ಮುಂಬೈ: ಬಾಲಿವುಡ್ನ ನಟಿ ಮಂದನಾ ಕರಿಮಿ ಅವರು ಇದೀಗ ಹೊಸ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯ ಚಿತ್ರೀಕರಣ ಹಂತದಲ್ಲಿರುವ ಕೋಕಾ ಕೋಲಾ ಚಿತ್ರದಲ್ಲಿ ಮಂದನಾ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದ ನಿರ್ಮಾಪಕ ಮಹೇಂದ್ರ ಧಾರಿವಾಲ್ರೊಂದಿಗೆ ನಟಿ ವಿವಾದ ಮಾಡಿಕೊಂಡಿದ್ದಾರೆ.
ದೀಪಾವಳಿಯ ಹಿಂದಿನ ದಿನ ಅಂದರೆ ನವೆಂಬರ್ 13ರಂದು ಮಂದನಾ ಅವರು ವ್ಯಾನಿಟಿ ವ್ಯಾನ್ನಲ್ಲಿ ಬಟ್ಟೆ ಬದಲಾಯಿಸುವಾಗ ಮಹೇಂದ್ರಾ ಅವರು ಅನುಮತಿಯಿಲ್ಲದೆಯೇ ಒಳಗೆ ನುಗ್ಗಿದರಂತೆ. ಹಾಗೆ ನುಗ್ಗಿದ ಅವರು ನಟಿಗೆ ಹಿಗ್ಗಾಮುಗ್ಗಾ ಬೈಯಲಾರಂಭಿಸಿದಾರಂತೆ. ಹೀಗೆಂದು ನಟಿ ಆರೋಪ ಮಾಡಿದ್ದಾರೆ.
ನನಗೆ ಅಂದು ಬೇರೊಂದು ಮೀಟಿಂಗ್ ಇತ್ತು. ಆ ಕಾರಣಕ್ಕೆ ಶೂಟಿಂಗ್ಗೆ ಬೇಗ ಹೋಗಿ, ಬೇಗ ವಾಪಾಸಾಗುವ ನಿರ್ಧಾರ ಮಾಡಿದ್ದೆ. ಅದರಂತೆ ಬೇಗ ಹೋದ ನಾನು ಬೇಗ ಹೊರಟೆ. ಮೊದಲಿಗೆ ಅನುಮತಿ ಕೊಟ್ಟ ಮಹೇಂದ್ರ ಅವರು, ನಾನು ಬಟ್ಟೆ ಬದಲಾಯಿಸಲು ವ್ಯಾನಿಟಿ ವ್ಯಾನ್ಗೆ ಹೋದಾಗ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದರು. ಅನುಮತಿ ಕೇಳದೆ ಒಳಗಡೆ ಬಂದು ಬೈಯಲಾರಂಭಿಸಿದರು. ನಾನು ಚಿತ್ರದ ನಿರ್ಮಾಪಕ ನಾನು ಹೇಳಿದಂತೆ ನೀನು ಕೇಳಬೇಕು ಎಂದು ರೇಗಾಡಿದರು ಎಂದು ನಟಿ ದೂರಿದ್ದಾರೆ.
ಆದರೆ ನಿರ್ಮಾಪಕ ಮಹೇಂದ್ರ ಅವರು ಈ ದೂರನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಶೂಟಿಂಗ್ ನಿಗದಿಯಾಗಿತ್ತು. ಮಂದನಾ ಅವರು 7 ಗಂಟೆಗೇ ವಾಪಾಸು ಹೊರಟರು. ಒಂದು ಗಂಟೆ ಇರುವಂತೆ ಕೇಳಿಕೊಂಡೆ. ಆಮೇಲೆ 8 ಗಂಟೆಗೆ ಹೊರಟು ನಿಂತರು. ಆಗಿನ್ನೂ ಶೂಟಿಂಗ್ ಮುಗಿದಿರಲಿಲ್ಲ. ಹಾಡಿನ ಚಿತ್ರೀಕರಣ ಮಾಡುವುದಕ್ಕೆ ಅದು ಕೊನೆಯ ದಿನವಾಗಿತ್ತು. ಅದೇ ಕಾರಣಕ್ಕೆ ಅವರನ್ನು ಕೇಳಿಕೊಂಡೆ. ವ್ಯಾನಿಟಿ ವ್ಯಾನ್ ಒಳಗೆ ಅವರ ಅನುಮತಿಯೊಂದಿಗೇ ಪ್ರವೇಶಿಸಿದ್ದೇನೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)