Pallavi : ನಟಿ ಸಾಯಿ ಪಲ್ಲವಿ ಅವರು ಚಿತ್ರರಂಗದಲ್ಲಿ ತಮ್ಮದೇಯಾದ ಹೆಸರು ಮಾಡಿದ್ದಾರೆ. ಗ್ಲಾಮರಸ್​ ಪಾತ್ರಗಳಿಂದ ದೂರವಾಗಿ ಸಹಜ ನಟಿಯಾಗಿ ಛಾಪು ಮೂಡಿಸಿರುವ ಈ ಸರಳ ಸುಂದರಿ, ಮಲಯಾಳಂ ಚಿತ್ರ ಪ್ರೇಮಂ ಮೂಲಕ ನಾಯಕಿಯಾಗಿ ಪರಿಚಯವಾದರು. ತಮ್ಮ ಮೊದಲ ಚಿತ್ರದಿಂದಲೇ ನಟನೆಯಲ್ಲಿ ಛಾಪು ಮೂಡಿಸಿದರು. ಹೀಗಾಗಿ ಟಾಲಿವುಡ್​ನಿಂದ ತಕ್ಷಣವೇ ಸಾಯಿ ಪಲ್ಲವಿಗೆ ಕರೆ ಬಂತು. ಅಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿ ಯಶಸ್ವಿ ನಾಯಕಿಯಾದ ಸಾಯಿ ಪಲ್ಲವಿ, ಕಾಲಿವುಡ್​ನಲ್ಲೂ ನಟಿಸಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡರು.

ಸಾಯಿ ಪಲ್ಲವಿ ಅವರು ಇತ್ತೀಚೆಗೆ ಶಿವಕಾರ್ತಿಕೇಯನ್ ಜತೆ ಅಮರನ್ ಚಿತ್ರದಲ್ಲಿ ನಟಿಸಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅಮರನ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿ ಭಾರಿ ಜನಮನ್ನಣೆ ಗಳಿಸಿದೆ. ಸಾಯಿ ಪಲ್ಲವಿ ಅವರ ನಟನೆಗೆ ಪ್ರೇಕ್ಷಕರಿಂದ ಬಹುಪರಾಕ್​ ಬಂದಿದೆ.

ಅಂದಹಾಗೆ ಸಾಯಿಪಲ್ಲವಿ ಅವರು ಯಾವುದೇ ಸಿನಿಮಾವಾಗಲಿ ತಮ್ಮ ಪಾತ್ರ ಇಷ್ಟವಾದರೆ ಮಾತ್ರ ಅದರಲ್ಲಿ ನಟಿಸಲು ಒಪ್ಪುತ್ತಾರೆ. ಒಂದು ವೇಳೆ ಇಷ್ಟವಾಗದಿದ್ದರೆ ಅದು ಯಾರೇ ಆಗಿರಲಿ ಮತ್ತು ಎಷ್ಟೇ ದೊಡ್ಡ ಅವಕಾಶವೇ ಆಗಿರಲಿ ಅದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಅದಕ್ಕೆ ಇತ್ತೀಚೆಗೆ ನಡೆದ ಘಟನೆಯೊಂದು ತಾಜಾ ಉದಾಹರಣೆಯಾಗಿದೆ.

ನಟ ಚಿಯಾನ್​ ವಿಕ್ರಮ್ ಎದುರು ನಟಿಸಲು ಸಾಯಿ ಪಲ್ಲವಿಗೆ ಅವಕಾಶ ಬಂದಿತ್ತು ಆದರೆ, ಅದನ್ನು ನಿರಾಕರಿಸಿದರು ಎಂದು ವರದಿಯಾಗಿದೆ. ತಂಗಲನ್ ಚಿತ್ರದಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ ನಟ ವಿಕ್ರಮ್, ಪ್ರಸ್ತುತ ವೀರ ವೀರ ಸೂರನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎಸ್. ಅರುಣ್ ಕುಮಾರ್ ನಿರ್ದೇಶನದ ಈ ಚಿತ್ರದ ನಿರ್ಮಾಣವು ಅಂತಿಮ ಹಂತವನ್ನು ತಲುಪಿದೆ. ಇದೇ ಸಂದರ್ಭದಲ್ಲಿ ವಿಕ್ರಮ್​ ಅವರು ಮದನ್ ಅಶ್ವಿನ್ ನಿರ್ದೇಶನದ ಮುಂದಿನ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ನಿರ್ದೇಶಕರು ಈ ಹಿಂದೆ ಯೋಗಿ ಬಾಬು ನಟನೆಯ ಮಂಡೇಲಾ ಮತ್ತು ಶಿವ ಕಾರ್ತಿಕೇಯನ್ ಅಭಿನಯದ ಮಾವೀರನ್​ನಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಮದನ್​ ಅಶ್ವಿನ್​ ಅವರು ವಿಕ್ರಮ್​ ಅವರಿಗೆ ನಿರ್ದೇಶನ ಮಾಡಲಿರುವ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ. ಈ ಚಿತ್ರದಲ್ಲಿ ವಿಕ್ರಮ್ ಎದುರು ಸಾಯಿ ಪಲ್ಲವಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡುವ ಪ್ರಯತ್ನಗಳು ನಡೆದಿವೆ ಎಂದು ತಿಳಿದುಬಂದಿದೆ. ಆದರೆ, ಕಾಲ್ ಶೀಟ್ ಸಮಸ್ಯೆಯಿಂದಾಗಿ ಸಾಯಿ ಪಲ್ಲವಿ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಆರು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿರುವ ಚಿಯಾನ್​ ವಿಕ್ರಮ್​ ಅವರೊಂದಿಗೆ ಸಾಯಿ ಪಲ್ಲವಿ ಸಿನಿಮಾ ಮಾಡಿದರೆ, ನಿರೀಕ್ಷೆಗಳು ದೊಡ್ಡದಾಗಿರುತ್ತವೆ. ಮದನ್​ ಅಶ್ವಿನ್-ವಿಕ್ರಮ್​ ಕಾಂಬೋದಲ್ಲಿ ತಯಾರಾಗಲಿರುವ ಈ ಚಿತ್ರದ ಸಂಪೂರ್ಣ ವಿವರಗಳನ್ನು ತಿಳಿಯಲು ನಾವು ಇನ್ನೂ ಕೆಲವು ದಿನಗಳು ಕಾಯಬೇಕಾಗುತ್ತದೆ. (ಏಜೆನ್ಸೀಸ್​)