‘ರಾಜಕಾರಣವೆಂಬುದು ಫಟಿಂಗನ ಕೊನೆಯ ನಿಲ್ದಾಣ’ ಎಂಬ ಜಾರ್ಜ್ ಬರ್ನಾಡ್ ಷಾ ಮಾತು ಬಹುಪರಿಚಿತವಷ್ಟೇ ಅಲ್ಲ, ರಾಜಕಾರಣದ ಇಮೇಜನ್ನು ಬಿಂಬಿಸುವ ಪದ ಕೂಡ. ಹೀಗಾಗಿಯೇ, ಸಭ್ಯರು ಎನಿಸಿಕೊಂಡವರು ರಾಜಕೀಯದ ಕನಸನ್ನು ಕಾಣುವುದಕ್ಕೂ ಹಿಂಜರಿಯುವ ಪರಿಸ್ಥಿತಿ ಇದೆ. ಹೀಗಿದ್ದರೂ, ಪ್ರತಿ ಸಲ ವಿಧಾನಸಭಾ ಚುನಾವಣೆಯಿರಲಿ, ಲೋಕಸಭಾ ಚುನಾವಣೆಯಿರಲಿ, ಕೊನೆಗೆ ಪಂಚಾಯತ ಚುನಾವಣೆಯೇ ಇರಲಿ, ಟಿಕೆಟ್ಗಾಗಿ ನೂಕುನುಗ್ಗಲೇ ಕಂಡುಬರುತ್ತದೆ. ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕೆ ಮೊದಲೇ ಆಕಾಂಕ್ಷಿಗಳ ದಂಡು ತಂತಮ್ಮ ಪಕ್ಷಗಳ ನಾಯಕರ ಸುತ್ತ ಸುತ್ತುತ್ತದೆ; ಬೇರೆ ಬೇರೆ ಕಡೆಗಳಿಂದ ಲಾಬಿ ನಡೆಸುತ್ತಾರೆ; ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ಸಹ ಪಕ್ಷದ ಕಚೇರಿ ಮುಂದೆ ಬಲಪ್ರದರ್ಶನ ಮಾಡುತ್ತಾರೆ. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಹ ಇದೇ ತುರುಸು ಕಂಡುಬಂತು. ಆಕಾಂಕ್ಷಿಗಳು ಬಗೆಬಗೆಯಾಗಿ ವರಸೆಗಳನ್ನು ತೋರಿದರು. ಅನೇಕರು ತಮಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು, ದಶಕಗಳಿಂದ ಇದ್ದ ಪಕ್ಷ ತ್ಯಜಿಸಿ ಬೇರೆ ಪಕ್ಷವನ್ನೇ ಸೇರಿದರು. ಹಾಗಾದರೆ, ರಾಜಕಾರಣದ ಬಗ್ಗೆ ಜನಮಾನಸದಲ್ಲಿ ನೆಗೆಟಿವ್ ಇಮೇಜ್ ಇದ್ದರು ಸಹ ಈ ಪರಿ ಸ್ಪರ್ಧೆ ಏಕೆ ಎಂಬುದನ್ನು ಯಾರಿಗೂ ಬಿಡಿಸಿ ಹೇಳಬೇಕಿಲ್ಲ ಬಿಡಿ; ಅಂಗೈ ಹುಣ್ಣಿಗೆ ಕನ್ನಡಿ ಏಕೆ, ಅಲ್ಲವೆ?
ಇದನ್ನೂ ಓದಿ: ಮಕ್ಕಳಿರಲವ್ವ ಮನೆತುಂಬ.. ಏನಂತಿಯವ್ವ…
ಇದೇನೇ ಇದ್ದರೂ, ಜನಪ್ರತಿನಿಧಿಗಳಾಗಲು ಈ ಪಾಟಿ ಪೈಪೋಟಿ ಇರುವುದು ನನ್ನ ಪ್ರಕಾರ, ಒಂದು ಸಕಾರಾತ್ಮಕ ಬೆಳವಣಿಗೆಯೇ ಸರಿ. ಒಂದೊಮ್ಮೆ ಚುನಾವಣಾ ಸ್ಪರ್ಧೆಗೆ ಯಾರದೂ ಪೈಪೋಟಿಯೇ ಇಲ್ಲ ಎಂದುಕೊಳ್ಳೋಣ. ಆಗ ಏನಾಗುತ್ತದೆ? ಏಕಮೇವ ಆಕಾಂಕ್ಷಿಯಿದ್ದಲ್ಲಿ, ಸಂಬಂಧಿಸಿದ ಪಕ್ಷ ಅನಿವಾರ್ಯವಾಗಿ ಆತನಿಗೇ ಟಿಕೆಟ್ ನೀಡಿ ಕಣಕ್ಕಿಳಿಸಬೇಕಾಗುತ್ತದೆ. ಅದರ ಬದಲು, ಹೆಚ್ಚು ಆಕಾಂಕ್ಷಿಗಳಿದ್ದಲ್ಲಿ, ಪಕ್ಷಕ್ಕೂ ಆಯ್ಕೆಗಳಿರುತ್ತವೆ; ಸೋಸಿ ಜರಡಿ ಹಿಡಿಯಲು ಅವಕಾಶವಾಗುತ್ತದೆ. ಆದರೆ ಸಮಸ್ಯೆ ಇರುವುದು ಎಲ್ಲಿ ಎಂದರೆ, ನಮ್ಮ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸುವ ಮಾನದಂಡದಲ್ಲಿ. ಹಣಬಲ, ಜಾತಿಬಲ, ಗೆಲ್ಲುವ ಸಾಮರ್ಥ್ಯ- ಈ ಅಂಶಗಳೇ ಪ್ರಮುಖವಾದುದರಿಂದ ಅಭ್ಯರ್ಥಿಯ ಅರ್ಹತೆ, ಹಿನ್ನೆಲೆ ಇತ್ಯಾದಿಗಳೆಲ್ಲ ಗೌಣ. ಇದಕ್ಕೆ ಅಪವಾದ ಎಂಬಂತೆ, ಆರ್ಥಿಕ ಬಲ ಅಥವಾ ಜಾತಿಬಲ ಇಲ್ಲದವರಿಗೂ ಟಿಕೆಟ್ ನೀಡುವುದಿದೆಯಾದರೂ, ಗಮನಾರ್ಹ ಪ್ರಮಾಣದಲ್ಲೇನಿಲ್ಲ.
ರಾಜಕೀಯ ರಂಗ ತುಸುವಾದರೂ ಶುದ್ಧೀಕರಣವಾಗಬೇಕಾದಲ್ಲಿ ಇತರ ಕ್ಷೇತ್ರದವರು ಸಹ ಇಲ್ಲಿಗೆ ಬರಬೇಕು; ಸಕ್ರಿಯರಾಗಬೇಕು; ಚುನಾವಣೆಗಳಲ್ಲಿ ಸ್ಪರ್ಧಿಸಬೇಕು ಎಂಬ ವಾದ ಇರುವುದು ಇದೇ ಕಾರಣಕ್ಕೆ. ಇಲ್ಲಿ ಮತದಾರರ ಮನಸ್ಥಿತಿ ಕೂಡ ಮುಖ್ಯವಾಗುತ್ತದೆ; ಸಿದ್ಧಸೂತ್ರದ ಲೆಕ್ಕಾಚಾರವನ್ನು ಬದಿಗಿಟ್ಟು ಅವರು ಮತಚಲಾಯಿಸಬೇಕಾಗುತ್ತದೆ. ಇದೇ ವಾದವನ್ನು ಆಡಳಿತಕ್ಕೂ ಅನ್ವಯಿಸಿ, ರಾಜಕೀಯೇತರರನ್ನು ಸರ್ಕಾರದ ಆಯಕಟ್ಟಿನ ಸ್ಥಾನಕ್ಕೆ ತಂದ ನಿದರ್ಶನಗಳನ್ನು ಅಲ್ಲಲ್ಲಿ ಕಾಣಬಹುದು. ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನ್ ಸಿಂಗ್ ಇದಕ್ಕೊಂದು ಉತ್ತಮ ಉದಾಹರಣೆ. ಅವರ ಆಡಳಿತಶೈಲಿ-ನೀತಿನಿರ್ಧಾರಗಳ ಬಗ್ಗೆ ಅಭಿಪ್ರಾಯಭೇದಗಳು ಇರುವುದು ಬೇರೆ ವಿಚಾರ. ಹಾಗೇ ಈಗ ಮೋದಿ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿರುವ ಎಸ್. ಜೈಶಂಕರ್. ಐಎಫ್ಎಸ್ ಅಧಿಕಾರಿಯಾದ ಅವರು ಹಿಂದೆ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು. ಪ್ರಧಾನಿ ಮೋದಿಯವರು ಜೈಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ವಿದೇಶಾಂಗ ರಂಗದಲ್ಲಿನ ಅವರ ಅನುಭವ, ಪರಿಣತಿ ಅನಾವರಣಕ್ಕೆ ವೇದಿಕೆ ಒದಗಿಸಿದರು. ಜೈಶಂಕರ್ ಸಹ ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡು, ಜಾಗತಿಕ ವೇದಿಕೆಗಳಲ್ಲಿ ಭಾರತದ ನೀತಿನಿಲುವುಗಳನ್ನು ಸಮರ್ಥವಾಗಿ ಪ್ರತಿಪಾದಿಸುವ ಜತೆಗೆ, ವಿವಿಧ ದೇಶಗಳ ಜತೆಗೆ ಭಾರತದ ದ್ವಿಪಕ್ಷೀಯ ಸಂಬಂಧಗಳ ವಿಚಾರದಲ್ಲೂ ಕಾರ್ಯತಂತ್ರ ಚಾತುರ್ಯ ಪ್ರದರ್ಶಿಸುತ್ತಿದ್ದಾರೆ. ಹಾಗಂತ ಎಲ್ಲರೂ ಇಂಥ ಕೆಲಸದಲ್ಲಿ ಸೈ ಎನಿಸಿಬಿಡುತ್ತಾರೆ ಎಂದೇನಿಲ್ಲ. ಏಕೆಂದರೆ, ಆಡಳಿತವೆಂಬುದು ಅನೇಕ ಹೊಂದಾಣಿಕೆಗಳ, ಕ್ಲಿಷ್ಟಕರವಾದ ಮುಳ್ಳಿನ ಹಾದಿ ಸಹ ಹೌದು.
ರಾಜಕೀಯದಲ್ಲಿ giant-killer ಎಂಬ ಪದ ಸಹ ಇದೆ. ದೈತ್ಯಸಂಹಾರಿ ಎನ್ನಬಹುದು. ಹಾಗೆನೋಡಿದರೆ, ರಾಜಕೀಯ ಮಾತ್ರವಲ್ಲ, ಕ್ರೀಡೆ ಮತ್ತಿತರ ರಂಗಕ್ಕೂ ಈ ಪದವನ್ನು ಲಗತ್ತಿಸಬಹುದು. ಅದುವರೆಗೆ ಅಷ್ಟು ಪರಿಚಯವಿರದ ವ್ಯಕ್ತಿ, ರಾಜಕಾರಣದಲ್ಲಿ ಅಥವಾ ಕ್ರೀಡೆಯಲ್ಲಿ ಅದಾಗಲೇ ಭರ್ಜರಿ ಹೆಸರುಮಾಡಿದ ವ್ಯಕ್ತಿಯನ್ನು ಅಚ್ಚರಿಯ ರೀತಿಯಲ್ಲಿ ಸೋಲಿಸುವುದು ಎಂದರ್ಥ. giant-kille ಪ್ರಸ್ತಾಪ ಬಂದಾಗ ಜಾರ್ಜ್ ಫರ್ನಾಂಡಿಸ್ ಹೆಸರು ಸುಳಿದಾಡುತ್ತದೆ. ಭಾರತದ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ ಈ ನಾಯಕ ನಮ್ಮ ಮಂಗಳೂರು ಮೂಲದವರು. ಜೀವನದ ಓಟದಲ್ಲಿ ಮುಂಬಯಿಗೆ ಬಂದ ಅವರು, ಕ್ರಮೇಣ ಕಾರ್ವಿುಕ ನಾಯಕರಾಗಿ ಬೆಳೆದರು. ಎಷ್ಟರಮಟ್ಟಿಗೆಂದರೆ, ಒಂದು ಕಾಲದಲ್ಲಿ ಜಾರ್ಜ್ ಕರೆ ನೀಡಿದರೆಂದರೆ, ಇಡೀ ಮುಂಬಯಿ ಸ್ತಬ್ಧವಾಗುತ್ತಿತ್ತಂತೆ. ಕ್ರಮೇಣ ರಾಜಕೀಯ ರಂಗದತ್ತ ವಾಲಿದ ಅವರು, 1967ರಲ್ಲಿ ಸಂಯುಕ್ತ ಸೋಷಲಿಸ್ಟ್ ಪಕ್ಷದ ವತಿಯಿಂದ ಮುಂಬಯಿ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಅವರ ಎದುರಾಳಿಯಾಗಿದ್ದವರು ಸಾಮಾನ್ಯರಲ್ಲ, ಮುಂಚೂಣಿ ಕಾಂಗ್ರೆಸ್ ನಾಯಕರಲ್ಲೊಬ್ಬರಾದ ಸದಾಶಿವ ಕಾನೋಜಿ ಪಾಟೀಲ್ (ಎಸ್.ಕೆ.ಪಾಟೀಲ್). ಅವರು ಆ ಕಾಲಕ್ಕೆ ಎಂಥ ಪ್ರಚಂಡರೆಂದರೆ, ಅವರನ್ನು ‘ಮುಂಬಯಿಯ ಅನಭಿಷಕ್ತ ದೊರೆ’ಎಂದೇ ಕರೆಯಲಾಗುತ್ತಿತ್ತು. ಮೂರು ಸಲ ಮುಂಬಯಿ ಮೇಯರ್ ಆಗಿದ್ದರು. ಇಂಥವರ ಎದುರು ಜಾರ್ಜ್ ನಿಂತಾಗ, ಇದು ಒಮ್ಮುಖ ಚುನಾವಣೆ ಎಂದು ಭಾವಿಸಿದವರೇ ಹೆಚ್ಚು. ಆದರೆ ಫಲಿತಾಂಶ ಬಂದಾಗ ಎಲ್ಲರ ಲೆಕ್ಕ ಉಲ್ಟಾ. ಆಗಲೇ "George the giant-killer' ಎಂಬ ಪದ ಠಂಕಿಸಿದ್ದು.
ಇದನ್ನೂ ಓದಿ: ಮನದೊಳಗಣ ಯುದ್ಧ ಗೆದ್ದವನು ಆಗುವನು ಬುದ್ಧ!
ಇದೇ ಜಾರ್ಜ್ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದ ಪ್ರಮುಖರಲ್ಲಿ ಸಹ ಒಬ್ಬರು. ಇಂದಿರಾ ಗಾಂಧಿಯವರಿಗೆ ಇವರು ತಂದಿಟ್ಟ ತಲೆನೋವು ಅಷ್ಟಿಷ್ಟಲ್ಲ. ಬರೋಡಾ ಡೈನಮೈಟ್ ಕೇಸಿನಲ್ಲಿ (ತುರ್ತ ಪರಿಸ್ಥಿತಿ ವಿರೋಧಿಸಿ ನಡೆಯುತ್ತಿದ್ದ ಹೋರಾಟದ ಭಾಗವಾಗಿ ಸರ್ಕಾರಿ ಕಚೇರಿಗಳನ್ನು ಸ್ಪೋಟಿಸುವ ಉದ್ದೇಶದಿಂದ ಡೈನಮೈಟ್ ಅನ್ನು ಕಳ್ಳಸಾಗಣೆ ಮಾಡಿದ ಆರೋಪದ ಪ್ರಕರಣ) 1976ರ ಜೂನ್ 10ರಂದು ಜಾರ್ಜ್ರನ್ನು ಕಲ್ಕತ್ತಾದಲ್ಲಿ ಬಂಧಿಸಲಾಗುತ್ತದೆ. ಜಾರ್ಜ್ರನ್ನು ಈ ಪ್ರಕರಣದಲ್ಲಿ ಸಿಲುಕಿಸದಂತೆ ಆಗ ಜರ್ಮನಿ, ನಾರ್ವೆ ಮತ್ತು ಆಸ್ಟ್ರಿಯಾದ ಮುಖ್ಯಸ್ಥರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಎಚ್ಚರಿಕೆ ನೀಡಿದ್ದರಂತೆ. ಅಂದರೆ ಜಾರ್ಜ್ ಅಂತಾರಾಷ್ಟ್ರೀಯವಾಗಿಯೂ ಪ್ರಭಾವಿಯಾಗಿದ್ದರು ಎಂಬುದನ್ನು ಇದು ಸೂಚಿಸುತ್ತದೆ. ಎಮರ್ಜೆನ್ಸಿ ವಾಪಸಾತಿ ನಂತರ 1977ರಲ್ಲಿ ಲೋಕಸಭಾ ಚುನಾವಣೆ ನಡೆಯಿತು. ಇಂದಿರಾವಿರೋಧಿ ನಾಯಕರು ಜನತಾ ಪಕ್ಷದ ಕೊಡೆಯಡಿಯಲ್ಲಿ ಮೈತ್ರಿಕೂಟ ಮಾಡಿಕೊಂಡು, ಚುನಾವಣೆಯಲ್ಲಿ ಜಯಗಳಿಸಿದರು. ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗ ಜಾರ್ಜ್ ಫರ್ನಾಂಡಿಸ್ ಅವರು ಬಿಹಾರದ ಮುಜಫರ್ಪುರ ಕ್ಷೇತ್ರದಿಂದ ಮೂರು ಲಕ್ಷ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದರು. ಆಗ ಅವರು ಬರೋಡಾ ಡೈನಮೈಟ್ ಕೇಸಿನಲ್ಲಿ ಜೈಲಿನಲ್ಲಿದ್ದರು. ಒಮ್ಮೆಯೂ ಪ್ರಚಾರಕ್ಕೆ ಹೋಗದೆ ದಾಖಲೆಯ ಗೆಲುವು ಕಂಡಿದ್ದರು. ಅದು ಜಾರ್ಜ್ ತಾಕತ್ತು! ನಂತರದಲ್ಲಿ ಮೊರಾರ್ಜಿ ಸಂಪುಟ ಸೇರಿದರು.
ಬಳಿಕ ಕೆಲವು ರಾಜಕೀಯ ಏರಿಳಿತ, ಬದಲಾವಣೆಗಳು ಜಾರ್ಜ್ ಜೀವನದಲ್ಲಿ ಘಟಿಸಿದವು. 1984ರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ನ ಸಿ.ಕೆ.ಜಾಫರ್ ಷರೀಫ್ ವಿರುದ್ಧ ಸ್ಪರ್ಧಿಸಿ 40 ಸಾವಿರ ಮತಗಳ ಅಂತರದಿಂದ ಸೋಲುಕಂಡರು. 1994ರಲ್ಲಿ ಸಮತಾ ಪಕ್ಷವನ್ನು ಸ್ಥಾಪಿಸಿ, ಬಿಜೆಪಿಯ ಪ್ರಮುಖ ಅಂಗಪಕ್ಷಗಳಲ್ಲಿ ಒಂದಾಗಿಸಿದರು. 1998ರಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದಿತಾದರೂ, ಜಯಲಲಿತಾ ಅವರ ಎಐಎಡಿಎಂಕೆ ಬೆಂಬಲ ಹಿಂತೆಗೆತದಿಂದಾಗಿ 13 ತಿಂಗಳ ಅಲ್ಪಾಯುವಾಯಿತು. ನಂತರದಲ್ಲಿ ಬಿಜೆಪಿ ಅಧ್ವರ್ಯುತನದಲ್ಲಿ 24 ಪಕ್ಷಗಳ ಎನ್ಡಿಎ (ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್) ಸಮ್ಮಿಶ್ರ ಕೂಟ ರಚನೆಯಾಗಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಐದು ವರ್ಷ ಅಧಿಕಾರಾವಧಿ ಪೂರೈಸಿದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತು.
ವಾಜಪೇಯಿ ಪ್ರಧಾನಿಯಾಗಿದ್ದಾಗಿನ ಆ ಅವಧಿಯಲ್ಲಿ ಜಾರ್ಜ್ ಫರ್ನಾಂಡಿಸ್ ಎನ್ಡಿಎ ಸಂಚಾಲಕರಾಗಿಯೂ ಕಾರ್ಯನಿರ್ವಹಿಸಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯ, ಅಹಂಗಳ ತಾಕಲಾಟ ಮುಂತಾದ ಕಾರಣಕ್ಕೆ ಎರಡು ಪಕ್ಷಗಳ ಸಮ್ಮಿಶ್ರ ಸರ್ಕಾರವೇ ಸುಸೂತ್ರವಾಗಿ ಆಡಳಿತ ನಡೆಸುವುದು ಕಷ್ಟ ಎಂಬ ಸ್ಥಿತಿಯಲ್ಲಿ, 24 ಪಕ್ಷಗಳನ್ನು ತಕ್ಕಡಿಯಲ್ಲಿ ತೂಕ ತಪ್ಪದಂತೆ ತೂಗಿಸುವುದು ಹುಡುಗಾಟಿಕೆಯಲ್ಲ. ಪ್ರಧಾನಿ ವಾಜಪೇಯಿಯವರ ಅನುಭವದ ಮೂಸೆ ಹಾಗೂ ಮುತ್ಸದ್ದಿತನದ ಬೆಳಕಿನಲ್ಲಿ, ಸಂಚಾಲಕ ಜಾರ್ಜ್ ಫರ್ನಾಂಡಿಸ್ರ ಜಾಣನಡೆಗಳು ಎನ್ಡಿಎ ಸರ್ಕಾರವು ಕಂಪನಗಳನ್ನು ತಾಳಿಕೊಂಡು ಬರುವಂತೆ ಮಾಡಿತು. ಎನ್ಡಿಎ ಸರ್ಕಾರದ ಎರಡು ಅವಧಿಗಳಲ್ಲಿಯೂ ಜಾರ್ಜ್ (1998-2004) ರಕ್ಷಣಾ ಸಚಿವರಾಗಿದ್ದರು. ಇದೇ ಸಂದರ್ಭದಲ್ಲಿ, (1999) ಪಾಕಿಸ್ತಾನದ ಮರಾಮೋಸದಿಂದಾಗಿ ಕಾರ್ಗಿಲ್ ಕದನ ಸಂಭವಿಸಿತು. ಆ ವೇಳೆ ಜಾರ್ಜ್ ಫರ್ನಾಂಡಿಸ್ ಒಟ್ಟು 18 ಬಾರಿ ಸೈನಿಕ ನೆಲೆಗಳಿಗೆ ತೆರಳಿ ನಮ್ಮ ಸೈನಿಕರಲ್ಲಿ ನೈತಿಕ ಸ್ಥೈರ್ಯ ತುಂಬಿದ್ದರು. ಅಷ್ಟೇ ಅಲ್ಲ, ಪ್ರಪಂಚದ ಅತಿ ಎತ್ತರದ ಯುದ್ಧಭೂಮಿಯಾದ ದುರ್ಗಮ ಪ್ರದೇಶ ಸಿಯಾಚಿನ್ಗೂ ಹೋಗಿದ್ದರು.
ಇಂತಹ ಜಾರ್ಜ್ ಕೂಡ ಆರೋಪಗಳಿಗೆ ತುತ್ತಾಗಬೇಕಾಯಿತು; ತನಿಖೆಯ ಅಗ್ನಿದಿವ್ಯ ಹಾಯಬೇಕಾಯಿತು. ಕಾರ್ಗಿಲ್ ಶವಪೆಟ್ಟಿಗೆ ಖರೀದಿ ಪ್ರಕರಣ, 2001 ತೆಹಲ್ಕಾ ಕುಟುಕು ಕಾರ್ಯಾಚರಣೆ ಪ್ರಕರಣ, ಬರಾಕ್ ಕ್ಷಿಪಣಿ ಖರೀದಿ ಪ್ರಕರಣ ಮುಂತಾದ ಆರೋಪಗಳು ಕೇಳಿಬಂದು, ತನಿಖಾ ಆಯೋಗಗಳು ರಚನೆಯಾಗಿ, ಎಲ್ಲ ಪ್ರಕರಣಗಳಲ್ಲಿಯೂ ಜಾರ್ಜ್ ದೋಷಮುಕ್ತರಾದರು. ಕಾರ್ಗಿಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಹ ಅವರನ್ನು ದೋಷಮುಕ್ತಗೊಳಿಸಿತು.
ಕಾಲಮಹಿಮೆ ಹೇಗಿರುತ್ತದೆ ನೋಡಿ. ಒಂದು ಕಾಲದಲ್ಲಿ ಮುಂಬಯಿಯಂಥ ಮುಂಬಯಿಯನ್ನೇ ತನ್ನ ಕೈಸನ್ನೆ ಮಾತ್ರದಿಂದಲೇ ಸ್ತಬ್ಧಗೊಳಿಸುತ್ತಿದ್ದ, ಕೇಂದ್ರದಲ್ಲಿ ವಿವಿಧ ಖಾತೆಗಳ ಸಚಿವನಾಗಿ ಹಲವು ಹೆಜ್ಜೆಗುರುತು ಮೂಡಿಸಿದ, ಕರ್ನಾಟಕದ ಕರಾವಳಿ ಭಾಗಕ್ಕೆ ಅಪಾರ ಪ್ರಯೋಜನ ತಂದುಕೊಟ್ಟ ಕೊಂಕಣ ರೈಲ್ವೆ ಯೋಜನೆ ಸಾಕಾರಕ್ಕೆ ಶ್ರಮಿಸಿದ ಜಾರ್ಜ್ ಫರ್ನಾಂಡಿಸ್ ಎಂಬ ಚತುರ-ಚುರುಕಿನ ನಾಯಕ ಕೂಡ ಅಲ್ಝಿಮೇರ್ ಎಂಬ ಕಾಯಿಲೆಯಿಂದ ಬಳಲಿ, ಹೊರಪ್ರಪಂಚದ ಸಂಪರ್ಕ-ಆಗುಹೋಗುಗಳಿಂದ ದೂರವಾದರು. 2019ರ ಜನವರಿ 29ರಂದು ಕೊನೆಯುಸಿರೆಳೆಯುವ ಮೂಲಕ ಭಾರತದ ರಾಜಕೀಯ ರಂಗದ ವಿಶಿಷ್ಟ ನಾಯಕನೊಬ್ಬ ತೆರೆಮರೆಗೆ ಸರಿದಂತಾಯಿತು. ವಿಧಿಯಾಟವೆಂದರೆ, ವಾಜಪೇಯಿ ಸಹ ಕೊನೆಗಾಲದಲ್ಲಿ ಅನಾರೋಗ್ಯದಿಂದಾಗಿ ಹೊರಗಿನ ಆಗುಹೋಗುಗಳಿಗೆ ಸ್ಪಂದಿಸುತ್ತಿರಲಿಲ್ಲ.
ಕೊನೇ ಮಾತು: ಅಂದಹಾಗೆ, ಇಂದು ಜಾರ್ಜ್ ಫರ್ನಾಂಡಿಸ್ ಜನ್ಮದಿನ. ಇಂದಿನ ಜನಪ್ರತಿನಿಧಿಗಳು, ಕಾರ್ವಿುಕ ನಾಯಕರು ಅವರಿಂದ ಕಲಿಯುವುದು ಸಾಕಷ್ಟಿದೆ. ಸಾರ್ವಜನಿಕ ಬದುಕಿನಲ್ಲಿ ಹೋರಾಟದ ಹಾದಿಯಲ್ಲಿ ನಡೆಯಬಯಸುವವರಿಗೆ ಜಾರ್ಜ್ ಜೀವನ ಒಂದು ತೋರುಗಂಬವೆಂದರೆ ಅತಿಶಯೋಕ್ತಿಯಲ್ಲ.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)