ಅಂಕಣ

ಪೂರ್ವ ಪ್ರಾಥಮಿಕ ಶಾಲೆಯೂ, ಶಿಶು ಶಿಕ್ಷಣವೂ...

ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೊನೆಗೂ ಆನ್​ಲೈನ್ ತರಗತಿಗಳು ರದ್ದಾಗಿವೆ. ಈ ಚರ್ಚೆಯ ಹೊತ್ತಲ್ಲಿ ಮಕ್ಕಳ ಕಣ್ಣಿನ ಆರೋಗ್ಯ, ಸ್ಮಾರ್ಟ್​ಫೋನ್ ಹೊಂದಿರದ ಪಾಲಕರು- ಹೀಗೆ ಅನೇಕ ವಿಚಾರಗಳು ಮುನ್ನೆಲೆಗೆ ಬಂದವು. ಅನೇಕರ ಮನದಲ್ಲಿ ಮೂಡುತ್ತಿದ್ದ ಇನ್ನೊಂದು ಪ್ರಶ್ನೆಯೆಂದರೆ, ‘ಹೀಗೆ ಚಿಕ್ಕ ಚಿಕ್ಕ ಮಕ್ಕಳನ್ನು ಕೂರಿಸಿಕೊಂಡು, ಆನ್​ಲೈನ್​ನಲ್ಲಿ ಏನು ಹೇಳಿಕೊಡುತ್ತಾರೆ?’ ಎಂದು.

ಮೊದಲಿಗೆ, ‘ಪೂರ್ವಪ್ರಾಥಮಿಕ ಶಿಕ್ಷಣ’ ಎಂದರೇನು? ಎಂಬ ಬಗ್ಗೆ ಸ್ವಲ್ಪ ವಿಮರ್ಶೆ ಮಾಡೋಣ. ‘ಪ್ರಾಥಮಿಕ’ ಎಂಬ ಶಬ್ದವು ಹೆಸರೇ ಸೂಚಿಸುವಂತೆ ಪ್ರಥಮವಾದ, ಆರಂಭಿಕ ಎಂಬ ಅರ್ಥಗಳನ್ನು ಕೊಟ್ಟರೆ, ಇದರ ಆಂಗ್ಲ ತರ್ಜುಮೆಯಾದ ‘ಪ್ರೖೆಮರಿ’ ಶಬ್ದವು ‘ಬಹುಮುಖ್ಯವಾದ’ ಎಂಬರ್ಥವನ್ನು ಕೊಡುತ್ತದೆ. ಇವೆರಡೂ ಭಾವಗಳಲ್ಲಿ ಸಣ್ಣ ವ್ಯತ್ಯಾಸವಿದ್ದರೂ, ಇವೆರಡೂ ಅರ್ಥಗಳನ್ನು ಸಮನ್ವಯ ಮಾಡಿಕೊಂಡಾಗ ‘ತಳಹದಿಯ, ಅಡಿಪಾಯಸದೃಶವಾದ’ ಎಂಬ ಅರ್ಥಗಳು ಹೊಳೆಯುತ್ತವೆ. ಪ್ರಾಥಮಿಕ ಶಾಲೆಯು ಹೀಗೆ ಮೂಲಭೂತವಾದ ಶಿಕ್ಷಣಕ್ಕಾಗಿ ಇರುವುದಾದರೆ, ಪೂರ್ವಪ್ರಾಥಮಿಕ ಶಾಲೆಯ ಉದ್ದೇಶವೇನು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ವಾಸ್ತವದಲ್ಲಿ, ಕೆಲ ದಶಕಗಳ ಮುಂಚೆ ‘ಪೂರ್ವಪ್ರಾಥಮಿಕ ಶಾಲೆ’ ಎಂಬುದೇ ನಮ್ಮ ದೇಶದಲ್ಲಿ ಇರಲಿಲ್ಲ. ಇದು ಪಶ್ಚಿಮ ದೇಶಗಳಿಂದ ಪ್ರೇರಿತವಾದದ್ದು. ಮಗುವು ಆರನೇ ವಯಸ್ಸಿನಲ್ಲಿ ಒಂದನೇ ತರಗತಿಗೆ ಹೋಗುವ ಮುನ್ನ ಸ್ವಲ್ಪ ಮಟ್ಟಿಗಿನ ಪೂರ್ವ ತಯಾರಿ ಇರಲಿ ಎಂಬ ಉದ್ದೇಶದಿಂದ ಅನೌಪಚಾರಿಕವಾದ ರೀತಿಯಲ್ಲಿ ಪ್ರಾರಂಭವಾದ ಈ ಪೂರ್ವಪ್ರಾಥಮಿಕ ಶಿಕ್ಷಣವು ಇಂದು ಅನಿವಾರ್ಯವಾದ ವ್ಯವಸ್ಥೆ ಎಂಬಂತೆ ಹೆಮ್ಮರವಾಗಿ ಬೆಳೆದಿದೆ. ಹಾಗಾದರೆ, ನಮ್ಮಲ್ಲಿ ಶಿಶುಗಳಿಗಾಗಿ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿತ್ತು? ಅದರ ಸ್ವರೂಪ ಹೇಗಿತ್ತು?

ಭಾರತೀಯ ಶಿಕ್ಷಣ ಪದ್ಧತಿ ವಿಶ್ವದಲ್ಲೇ ಪ್ರಾಚೀನ ಹಾಗೂ ಶ್ರೇಷ್ಠವಾದದ್ದು. ಶಿಕ್ಷಣವಿರಲಿ ಅಥವಾ ಬೌದ್ಧಿಕ-ಮಾನಸಿಕ-ಆಧ್ಯಾತ್ಮಿಕ ವಿಕಾಸದ ವಿಷಯವಿರಲಿ, ನಮ್ಮ ಋಷಿ-ಮನೀಷಿಗಳಿಗಿದ್ದ ಸೂಕ್ಷ್ಮದೃಷ್ಟಿ-ದೂರದೃಷ್ಟಿಗಳು ಅನನ್ಯ. ಪ್ರಾಚೀನ ಕಾಲದಲ್ಲಿ, ಗುರುಕುಲ ಶಿಕ್ಷಣ ಆರಂಭವಾಗುತ್ತಿದ್ದುದು 8ನೇ ವಯಸ್ಸಿನಲ್ಲಿ. ಅದಕ್ಕೂ ಮುಂಚೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಪರಿಪಾಠವೇ ಇರಲಿಲ್ಲ, ಅದಕ್ಕಾಗಿ ಶಾಲೆಗಳೂ ಇರಲಿಲ್ಲ. ಆದರೆ, ಶಿಶುವಿಕಾಸದ ವಿಷಯದಲ್ಲಿ ತಿಳಿವಳಿಕೆಯೂ, ಸ್ಪಷ್ಟತೆಯೂ ಅವಶ್ಯವಾಗಿ ಇತ್ತು. ಇದಕ್ಕಾಗಿ, ಮನೆಗಳೇ ಶಿಶುಗಳ ಶಿಕ್ಷಣ ಕೇಂದ್ರ ಅಥವಾ ‘ಸಂಸ್ಕಾರ ಕೇಂದ್ರ’ಗಳಾಗಿದ್ದವು.

ವಯೋಮಾನಕ್ಕೆ ಅನುಗುಣವಾಗಿ ಶಿಕ್ಷಣದ ಮೂರು ಹಂತಗಳು ಉಪನಿಷತ್ತುಗಳಲ್ಲಿ ಹೇಳಲ್ಪಟ್ಟಿವೆ...

  • ಅಧಿಶೀಲ ಶಿಕ್ಷಣ- ಗರ್ಭಾವಸ್ಥೆಯಿಂದ 5 ವರ್ಷ ವಯಸ್ಸಿನವರೆಗೆ
  • ಅಧಿಚಿತ್ತ ಶಿಕ್ಷಣ- 6ನೇ ವರ್ಷದಿಂದ 15 ವರ್ಷಗಳವರೆಗೆ
  • ಅಧಿಪ್ರಜ್ಞಾ ಶಿಕ್ಷಣ- 16ನೇ ವರ್ಷದಿಂದ ಜೀವನಪರ್ಯಂತ

ಗರ್ಭಾವಸ್ಥೆಯಿಂದ, ಶಿಶುವಿಗೆ ಐದು ವರ್ಷಗಳು ತುಂಬುವವರೆಗೆ ‘ಸಂಸ್ಕಾರಗ್ರಹಣ ಶಕ್ತಿ’ಯು ಬಲವಾಗಿ ಇರುತ್ತದಾದ್ದರಿಂದ, ಈ ವಯಸ್ಸಿನ ಮಕ್ಕಳಿಗೆ ಜೀವನಮೌಲ್ಯಗಳನ್ನು ಕಥೆ, ಶಿಶುಗೀತೆಗಳ ಮೂಲಕ ಹೇಳಿಕೊಡಲಾಗುತ್ತಿತ್ತು. ವಿಶೇಷವಾಗಿ ಅಜ್ಜ-ಅಜ್ಜಿಯರು ಈ ವಿಷಯದಲ್ಲಿ ನಿಷ್ಣಾತರಾಗಿ ಇರುತ್ತಿದ್ದರು. ‘ಲಾಲಯೇತ್ ಪಂಚವರ್ಷಾಣಿ’ ಎಂಬ ಸ್ಮೃತಿವಾಕ್ಯದಂತೆ ಶಿಶುಗಳು ಪ್ರೇಮ ಹಾಗೂ ಸುರಕ್ಷೆಯ ವಾತಾವರಣದಲ್ಲಿ ಬೆಳೆಯುತ್ತಿದ್ದರು. ಶಿಶುವು ಪ್ರತಿಯೊಂದನ್ನೂ ಅನುಕರಣೆಯಿಂದ ಕಲಿಯುತ್ತದೆ ಎಂಬ ಕಾರಣಕ್ಕಾಗಿ ಮನೆಯ ಹಿರಿಯರು ನಡೆ-ನುಡಿಗಳಲ್ಲಿ ಜಾಗರೂಕರಾಗಿ ಇರುತ್ತಿದ್ದರು. ಶ್ಲೋಕಪಠಣ, ಭಜನೆ ಇತ್ಯಾದಿ ದಿನಚರಿಯ ಅಭಿನ್ನ ಅಂಗಗಳಾಗಿ ಇರುತ್ತಿದ್ದವು.

ಅಧಿಶೀಲ ಶಿಕ್ಷಣವು ಗರ್ಭಾವಸ್ಥೆಯಿಂದಲೇ ಪ್ರಾರಂಭ ಆಗುವುದರಿಂದ, ದಂಪತಿ ಮೊದಲು ತಾವು ತಪಶ್ಚರ್ಯುಯನ್ನು ಕೈಗೊಳ್ಳುತ್ತಿದ್ದರು. ಮುಂದೆ ಜನಿಸುವ ಶಿಶು ತೇಜಸ್ವಿಯಾಗಿದ್ದು ಉತ್ತಮ ವ್ಯಕ್ತಿತ್ವವನ್ನು ಹೊಂದಿರಲಿ ಎಂಬ ಉದ್ದೇಶದಿಂದ ತಮ್ಮಲ್ಲಿ ಇರುವ ದೋಷಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಶ್ರಮಿಸುತ್ತಿದ್ದರು. ಹೀಗೆ ಶ್ರೇಷ್ಠ ಸಂತಾನವನ್ನು ಪಡೆಯಲು ದಂಪತಿ ಅದರಲ್ಲೂ ವಿಶೇಷವಾಗಿ ತಾಯಂದಿರು ತಪಶ್ಚರ್ಯು ಕೈಗೊಳ್ಳುತ್ತಿದ್ದುದು ಪುರಾಣ ಕಥೆಗಳಿಂದಲೂ (ಉದಾಹರಣೆ: ಕಯಾದು-ಪ್ರಹ್ಲಾದ), ಈ ಸಹಸ್ರಮಾನದ ಕೆಲವು ಐತಿಹಾಸಿಕ ಮಹಾಪುರಷರ/ಮಹಾಮಹಿಳೆಯರ ಜೀವನಚರಿತ್ರೆಯಿಂದಲೂ ತಿಳಿದು ಬರುತ್ತದೆ. ಶಿವಾಜಿ, ಸ್ವಾಮಿ ವಿವೇಕಾನಂದ, ರಾಣಿ ಅಹಲ್ಯಾಬಾಯಿ ಇವರೆಲ್ಲ ಈ ಸಾಲಿಗೆ ಸೇರಿದವರು.

6 ರಿಂದ 15 ವರ್ಷಗಳವರೆಗಿನ ‘ಅಧಿಚಿತ್ತ ಶಿಕ್ಷಣ’ದಲ್ಲಿ ಬೌದ್ಧಿಕ ವಿಕಾಸಕ್ಕೆ ಒತ್ತು. ಈ ಹಂತದಲ್ಲಿ ಔಪಚಾರಿಕ ಪಾಠ-ಪ್ರವಚನಗಳು, ಕಂಠಸ್ಥೀಕರಣ ನಡೆಯುತ್ತಿದ್ದವು. ಇದರಲ್ಲಿ ಕಲಿಕೆ ಹಾಗೂ ಕೌಶಲಾಭಿವೃದ್ಧಿಗಳೇ ಪ್ರಧಾನ. 16 ವರ್ಷ ವಯಸ್ಸಿನಿಂದ ಜೀವನದುದ್ದಕ್ಕೂ ನಡೆಯುವ ‘ಅಧಿಪ್ರಜ್ಞಾ ಶಿಕ್ಷಣ’ದಲ್ಲಿ ಸ್ವಾಧ್ಯಾಯ ಮತ್ತು ಅನುಭವದಿಂದ ಜ್ಞಾನವಿಕಾಸ, ವ್ಯಕ್ತಿತ್ವ ವಿಕಾಸದ ಯೋಜನೆ ಮಾಡಲ್ಪಟ್ಟಿತ್ತು. ಒಟ್ಟಿನಲ್ಲಿ, ಈ ಮೂರೂ ರೀತಿಯ ಶಿಕ್ಷಣ ಕ್ರಮವನ್ನು ಗಮನಿಸಿದಾಗ ಕಾಣುವ ಸಾಮಾನ್ಯ ಅಂಶವೆಂದರೆ, ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ, ಜೀವನದ ಉನ್ನತೀಕರಣಕ್ಕೆ ಪ್ರಾಮುಖ್ಯ ನೀಡಲಾಗುತ್ತಿತ್ತೇ ಹೊರತು, ಯಾವುದೇ ಹಂತದಲ್ಲೂ ಶಿಕ್ಷಣವನ್ನು ಯಾವುದಾದರೊಂದು ನೌಕರಿಯೊಂದಿಗೆ ಗಂಟು ಹಾಕುವ ಪದ್ಧತಿ ಇರಲೇ ಇಲ್ಲ ಎಂಬುದು. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಪ್ರಜ್ವಲ್​ ಜತೆಗಿನ ಕೊನೇ ವಾಟ್ಸ್​ಆ್ಯಪ್​ ಚಾಟ್​: ಈಡೇರಲೇ ಇಲ್ಲ ಚಿರು ಬಯಕೆ

ಶಿಶುವಿನ ಅನೌಪಚಾರಿಕ ಶಿಕ್ಷಣ: ಶಿಶು ಶಿಕ್ಷಣ ಎಂದೂ ಔಪಚಾರಿಕವಾಗಿ ಇರಬಾರದು ಎಂಬ ನಿಯಮವಿದೆ. ಕುಟುಂಬ ಸದಸ್ಯರ ನಡುವೆ ಆನಂದದಿಂದ ಕಾಲಯಾಪನೆ ಮಾಡುವ ಶಿಶು ಅನೇಕ ವಿಷಯಗಳನ್ನು ಸಹಜವಾಗಿಯೇ ಕಲಿಯುತ್ತದೆ. ಉದಾಹರಣೆಗೆ, ಶಾಲೆಯಲ್ಲಿ ಮಕ್ಕಳಿಗೆ 1, 2, 3, 4... ಎಂದು ಬಾಯಿಪಾಠ ಮಾಡಿಸಲಾಗುತ್ತದೆ. ಮಕ್ಕಳಿಗೆ ಹೀಗೆಂದರೇನು ಎಂಬುದೇ ಗೊತ್ತಿರುವುದಿಲ್ಲ. ಅಲ್ಲದೆ, 1ರ ನಂತರವೇ 2, 2ರ ನಂತರವೇ 3 ಏಕೆ ಬರುತ್ತದೆ ಎಂಬುದೂ ಗೊತ್ತಾಗುವುದಿಲ್ಲ. ಇದನ್ನೇ ಮಕ್ಕಳು ಅನೌಪಚಾರಿಕವಾಗಿ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತ ಕಲಿಯಬಲ್ಲರು. ಒಂದು ದಿನ 2 ಬೆಕ್ಕಿನ ಮರಿಗಳನ್ನು ನೋಡಿದ ಶಿಶುವು, ಮಾರನೆಯ ದಿನ ಮೂರು ಬೆಕ್ಕಿನ ಮರಿಗಳನ್ನು ನೋಡುತ್ತದೆ ಎಂದುಕೊಳ್ಳೋಣ. ಆಗ, ತನ್ನ ಜೊತೆಯಲ್ಲಿ ಇರುವ ಅಮ್ಮನಿಂದಲೋ, ಅಜ್ಜನಿಂದಲೋ 2 ಹಾಗೂ 3- ಇವು ಏನನ್ನು ಸೂಚಿಸುತ್ತವೆ ಎಂಬುದನ್ನು ನಿಧಾನವಾಗಿ ಗ್ರಹಿಸುತ್ತ ಹೋಗುತ್ತದೆ. ಅಲ್ಲದೆ ಈ ರೀತಿಯ ಕಲಿಕೆ ಶಿಶುವಿಗೆ ಮುದ ನೀಡುತ್ತದೆ. ಹಾಗಾಗಿ, ಬಾಲ್ಯದಲ್ಲಿ ಶಿಶುವು ಪ್ರಕೃತಿಯೊಡನೆ ಹೆಚ್ಚು ಹೆಚ್ಚು ಸಂಪರ್ಕ ಹೊಂದಿರಬೇಕು.

ಆಂಗ್ಲಭಾಷಾ ಕಲಿಕೆಯನ್ನು ಬಹಳ ಮುಖ್ಯ ಎಂಬಂತೆ ಪೂರ್ವಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಹೇರುತ್ತಿರುವುದು ದುರದೃಷ್ಟವೇ ಸರಿ. ಇಂದು ಪಾಲಕರೂ ಈ ನಿಟ್ಟಿನಲ್ಲಿ ಹೆಚ್ಚು ಜಾಗರೂಕರಾಗಿರುವ ಅವಶ್ಯಕತೆಯಿದೆ. ಪಾಲಕರ ಸಮಯ ಅಭಾವದಿಂದ ಶಿಶುವಿಹಾರವು ಅನಿವಾರ್ಯ ಎಂಬಂಥ ಸ್ಥಿತಿ ನಿರ್ವಣವಾಗಿದೆ. ಇಂಥ ಸನ್ನಿವೇಶದಲ್ಲಿ, ಶೈಶವಾವಸ್ಥೆಗೆ ಸರಿಹೊಂದುವಂಥ, ಮನೋವೈಜ್ಞಾನಿಕವಾಗಿಯೂ ಸಮ್ಮತವಾಗಿರುವ ಸಂಸ್ಕಾರವನ್ನೂ ನೀಡುವ ಪದ್ಧತಿಯೊಂದನ್ನು ರೂಪಿಸುವ ಆವಶ್ಯಕತೆ ಇದೆ. ಪುಸ್ತಕ, ಚೀಲ, ಗೃಹಪಾಠ, ಪರೀಕ್ಷೆಗಳಂಥ ಬಂಧನದಿಂದ ಹೊರ ಬಂದು ಆನಂದದಿಂದ ಬಾಲ್ಯವನ್ನು ಕಳೆಯುವಂತೆ ಮಕ್ಕಳಿಗೆ ಅನುವು ಮಾಡಿಕೊಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೂ ಇದೆ. ಇದನ್ನೂ ಓದಿ: ರೈತರ ಹಿತದೃಷ್ಟಿಯಿಂದ ಶ್ರೀನಿವಾಸಪುರದಲ್ಲಿ ಮಾವು ವಹಿವಾಟು ಆರಂಭ

ಬಾಲ್ಯವನ್ನು ಸ್ವತಃ ಪ್ರೀತಿ-ಆನಂದದಿಂದ ಕಳೆಯದ ಮಕ್ಕಳು ಇನ್ನೊಬ್ಬರಿಗೆ ಏನನ್ನು ತಾನೇ ನೀಡಿಯಾವು? ‘ಮಕ್ಕಳನ್ನು ಸ್ವಲ್ಪ ಸ್ವಚ್ಛಂದವಾಗಿ ಆಡಲು ಬಿಡಿ, ಇಲ್ಲವಾದರೆ ಅವರ ಮನಸ್ಸು ಮುದುಡಿ ಹೋಗುತ್ತದೆ’ ಎಂದು ಅನೇಕ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಹಾಗಾಗಿ ಪ್ರೀತಿ, ಪ್ರೇಮ, ಆನಂದ, ಸಂಸ್ಕಾರ, ಅನೌಪಚಾರಿಕ ಕಲಿಕೆ- ಇವೆಲ್ಲವನ್ನೂ ಗಮನದಲ್ಲಿರಿಸಿ ಶಿಶುವಿಕಾಸ ಪದ್ಧತಿಯನ್ನು ರೂಪಿಸಬೇಕು.

ಈ ಕಾರ್ಯ ಈಗಾಗಲೇ ಆರಂಭವಾಗಿದೆ. ಶಿಕ್ಷಣದಲ್ಲಿ ಭಾರತೀಯತೆಯನ್ನು ತರಲು ಕೆಲಸ ಮಾಡುತ್ತಿರುವ ವಿದ್ಯಾಭಾರತಿ ಅಖಿಲಭಾರತ ಶಿಕ್ಷಾ ಸಂಸ್ಥಾನವು ಮಕ್ಕಳಿಗಾಗಿ ‘ಶಿಶುವಾಟಿಕಾ’ ಎಂಬ ಶಿಶು ಶಿಕ್ಷಣ ಪದ್ಧತಿಯನ್ನು ಸಮಾಜಕ್ಕೆ ನೀಡಿದೆ. ‘ವಾಟಿಕಾ’ ಎಂದರೆ ಶಿಶುವು ಆಡುತ್ತ, ಕುಣಿಯುತ್ತ, ಹಾಡುತ್ತ, ನಗುತ್ತ ವಿಕಾಸವನ್ನು ಹೊಂದುವಂಥ ವಿಹಾರದ ಸ್ಥಳ.

ವ್ಯಕ್ತಿತ್ವದ ಸರ್ವಾಂಗೀಣ ವಿಕಾಸ: ಶಿಶುವು ಆಟೋಟ, ಹಾಡು, ನೃತ್ಯ, ಬರವಣಿಗೆ-ಮುಂತಾದ ಎಲ್ಲ ವಿಷಯಗಳಲ್ಲೂ ಮುಂದಿದ್ದು, ಬಹುಮಾನ ಗಿಟ್ಟಿಸುವ ಕ್ಷಮತೆ ಹೊಂದಿದ್ದರೆ ಶಿಶುವಿನ ‘ವ್ಯಕ್ತಿತ್ವದ ಸರ್ವಾಂಗೀಣ ವಿಕಾಸವಾಗುತ್ತಿದೆ’ ಎಂಬ ತಪ್ಪುಕಲ್ಪನೆ ಅನೇಕರಿಗಿದೆ. ಹಾಗಾದರೆ, ವ್ಯಕ್ತಿತ್ವವಿಕಾಸವೆಂದರೆ ಇಷ್ಟೆಯೇ? ಖಂಡಿತ ಅಲ್ಲ. ಭಾರತೀಯ ಶಿಕ್ಷಣ ಪದ್ಧತಿಗೆ ಉಪನಿಷತ್ತುಗಳೇ ಆಧಾರ. ಇದರಲ್ಲಿ ಪಂಚಕೋಶಾತ್ಮಕ ವ್ಯಕ್ತಿತ್ವವು ವರ್ಣಿಸಲ್ಪಟ್ಟಿದೆ. ಪಂಚಕೋಶಗಳು ಹಾಗೂ ಅವುಗಳ ವಿಕಾಸದ ಕಾರಕ ತತ್ತ್ವಗಳನ್ನು ಸ್ಥೂಲವಾಗಿ ಹೀಗೆ ಹೇಳಬಹುದು. ಇದನ್ನೂ ಓದಿ: ಅನಿಸಿಕೆ: ಆತ್ಮನಿರ್ಭರ ಭಾರತಕ್ಕಾಗಿ ದೃಢಹೆಜ್ಜೆ

ಅನ್ನಮಯ ಕೋಶ: ಶರೀರದ ಆರೋಗ್ಯ ರಕ್ಷಣೆ, ಸೂಕ್ತ ಆಹಾರ ಸೇವನೆ, ಶರೀರವನ್ನು ಸದೃಢಗೊಳಿಸಲು ಆಟ, ವ್ಯಾಯಾಮ ಇತ್ಯಾದಿಗಳ ಕಡೆ ಗಮನ ನೀಡಲಾಗುತ್ತದೆ.

ಪ್ರಾಣಮಯ ಕೋಶ: ಪ್ರಾಣವೆಂದರೆ ಉಸಿರು. ಇದರ ವಿಕಾಸಕ್ಕಾಗಿ ಮಕ್ಕಳಿಗೆ ಸರಿಯಾದ ಉಸಿರಾಟದ ಕ್ರಮವನ್ನು ಹೇಳಿಕೊಡಬೇಕು. ಇದರಿಂದ ಶರೀರವು ಚೈತನ್ಯದಿಂದ ಕೂಡಿರುತ್ತದೆ.

ಮನೋಮಯ ಕೋಶ: ಮನಸ್ಸಿನ ಮೂಲಸ್ವಭಾವವೇ ಚಾಂಚಲ್ಯ. ಮನಸ್ಸನ್ನು ಶಾಂತ ಹಾಗೂ ಏಕಾಗ್ರಗೊಳಿಸಲು ಶಿಶುಗಳಿಗೆ ಯೋಗಾಭ್ಯಾಸ ಹಾಗೂ ಕೆಲವು ಚಟುವಟಿಕೆಗಳನ್ನು ಮಾಡಿಸುವುದು.

ವಿಜ್ಞಾನಮಯ ಕೋಶ: ಇದು ಬುದ್ಧಿಗೆ ಸಂಬಂಧಿಸಿದ ಕೋಶ. ಮನಸ್ಸು ದ್ವಂದ್ವಗಳ ಗೂಡಾಗಿದ್ದರೆ, ಬುದ್ಧಿ ನಿಶ್ಚಯಾತ್ಮಕವಾದದ್ದು. ಸರಿ-ತಪ್ಪುಗಳ ವಿವೇಕ, ತರ್ಕಶಕ್ತಿಯ ವಿಕಾಸ ಈ ಕೋಶಕ್ಕೆ ಸಂಬಂಧಿಸಿದವು. ಇದಕ್ಕನುಗುಣವಾಗಿ ಅನೇಕ ಚಟುವಟಿಕೆಗಳನ್ನು ರೂಪಿಸಲಾಗಿದೆ.

ಆನಂದಮಯ ಕೋಶ: ಇದನ್ನೇ ‘ಚಿತ್ತ’ವೆಂದೂ ಹೇಳಲಾಗುತ್ತದೆ. ಇದರ ತುಂಬೆಲ್ಲ ಇರುವುದೇ ಆನಂದ ಹಾಗೂ ಈ ಆನಂದವು ಯಾವುದೇ ವಸ್ತು, ವ್ಯಕ್ತಿಯ ಮೇಲೆ ಅವಲಂಬಿತವಾದದ್ದಲ್ಲ. ಇದು ಸಹಜ ಆನಂದ. ಸಹಜವಾದ ಆನಂದವನ್ನು ಹೊಂದುವ ಕೌಶಲ ಮಕ್ಕಳಲ್ಲಿ ಸ್ವಾಭಾವಿಕವಾಗೇ ಇರುತ್ತದೆ. ಇದನ್ನು ವಿಕಾಸಗೊಳಿಸಲು ಹಾಗೂ ಸ್ಥಾಯಿಯಾಗಿಸಲು ತ್ಯಾಗ, ಸೇವೆ, ನಿರಪೇಕ್ಷ ಭಾವದಿಂದ ಮಾಡುವ ಕೆಲಸ ಇವುಗಳನ್ನು ಮಕ್ಕಳಿಗೆ ಅಭ್ಯಾಸ ಮಾಡಿಸುವುದು. ಈ ಮೇಲಿನ 4 ಕೋಶಗಳ ವಿಕಾಸವು ಆನಂದಮಯ ಕೋಶದ ವಿಕಾಸಕ್ಕೆ ಸುಲಭದ ಮೆಟ್ಟಿಲಾಗುತ್ತದೆ. ಇದನ್ನೂ ಓದಿ: ಅನಿಸಿಕೆ: ಕೈಗಾರಿಕೆಗಳನ್ನು ಸೆಳೆಯಲು ಈಗ ಸುಸಮಯ

ಈ ಪಂಚಕೋಶಾತ್ಮಕ ವಿಕಾಸವು ಒಬ್ಬ ವ್ಯಕ್ತಿಯ ವೈಯಕ್ತಿಕ ಸ್ತರದಲ್ಲಿ ಆಗುವ ವಿಕಾಸವಾದರೆ, ವ್ಯಕ್ತಿತ್ವ ವಿಕಾಸದ ಇನ್ನೊಂದು ಆಯಾಮವೂ ಶಿಶು ಶಿಕ್ಷಣದಲ್ಲಿ ಪ್ರಮುಖವೆನಿಸಿದೆ. ಅದೆಂದರೆ ವ್ಯಷ್ಟಿಯಿಂದ ಪರಮೇಷ್ಟಿಯ ಕಡೆಗಿನ ವಿಕಾಸ. ಈ ಪ್ರಕ್ರಿಯೆಯಲ್ಲಿ ಶಿಶು ತನ್ನನ್ನು ಮಾತ್ರ ಮುಖ್ಯವೆಂದು ಪರಿಗಣಿಸದೆ ಕುಟುಂಬ-ಸಮಾಜ-ರಾಷ್ಟ್ರ- ವಿಶ್ವ-ಸಂಪೂರ್ಣ ಸೃಷ್ಟಿ ಹಾಗೂ ಕೊನೆಯಲ್ಲಿ ಪರಮೇಷ್ಟಿ-ಇವೆಲ್ಲವೂ ನನ್ನವೇ ಅಥವಾ ನಾನು ಇವೆಲ್ಲವುಗಳಿಗೂ ಸೇರಿದವನು ಎಂಬಂಥ ‘ಏಕಾತ್ಮಭಾವ’ವನ್ನು ಹೊಂದುತ್ತ ಈ ಪ್ರಕ್ರಿಯೆ ವಿಕಾಸ ಹೊಂದುತ್ತದೆ.

ಈ ಕೊವಿಡ್-19 ಸಂದರ್ಭವು ಗಂಗಾನದಿಯನ್ನು ನಿರ್ಮಲಗೊಳಿಸಿದಂತೆಯೇ, ಶಿಶು ಶಿಕ್ಷಣದ ವಿಷಯದಲ್ಲೂ ಚಮತ್ಕಾರಿಕ ಬದಲಾವಣೆಗಳನ್ನು ತರಲಿ ಎಂಬ ಆಶಯ.

(ಲೇಖಕರು ವಿದ್ಯಾಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷರು)