ಅಂಕಣ

ಹೊಸ ವ್ಯವಸ್ಥೆಯಿಂದ ಪೊಲೀಸ್ ಇಲಾಖೆಗೆ ಬಲ: ಜನಮತ

ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷಾ್ಮತಿಸೂಕ್ಷ್ಮ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆಪರಾಧವನ್ನು ಪತ್ತೆ ಮಾಡಲು ದೇಶದಲ್ಲಿಯೇ ಮೊದಲ ಬಾರಿ ‘ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ’ ಹುದ್ದೆಯನ್ನು ಸೃಷ್ಟಿ ಮಾಡಿರುವ ರಾಜ್ಯ ಸರ್ಕಾರದ ಗೃಹ ಇಲಾಖೆಯ ಕ್ರಮ ರಾಷ್ಟ್ರಕ್ಕೆ ಮಾದರಿ. ಪ್ರಾರಂಭದಲ್ಲಿ 206 ಹುದ್ದೆಗಳನ್ನು ಇಲಾಖೆಯಲ್ಲಿ ಸೃಷ್ಟಿಸಿ, ಅಪರಾಧಿಗಳನ್ನು ಶೀಘ್ರದಲ್ಲಿ ಪತ್ತೆ ಮಾಡಲು ಮೂಲಭೂತವಾಗಿ ಬೇಕಾಗುವ ಕಾರ್ಯಾಚರಣೆ ವ್ಯವಸ್ಥೆ ರೂಪಿಸುತ್ತಿರುವುದು ಸ್ವಾಗತಾರ್ಹ. ಈ ಹಿಂದೆ ಪೊಲೀಸರೇ ಅಪರಾಧ ಕೃತ್ಯದ ತನಿಖೆ/ಪತ್ತೆಯಲ್ಲಿ ಹೈರಣಾಗಬೇಕಾಗಿತ್ತು. ತಾಂತ್ರಿಕ ಅಡಚಣೆಗಳೂ ಬರುತ್ತಿದ್ದವು. ವಿವಿಧ ಒತ್ತಡದ ಕಾರ್ಯದಲ್ಲಿ ಹಲವಾರು ತೊಂದರೆಗಳನ್ನು ಅವರು ಅನುಭವಿಸಬೇಕಾಗಿತ್ತು. ಆದರೆ ಇದೀಗ ಸೃಷ್ಟಿಸಿರುವ ಹುದ್ದೆಗಳು ಅಪರಾಧ ಕೃತ್ಯಗಳ ತನಿಖೆಗೆ ಮೀಸಲಿಟ್ಟು, ಅಪರಾಧ ಹಾಗೂ ಅಪರಾಧಿಗಳನ್ನು ಮಟ್ಟ ಹಾಕಲು ಸಹಕಾರಿಯಾಗಲಿವೆ. ಜನರ ರಕ್ಷಣೆಯಲ್ಲಿ ಗೃಹ, ಪೊಲೀಸ್ ಹಾಗೂ ಕಾನೂನು ಇಲಾಖೆ ಪಾತ್ರ ಮಹತ್ವದ್ದು. ಗೃಹ ಇಲಾಖೆಯ ನೂತನ ವ್ಯವಸ್ಥೆಯಿಂದ ಅಪರಾಧಗಳು ನಿಯಂತ್ರಣವಾಗಿ ಜನರು ನೆಮ್ಮದಿಯಿಂದ ಬದುಕುವಂತಾಗಲಿ. ಜೊತೆಗೆ ಸರ್ಕಾರದ ಚಿಂತನೆಗಳು ಯಶಸ್ವಿಯಾಗಲಿ.

| ಮಹಾಂತೇಶ ರಾಜಗೋಳಿ ಬೈಲಹೊಂಗಲ