More

  ಮನದೊಳಗಣ ಯುದ್ಧ ಗೆದ್ದವನು ಆಗುವನು ಬುದ್ಧ!

  ಮನದೊಳಗಣ ಯುದ್ಧ ಗೆದ್ದವನು ಆಗುವನು ಬುದ್ಧ!ಎರಡು ದೇಶಗಳ ನಡುವಣ ಯುದ್ಧ ಕೇವಲ ಆ ದೇಶಗಳಿಗೆ ಸೀಮಿತವಲ್ಲ, ಇಡೀ ವಿಶ್ವವನ್ನು ಬೇರೆ ಬೇರೆ ಬಗೆಯಲ್ಲಿ ಆವರಿಸುತ್ತದೆ. ಸಮರಕ್ಕೆ ಸಂಬಂಧವೇ ಇಲ್ಲದವರೂ ಪರಿಣಾಮ ಎದುರಿಸಬೇಕಾಗುತ್ತದೆ ಮತ್ತು ಆ ಪರಿಣಾಮ ಅನೇಕ ಕಾಲ ಬಾಧಿಸುತ್ತಲೇ ಇರುತ್ತದೆ.

  ಮಾನವನ ಮನಸ್ಸಿನಲ್ಲಿ ಮೊದಲು ಯುದ್ಧ ಶುರುವಾಗುತ್ತದೆಯಂತೆ. ಇದು ಬಲ್ಲವರು ಹೇಳುವ ಮಾತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮನಸ್ಸಿನಲ್ಲಿ ಹೀಗೆ ಅನಿಸಿರಬಹುದು: ‘ಈ ಯೂಕ್ರೇನ್ ಕೆಲ ವರ್ಷ ಹಿಂದಿನವರೆಗೂ ನಮ್ಮದೇ ಭಾಗವಾಗಿತ್ತು. ಏನೋ ಕೆಟ್ಟ ಘಳಿಗೆ. ಯುಎಸ್​ಎಸ್​ಆರ್ ಕುಸಿಯಿತು, ಛಿದ್ರವಾಯಿತು. ಆಗ ಸ್ವಾತಂತ್ರ್ಯ ಪಡೆದೆವೆಂದು ಬೀಗುತ್ತ, ನಮ್ಮ ವಿರೋಧಿಗಳಾದ ಅಮೆರಿಕ ನೇತೃತ್ವದ ನ್ಯಾಟೋ ಕೂಟಕ್ಕೆ ಸೇರಲು ಹೊರಟರೆ ನಾವು ಸುಮ್ಮನಿರಲಿಕ್ಕಾಗುತ್ತದೆಯೇನು? ಆ ವೊಲಿದಿಮಿರ್ ಝೆಲೆನ್​ಸ್ಕಿಗಾದರೂ ಬುದ್ಧಿ ಬೇಡವಾ? ಒಂದು ಕಾಲದ ಈ ವಿದೂಷಕ ಯೂಕ್ರೇನ್ ಅಧ್ಯಕ್ಷನಾದ ಮೇಲೂ ಅದೇ ರೀತಿ ಆಡ್ತಿದಾನೆ. ಬೈಡೆನ್ ಮಾತು ಕೇಳಿಕೊಂಡು ಸುಖಾಸುಮ್ಮನೆ ನಮ್ಮನ್ನು ಕೆಣಕ್ತಿದಾನೆ. ಇನ್ನು ಒಂದು ಕೈ ನೋಡೋದೇ.. ಈ ಪುತಿನ್ ಎಂಥ ಗಟ್ಟಿಗ ಎಂಬುದನ್ನು ತೋರಿಸ್ತೇನೆ…’ ಅತ್ತ ವೊಲಿದಿಮಿರ್ ಝೆಲೆನ್​ಸ್ಕಿ ಮನಸಿನಲ್ಲಿ ಈ ಬಗೆಯ ಲೆಕ್ಕಾಚಾರ ನಡೆದಿರಬಹುದು: ‘ಅರೇ! ಸ್ವತಂತ್ರವಾದ ಮೇಲೆ ನಮ್ಮಿಷ್ಟದ ಹಾಗೆ ನಡೆಯುವುದು ನಮ್ಮ ಹಕ್ಕು. ಇದನ್ನು ಕೇಳೋಕೆ ಪುತಿನ್ ಯಾರು? ನ್ಯಾಟೋ ಹತ್ತಿರನಾದ್ರೂ ಹೋಗ್ತೀವಿ, ಬೈಡೆನ್ ದೋಸ್ತಿನಾದ್ರೂ ಮಾಡ್ತೀವಿ. ಪುತಿನ್ ಕೆಮ್ಮಂಗಿಲ್ಲ. ನಮ್ಮ ದೇಶಕ್ಕೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬುದರ ಬಗ್ಗೆ ಬೇರೆಯವರಿಂದ ಪಾಠಹೇಳಿಸಿಕೊಳ್ಳಬೇಕಾಗಿಲ್ಲ.’

  ಅವರವರ ನೆಲೆಯಲ್ಲಿ ಇಬ್ಬರ ವಾದವೂ ಸರಿಯೇ. ಹೀಗಾಗಿಯೇ ಯುದ್ಧ ಶುರುವಾಗಿ ಒಂದು ವರ್ಷ ಒಂದು ತಿಂಗಳಾದರೂ ಇನ್ನೂ ಮುಗಿದಿಲ್ಲ. ಹೋಗಲಿ, ಯಾರ ಕೈಮೇಲಾಗಿದೆ ಎಂಬುದು ಸಹ ಸರಿಯಾಗಿ ತಿಳಿಯುತ್ತಿಲ್ಲ. ಜಾಗತಿಕ ಮಾಧ್ಯಮಗಳು ಈ ಬಗ್ಗೆ ತಲೆಕೆಡಿಸಿಕೊಂಡು ವರದಿ ಮಾಡುತ್ತಿಲ್ಲ. ಒಂದೆಡೆ, ಪುತಿನ್ ಅನಾರೋಗ್ಯದ ಬಗ್ಗೆ ದಿನಕ್ಕೊಂದು ಬಗೆಯ ವದಂತಿ. ಇನ್ನೊಂದೆಡೆ, ಯೂಕ್ರೇನ್​ಗೆ ಅಮೆರಿಕ ಮತ್ತು ಯುರೋಪ್ ಒಕ್ಕೂಟದ ದೇಶಗಳ ನೆರವು ಮುಂದುವರಿಕೆ. ಅಷ್ಟೇ ಏಕೆ, ಖುದ್ದು ಬೈಡೆನ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಯೂಕ್ರೇನಿಗೆ ಭೇಟಿ ನೀಡಿದ್ದರಲ್ಲ… ಮಗದೊಂದೆಡೆ, ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ರಷ್ಯಾಗೆ ಭೇಟಿ ನೀಡಿ ಪುತಿನ್ ಜತೆ ಹಸ್ತಲಾಘವ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಅಮೆರಿಕಕ್ಕೆ ಸೂಕ್ಷ್ಮವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಶೀತಲ ಸಮರದ ತರುವಾಯ ಅಮೆರಿಕ ಮೇಲುಗೈ ಸಾಧಿಸಿ ವಿಶ್ವದಲ್ಲಿ ತನಗೆ ಸರಿಸಮಾನರಾರಿಲ್ಲ ಎಂಬ ರೀತಿಯಲ್ಲಿ ಮೆರೆಯುತ್ತಿದೆ. ರಷ್ಯಾ ಅಧ್ಯಕ್ಷ ಪುತಿನ್ ಯುಎಎಸ್​ಆರ್ ಗತವೈಭವದ ಮರುಸ್ಥಾಪನೆ ಕನಸು ಕಾಣುತ್ತಿದ್ದಾರಾದರೂ, ಸನ್ನಿವೇಶ ಅವರಿಗೆ ಪೂರಕವಾಗಿಲ್ಲ; ಆರ್ಥಿಕವಾಗಿಯೂ ರಷ್ಯಾ ಅಷ್ಟು ಸಶಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ಷಿ ಜಿನ್​ಪಿಂಗ್ ಸೂಪರ್ ಪವರ್ ಕನಸು ಕಾಣುತ್ತಿದ್ದಾರೆ. ಹೀಗಾಗೇ ರಷ್ಯಾ-ಯೂಕ್ರೇನ್ ಸಮರದ ನಡುವೆಯೇ ರಷ್ಯಾಕ್ಕೆ ಭೇಟಿ ನೀಡಿ ಪರೋಕ್ಷ ಬೆಂಬಲ ಸಾರಿದ್ದಾರೆ.

  ವಿಶ್ವದ ಪ್ರಮುಖ ತೈಲ ರಫ್ತುದಾರ ದೇಶವಾದ ರಷ್ಯಾದ ಮೇಲೆ ಯುರೋಪ್ ಒಕ್ಕೂಟ ಮತ್ತು ಅಮೆರಿಕ ನಿರ್ಬಂಧ ವಿಧಿಸಿದ್ದರಿಂದ, ಭಾರತ ಚೌಕಾಶಿ ನಡೆಸಿ ಅಲ್ಲಿನ ತೈಲವನ್ನು ಅಗ್ಗದ ದರದಲ್ಲಿ ಖರೀದಿಸುತ್ತಿದೆ. ಈ ಜಾಣತಂತ್ರ ಪ್ರಯೋಗಿಸಿದ್ದರಿಂದ ಭಾರತಕ್ಕೆ ಈವರೆಗೆ ಸುಮಾರು 35 ಸಾವಿರ ಕೋಟಿ ರೂ. ಉಳಿತಾಯವಾಗಿದೆ ಎಂಬ ಅಂದಾಜಿದೆ. ಮೊದಮೊದಲು ಅಮೆರಿಕ ಇದಕ್ಕೆ ಗುಟುರು ಹಾಕಿತಾದರೂ ಭಾರತ ಕ್ಯಾರೆ ಅನ್ನಲಿಲ್ಲ. ನಂತರದಲ್ಲಿ ಅಮೆರಿಕ ಇದು ಭಾರತದ ಆಂತರಿಕ ವ್ಯವಹಾರ ಎಂದು ಹೇಳಿ ಸುಮ್ಮನಾಯಿತು. ಆಷಾಢಭೂತಿತನ ಹೇಗಿರುತ್ತದೆ ನೋಡಿ, ರಷ್ಯಾ ವಿರುದ್ಧ ನಿರ್ಬಂಧ ಹೇರಿದ ಯುರೋಪ್ ಒಕ್ಕೂಟದ ದೇಶಗಳು ಸಹಿತ ಅಲ್ಲಿಂದ ತೈಲ ತರಿಸುವುದನ್ನು ಮುಂದುವರಿಸಿವೆ! ಇದನ್ನೆಲ್ಲ ಇಲ್ಲಿ ಏಕೆ ಹೇಳಬೇಕಾಯಿತೆಂದರೆ, ಎರಡು ದೇಶಗಳ ನಡುವಣ ಯುದ್ಧ ಕೇವಲ ಆ ದೇಶಗಳಿಗೆ ಸೀಮಿತವಲ್ಲ, ಇಡೀ ವಿಶ್ವವನ್ನು ಬೇರೆ ಬೇರೆ ಬಗೆಯಲ್ಲಿ ಆವರಿಸುತ್ತದೆ ಎಂಬುದನ್ನು ಬಿಂಬಿಸುವುದಕ್ಕಾಗಿ. ಇಷ್ಟಕ್ಕೇ ನಿಲ್ಲದು. ಯೂಕ್ರೇನಿಗೆ ತೆರಳಿದ್ದ ಸಾವಿರಾರು ವಿದ್ಯಾರ್ಥಿಗಳು-ಭಾರತೀಯರೂ ಸೇರಿ- ಅಲ್ಲಿಂದ ಗಂಟುಮೂಟೆ ಕಟ್ಟುವಂತಾದುದು, ಕೆಲ ಆಹಾರ ಧಾನ್ಯ ಮತ್ತು ಅಡುಗೆ ಎಣ್ಣೆ ಬೆಲೆಯಲ್ಲಿ ಏರಿಕೆ- ಮುಂತಾದವು ಸಹ ಈ ಸಮರದ ಉಪಪರಿಣಾಮಗಳೇ. ಇನ್ನು, ಯೂಕ್ರೇನಿನ ಸಾವಿರಾರು ಜನರು ಮತ್ತು ಸೈನಿಕರು ಸಾವಿಗೀಡಾದರಲ್ಲದೆ, ಲಕ್ಷಾಂತರ ಜನರು ಬದುಕನರಸಿಕೊಂಡು ಗಡಿದಾಟಿ ಬೇರೆ ಬೇರೆ ಕಡೆ ತೆರಳಿದರು. ರಷ್ಯಾದ ಕಡೆಯೂ ಸಾವಿರಾರು ಸೈನಿಕರು ಸಾವನ್ನಪ್ಪಿದ್ದಾರೆ. ಇಷ್ಟಾದರೂ ಯುದ್ಧ ಯಾವಾಗ ಮುಗಿಯುತ್ತದೆಂಬುದು ಯಾರಿಗೂ ಗೊತ್ತಿಲ್ಲ. ವಿಶ್ವಸಂಸ್ಥೆ ಬಲಹೀನವಾಗಿರುವುದರಿಂದ, ದನಿಎತ್ತರಿಸಿ ಹೇಳುವ ತಾಕತ್ತು ಅದಕ್ಕಿಲ್ಲ. ಅಷ್ಟಕ್ಕೂ ನಮ್ಮ ಇತಿಹಾಸಗಳು ಗೆದ್ದವರ ಕಥೆಯನ್ನು ವರ್ಣಿಸುತ್ತವೆಯೇ ಹೊರತು, ಆ ಗೆಲುವಿಗೆ ಮೆಟ್ಟಿಲುಗಳಾಗಿ, ಸವೆದವರ ಬಗ್ಗೆ ಗಪ್​ಚುಪ್. ಅಲ್ಲಿ ಮಡಿದ ಸೈನಿಕರು, ಅವರ ವಿಧವಾಪತ್ನಿಯರ ಬದುಕಿನ ಸ್ಥಿತಿ, ಮಕ್ಕಳ ತಬ್ಬಲಿತನ, ಗಾಯಾಳು ಸೈನಿಕರ ಅವಸ್ಥೆ- ಇವನ್ನೆಲ್ಲ ಇತಿಹಾಸ ನಮಗೆ ತಿಳಿಸುವುದಿಲ್ಲ. ರಾಜನಿಗೆ ಮಾತ್ರ ಬಹುಪರಾಕ್.

  ಕಳಿಂಗ ಯುದ್ಧದಲ್ಲಿನ ಅಪಾರ ಸಾವುನೋವುಗಳನ್ನು ಕಂಡ ಅಶೋಕ ಸಾಮ್ರಾಟನ ಹೃದಯ ಕರಗಿ, ಶಾಂತಿಯತ್ತ ಮನಸ್ಸು ವಾಲಿತು. ಶಸ್ತ್ರವೈರಾಗ್ಯ ಬೆಳೆಯಿತು. ಪಾಂಡವರಿಗೆ ಕೊನೇ ಪಕ್ಷ ಐದು ಗ್ರಾಮಗಳನ್ನು ಕೊಟ್ಟಿದ್ದಿದ್ದರೆ ಮಹಾಭಾರತ ಯುದ್ಧ ನಡೆಯುತ್ತಿರಲಿಲ್ಲವೇನೋ! ಆದರೆ ದುರ್ಯೋಧನನ ಮನಸ್ಸು ಇದಕ್ಕೆ ಒಪ್ಪಲಿಲ್ಲ. ಪರಿಣಾಮ ಗೊತ್ತೇ ಇದೆ.

  ಹಾಗಂತ ಸ್ವರಕ್ಷಣೆಗಾಗಿ ಶಸ್ತ್ರ ಹಿಡಿಯುವುದು ತಪು್ಪ ಎನ್ನಲಾಗದು. ಸಾಮ್ರಾಜ್ಯ ವಿಸ್ತರಣೆಗಾಗಿ ಮತ್ತೊಬ್ಬರ ಮೇಲೆ ದಂಡೆತ್ತಿಹೋಗುವುದು ಬೇರೆ; ಇನ್ನೊಬ್ಬರು ತಮ್ಮ ಮೇಲೆ ಏರಿಬಂದಾಗ ಸ್ವರಾಜ್ಯ, ಸ್ವಜನ, ಸಂಸ್ಕೃತಿಯ ರಕ್ಷಣೆಗಾಗಿ ಮುಂದಾಗುವುದು ಬೇರೆ. ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ಕ್ರಮೇಣ ಭಾರತದ ಆಡಳಿತದ ಮೇಲೆ ಹಿಡಿತ ಸಾಧಿಸಿ, ಕುಟಿಲತನ ಮೆರೆದಾಗ, ನಮ್ಮವರ ಮೇಲೆ ದೌರ್ಜನ್ಯ ನಡೆಸಿದಾಗ, ನಮ್ಮ ಸಂಪತ್ತನ್ನು ದೋಚಿದಾಗ, ಇತರ ಹೋರಾಟಗಾರರ ಜತೆ ಕ್ರಾಂತಿಕಾರಿಗಳೂ ಸಜ್ಜಾಗಿ, ಬೋಸ್​ರಂಥವರು ಸೇನೆಯನ್ನೇ ಕಟ್ಟುವ ಸಾಹಸ ಮೆರೆದು, ತಿರುಗಿ ಬೀಳದಿದ್ದರೆ ಸ್ವಾತಂತ್ರ್ಯದ ಫಲ ದೊರೆಯುವುದು ಇನ್ನೆಷ್ಟು ಮುಂದಕ್ಕೆ ಹೋಗುತ್ತಿತ್ತೋ! ಈ ಸ್ವಾತಂತ್ರ್ಯಯಜ್ಞದಲ್ಲಿ ಹವಿಸ್ಸುಗಳಾದವರು ಎಷ್ಟು ಜನ!

  ಮೊದಲೇ ಹೇಳಿದಂತೆ, ಮಾನವನ ಮನಸ್ಸಿನಲ್ಲಿ ಮೊದಲು ಸಮರದ ಉಮೇದು ಮೂಡುತ್ತದೆ. ಹಾಗೆ ಆಗದೆಯೇ ಇದ್ದರೆ ಯುದ್ಧವೆಂಬ ರಗಳೆಗಳೆಲ್ಲ ಬೇಕಿರಲಿಲ್ಲ ಎಂಬ ಅನಿಸಿಕೆ ಮೂಡುವುದು ಸಹಜ. ಆದರೆ ಇದು ಸುಲಭವಲ್ಲ. ದೇಶ-ದೇಶಗಳ ಯುದ್ಧ ಪಕ್ಕಕ್ಕಿರಲಿ, ನಮ್ಮ ಮನಸ್ಸಿನೊಳಗಡೆಯೇ ನಡೆಯುವ ಅಂತರ್ಯುದ್ಧವೇನು ಕಡಿಮೆಯಾ? ಇದು ಒಂದು ರೀತಿಯಲ್ಲಿ ನಿತ್ಯಯುದ್ಧ. ಈ ಮನಸ್ಥಿತಿಯೇ ಮುಂದೆ ಬೇರೆ ಸ್ವರೂಪ ಪಡೆಯುತ್ತದಷ್ಟೆ. ಸ್ಟಾಲಿನ್, ಹಿಟ್ಲರ್ ಇವರೆಲ್ಲ ಒಂದೇ ದಿನಕ್ಕೆ ಹಾಗಾದವರಲ್ಲವಲ್ಲ. ಪಕ್ಕದ ಮನೆಯೆದುರು ಹೊಸ ಕಾರು ಬಂದು ನಿಂತರೆ ನಮ್ಮ ಮನಸ್ಸಿನಲ್ಲಿ ಅಸೂಯೆ. ಸಾಲ ಮಾಡಿಯಾದರೂ ಒಂದು ಕಾರು ತರುವವರೆಗೆ ಮನಸ್ಸಿಗೆ ಸಮಾಧಾನವಿಲ್ಲ. ದಾಯಾದಿಗಳು ಹೊಸ ಮನೆ ಕಟ್ಟಿಸಿದರೆ, ನಮಗೆ ಅದಾಗಲೇ ಚೆಂದದ ಮನೆಯಿದ್ದರೂ ಒಂದು ಬಗೆಯ ಹೊಟ್ಟೆಯುರಿ. ಅಷ್ಟೆಲ್ಲ ದುಡ್ಡು ಅವರ ಬಳಿ ಹೇಗೆ ಬಂತು, ಏನೋ ಗೋಲ್‍ಮಾಲ್ ಮಾಡಿರಬೇಕು ಎಂಬ ಕೊಂಕುಮಾತು ಬೇರೆ. ಎದುರು ಮನೆಯ ಮಕ್ಕಳು ಒಳ್ಳೆಯ ವಿದ್ಯೆ ಪಡೆದು, ಉತ್ತಮ ನೌಕರಿ ಹಿಡಿದರೂ ನಮಗೆ ಏನೋ ಸಂಕಟ. ನಮ್ಮ ಮಕ್ಕಳು ಎಷ್ಟು ಸಾಧಿಸಿದರೂ ಕಡಿಮೆಯೇ ಅನಿಸುತ್ತದೆ. ಅಷ್ಟೇ ಏಕೆ, ಗಂಡನಿಗಿಂತ ಹೆಂಡತಿ ಸಂಬಳ ಜಾಸ್ತಿ ಎಂಬ ಕಾರಣಕ್ಕೆ ಮನಸುಗಳು ಮುರಿದಿದ್ದಿದೆ. ಕೇವಲ ಕೆಲವು ಅಡಿಗಳ ಜಾಗಕ್ಕಾಗಿ ಅಣ್ಣತಮ್ಮಂದಿರು ಕೋರ್ಟು ಮೆಟ್ಟಿಲೇರಿ ಹಲವಾರು ವರ್ಷ ವ್ಯಾಜ್ಯದಲ್ಲಿ ಬಡಿದಾಡಿ ಇಬ್ಬರೂ ಹಣ ಮತ್ತು ಸಮಯ ಕಳೆದುಕೊಂಡ ನಿದರ್ಶನಗಳು ಎಷ್ಟಿಲ್ಲ! ‘ಹೃದಯ ಮತ್ತು ಬುದ್ಧಿಯ ಸಂಘರ್ಷದಲ್ಲಿ ನಿಮ್ಮ ಹೃದಯವನ್ನು ಅನುಸರಿಸಿ’ ಎಂಬ ಹಿತವಚನ ಸ್ವಾಮಿ ವಿವೇಕಾನಂದ ಅವರದು. ಆದರೆ ಹೃದಯದ ಮಾತು ಕೇಳುವ ವ್ಯವಧಾನವಾದರೂ ಎಷ್ಟು ಮಂದಿಗಿರುತ್ತದೆ? ‘ಬೇರೊಬ್ಬರ ಜೀವನವನ್ನು ಹಾಳುಮಾಡದೆ ಬದುಕುವುದೇ ನಿಜವಾದ ಜೀವನ’ಎಂಬುದು ಅನುಭಾವಿಯೊಬ್ಬನ ಮಾತು. ಬೇರೆಯವರಿಗೆ ಉಪಕಾರ ಮಾಡಲಾಗದಿದ್ದರೂ ಅಪಕಾರ ಮಾಡದಿದ್ದರೆ ಅದೇ ದೊಡ್ಡ ಉಪಕಾರ.

  ‘ಮಾನವನು ಧ್ಯಾನದ ನೈಜಾರ್ಥವನ್ನು ಸ್ವಲ್ಪವಾದರೂ ತಿಳಿದನಾದರೆ, ಯುದ್ಧ, ಹಿಂಸೆ, ರಕ್ತಪಾತ, ಇವೆಲ್ಲ ಇರುವುದಿಲ್ಲ. ಧ್ಯಾನಕ್ಕೆ ಎಂಥ ಶಕ್ತಿ ಇದೆಯೆಂದರೆ, ಧ್ಯಾನಕ್ಕಿಂತ ಮಿಗಿಲಾದ ಆನಂದ, ಆರಾಮ ಇನ್ನೊಂದಿಲ್ಲ’ ಎಂಬುದು ಓಶೋ ಮಾತು. ಅಂದರೆ ಮಾನವ ಅಂತರಾಳಕ್ಕಿಳಿಯಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸುತ್ತಾರೆ. ನಮ್ಮ ಆಧ್ಯಾತ್ಮಿಕ ಸಾಧಕರು ಸಹ ಇದನ್ನೇ ಹೇಳುವುದು. ಅಂದರೆ, ಸ್ವಸ್ವರೂಪದ ಅರಿವನ್ನು ತಾಳುವುದು. ಅರ್ಥಾತ್, ಮಾನವ ಪ್ರಕೃತಿಯ ರಹಸ್ಯವನ್ನು ಅರಿಯುವ ಯತ್ನ ನಡೆಸಿದಾಗ, ಮಾನವರೆಲ್ಲರೂ ಒಂದೇ ಎಂಬ ಅಂಶ ಗೋಚರಿಸುತ್ತದೆ. ಆಗ ಕೋಪತಾಪಅಸೂಯೆ ಇತ್ಯಾದಿಗಳಿಗೆ ಅವಕಾಶವೇ ಇರುವುದಿಲ್ಲ ಎಂಬುದು ತಾತ್ಪರ್ಯ. ಆದರೆ, ಆ ದಾರಿಯಲಿ ಸಾಗುವ ಮನಸ್ಸನ್ನು ಮೊದಲು ಮಾಡಬೇಕಷ್ಟೆ. ಎಲ್ಲದಕ್ಕೂ ಮನಸೇ ಮೂಲ!

  ಕೊನೇ ಮಾತು: ‘ತಾಳ್ಮೆ ಮತ್ತು ಸಮಯ ಎರಡು ಶ್ರೇಷ್ಠ ಯೋಧರು’ ಎಂದು ವಿಖ್ಯಾತ ಸಾಹಿತಿ ಲಿಯೊ ಟಾಲ್​ಸ್ಟಾಯ್ ಹೇಳುತ್ತಾರೆ. ನಾಯಕರೆನಿಸಿಕೊಂಡವರು ಸ್ವಲ್ಪ ಸಂಯಮ ವಹಿಸಿದ್ದಿದ್ದರೆ ಎಷ್ಟೋ ಯುದ್ಧಗಳು ನಡೆಯುತ್ತಿರಲಿಲ್ಲವೇನೋ!

  (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

  ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ತುಟ್ಟಿ ಭತ್ಯೆ ಶೇ. 4 ಹೆಚ್ಚಳ!

  ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

  ರಾಜ್ಯೋತ್ಸವ ರಸಪ್ರಶ್ನೆ - 27

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts