'ಮಹಾನುಭಾವರು', 'ಖಡಕ್', 'ರೈಡರ್' ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಅನುಷಾ ರೈ, ತಾಯಿ ಚಾಮುಂಡೇಶ್ವರಿಯ ಪರಮ ಭಕ್ತೆ. ಹೀಗಾಗಿಯೇ ಪ್ರತಿವರ್ಷ ನವರಾತ್ರಿ ಹಬ್ಬವನ್ನು ಬಹಳ ಸಡಗರ, ಸಂಭ್ರಮದೊಂದಿಗೆ ಆಚರಿಸುತ್ತಾರೆ. ಈ ಬಗ್ಗೆ ಹೇಳುವ ಅವರು, 'ಒಮ್ಮೆ ಪ್ರವಾಸಕ್ಕೆಂದು ಮೈಸೂರಿಗೆ ಹೋಗಿದ್ದೆ. ಜೂ, ಅರಮನೆ ಅಂತ ಸುತ್ತಾಡಿ ಚಾಮುಂಡೇಶ್ವರಿ ದರ್ಶನಕ್ಕೆ ಹೋದಾಗ, ನನಗೆ ಅಲ್ಲಿ ಒಂದು ರೀತಿಯ ಪಾಸಿಟಿವ್ ವೈಬ್ ದೊರೆಯಿತು. ಹೀಗಾಗಿ ಅಂದಿನಿಂದ ಚಾಮುಂಡೇಶ್ವರಿಯನ್ನು ನಂಬಲು ಪ್ರಾರಂಭಿಸಿದೆ. ತಿಂಗಳಲ್ಲಿ ಕಡಿಮೆ ಅಂದರೆ ಒಮ್ಮೆಯಾದರೂ ನಾನು ಚಾಮುಂಡಿ ತಾಯಿಯ ದರ್ಶನಕ್ಕೆ ಹೋಗುತ್ತೇನೆ. ನಾನೇನೇ ಕೇಳಿದರೂ ಆ ತಾಯಿ ಸ್ಪಂದಿಸುತ್ತಾರೆ. ನನಗೆ ಬೇಸರವಾಗಲಿ, ಖುಷಿಯಾಗಲಿ ಅಲ್ಲಿಗೆ ಹೋಗುತ್ತೇನೆ' ಎಂದು ಮಾಹಿತಿ ನೀಡುತ್ತಾರೆ ಅನುಷಾ.
ವಿಶೇಷ ಅಂದರೆ ಅನುಷಾ ಮನೆಯಲ್ಲಿ ಚಾಮುಂಡೇಶ್ವರಿಯ ವಿಗ್ರಹವದೆಯಂತೆ. 'ನಾನು ಮನೆಯಲ್ಲಿ ಚಾಮುಂಡಿಯ ದೊಡ್ಡ ವಿಗ್ರಹವಿದೆ. ಬೆಳಗ್ಗೆ ಎದ್ದ ತಕ್ಷಣ ಚಾಮುಂಡಿ ತಾಯಿಯನ್ನು ನೋಡುತ್ತೇನೆ. ಒಬ್ಬಳೇ ಮನೆಯಲ್ಲಿರುವಾಗ ಅವರ ಜತೆ ಮಾತನಾಡುತ್ತೇನೆ. ನನ್ನ ಜತೆ ಯಾವಾಗಲೂ ಚಾಮುಂಡಿ ತಾಯಿ ಇರುತ್ತಾರೆ ಎಂಬ ಭಾವವಿದೆ. ಪ್ರತಿ ವರ್ಷ ಅಕ್ಟೋಬರ್‌ಗಾಗಿ ಕಾಯುತ್ತೇನೆ. ನವರಾತ್ರಿ ಸಮಯದಲ್ಲಿ ತಾಯಿಯನ್ನು ಏನು ಕೇಳಿಕೊಂಡರೂ ನೀಡುತ್ತಾರೆ ಎಂಬ ನಂಬಿಕೆ. ನವರಾತ್ರಿಯ ಒಂಬತ್ತು ದಿನ ಒಂದೊಂದು ತಾಯಿಯ ಅವತಾರಕ್ಕೆ ಪೂಜೆ ಮಾಡುತ್ತೇನೆ. ಜತೆಗೆ ಪ್ರತಿದಿನ ಲಕ್ಷ್ಮೀಪೂಜೆ ಮಾಡುತ್ತೇನೆ. ಮನೆಯಲ್ಲಿ ಗೊಂಬೆಗಳನ್ನಿಟ್ಟು, ಕಳಶವಿಟ್ಟು ಪೂಜಿಸುತ್ತೇನೆ. ಪ್ರತಿದಿನ ಒಂದೊಂದು ಸಿಹಿ ಅಡುಗೆ. ಕೊನೆಯ ದಿನ ವಿಜಯದಶಮಿಯಂದು ಗ್ರಾೃಂಡ್ ಆಗಿ ಪೂಜೆ ಮಾಡುತ್ತೇವೆ' ಎಂದು ಹೇಳಿಕೊಳ್ಳುತ್ತಾರೆ.
ಹೀಗೆ ನವರಾತ್ರಿಯ ಪ್ರತಿದಿನ ಪೂಜೆ ಮಾಡುವ, ದೇವಸ್ಥಾನಕ್ಕೆ ಹೋಗುವುದನ್ನು ರೂಢಿಸಿಕೊಂಡಿರುವ ಅನುಷಾ, ಕಳೆದ ವರ್ಷ ಒಂಬತ್ತು ದಿನ ಉಪವಾಸ ಇದ್ದರಂತೆ. 'ಕಳೆದ ವರ್ಷ ನವರಾತ್ರಿಯ ಒಂಬತ್ತು ದಿನ ಉಪವಾಸವಿದ್ದೆ. ಆದರೆ, ಆರೋಗ್ಯ ಸಮಸ್ಯೆ ಇರುವ ಕಾರಣ ಈ ವರ್ಷ ಉಪವಾಸ ಇಲ್ಲ. ಈ ವಾರ ಮೈಸೂರಿಗೆ ಹೋಗಿ ಚಾಮುಂಡಿ ತಾಯಿಯ ದರ್ಶನ ಮಾಡಲಿದ್ದೇನೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ.