More

    ಸ್ವರ್ಗವ ತ್ಯಜಿಸೋಣ ಭಾರತದಲ್ಲಿ ಜನಿಸೋಣ!

    ಸ್ವರ್ಗವ ತ್ಯಜಿಸೋಣ ಭಾರತದಲ್ಲಿ ಜನಿಸೋಣ!ರಾಜರ ಬಗ್ಗೆ ನಾವು ಎಷ್ಟು ಕುತೂಹಲಿಗಳು, ಆಸಕ್ತರು ಎಂದರೆ, ಚಿಕ್ಕವರಿದ್ದಾಗ ಕೇಳುತ್ತಿದ್ದ ಕಥೆಗಳಲ್ಲಿ ಅನೇಕವು ಆರಂಭವಾಗುತ್ತಿದ್ದುದೇ ‘ಒಂದೂರಲ್ಲಿ ಒಬ್ಬ ರಾಜನಿದ್ದ…’ ಎಂಬ ಸಾಲಿನಿಂದ. ನಂತರದಲ್ಲಿ ಕಥೆ ಚಿತ್ರವಿಚಿತ್ರ ತಿರುವುಗಳನ್ನು ಪಡೆಯುತ್ತ, ಕೊನೆಗೆ ‘ಅವರೆಲ್ಲ ಸುಖದಿಂದಿದ್ದರು…’ ಎಂದು ಕೊನೆಯಾಗುತ್ತಿತ್ತು. ಇಂಥ ಎಷ್ಟು ಕಥೆಗಳನ್ನು ಕೇಳಿದರೂ ಬೇಜಾರು ಬರುತ್ತಿರಲಿಲ್ಲ. ಅಜ್ಜನ ಜೋಳಿಗೆಯಲ್ಲಿ ಇಂಥ ಗುಚ್ಛಗಳೇ ಇರುತ್ತಿದ್ದವು.

    ಸುದೀರ್ಘ 70 ವರ್ಷಗಳಷ್ಟು ಕಾಲ ಬ್ರಿಟನ್ನನ್ನು ಆಳಿದ ರಾಣಿ ಎರಡನೇ ಎಲಿಜಬೆತ್ ಈಚೆಗೆ ನಿಧನರಾದರು. ಆ ಸಂದರ್ಭದಲ್ಲಿ ರಾಣಿ ಬಗ್ಗೆ, ಬ್ರಿಟನ್ ರಾಜಮನೆತನದ ಬಗ್ಗೆ ಮಾಧ್ಯಮಗಳಲ್ಲಿ ಪ್ರವಾಹೋಪಾದಿಯಲ್ಲಿ ವರದಿಗಳು ಬಂದವು; ಇನ್ನೂ ಬರುತ್ತಲೇ ಇವೆ. ನೂತನ ರಾಜನಾಗಿ ಎಲಿಜಬೆತ್​ರ ಹಿರಿಯ ಪುತ್ರ ಚಾರ್ಲ್ಸ್ ಅಧಿಕಾರ ವಹಿಸಿಕೊಂಡೂ ಆಗಿದೆ. ಬ್ರಿಟನ್ ವಿದ್ಯಮಾನಗಳ ಬಗ್ಗೆ, ರಾಜಮನೆತನದ ಬಗ್ಗೆ ನಮಗೆ ಇನ್ನೂ ಕುತೂಹಲ ಇದೆ.

    ಇದೇ ಸಂದರ್ಭದಲ್ಲಿ ಇನ್ನೊಂದು ಕುತೂಹಲಕರ ಮಾಹಿತಿ ಹೊರಬಿದ್ದಿದೆ. ಸುಮಾರು 200 ವರ್ಷಗಳ ಕಾಲ ನಮ್ಮನ್ನು ಆಳಿದ ಬ್ರಿಟಿಷರನ್ನೇ ನಾವೀಗ ಆರ್ಥಿಕತೆಯಲ್ಲಿ ಹಿಂದಿಕ್ಕಿದ್ದೇವೆ. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸನ್ನಿವೇಶದಲ್ಲಿ ಇದೊಂದು ಸಿಹಿಸುದ್ದಿಯೇ ಸರಿ. 2019ರಲ್ಲಿ ನಮ್ಮ ದೇಶದ ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ) 2.94 ಟ್ರಿಲಿಯನ್ ಡಾಲರ್ (235 ಲಕ್ಷ ಕೋಟಿ ರೂಪಾಯಿ) ತಲುಪಿದೆ. ಅದೇ ಬ್ರಿಟನ್ನಿನ ಜಿಡಿಪಿ 2.83 ಟ್ರಿಲಿಯನ್ ಡಾಲರ್ ಇದೆ. ಅಂದರೆ ನಾವೀಗ ವಿಶ್ವದ ಐದನೇ ಬೃಹತ್ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಿದ್ದೇವೆ. ಒಂದು ಕಾಲದಲ್ಲಿ ಬ್ರಿಟಿಷರು ನಮ್ಮ ಸಂಪತ್ತನ್ನು ದೋಚಿದ್ದರು. ನಾವೀಗ ಅವರನ್ನೂ ಮೀರಿ ಬೆಳೆದಿದ್ದೇವೆ ಎಂಬುದು ಹೆಮ್ಮೆಯ ಸಂಗತಿಯಲ್ಲದೆ ಇನ್ನೇನು?

    ಈ ಸಲ ಸ್ವಾತಂತ್ರೊ್ಯೕತ್ಸವದ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, 2047ರ ಹೊತ್ತಿಗೆ ಭಾರತವನ್ನು ಮುಂದುವರಿದ ರಾಷ್ಟ್ರವಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದಿದ್ದಾರೆ. ಮುಂದುವರಿದ ರಾಷ್ಟ್ರ ಎಂದು ಗುರುತಿಸುವುದೇ ಒಂದು ಕ್ಲಿಷ್ಟ ಆಯಾಮದ ಪ್ರಕ್ರಿಯೆ. ಏಕೆಂದರೆ, ಭೂತಾನ್​ನಂತಹ ದೇಶ ಸಂತಸದ ಸೂಚ್ಯಂಕದಲ್ಲಿ ಮೇಲಿನ ಸ್ಥಾನದಲ್ಲಿರುತ್ತದೆ. ವಿಶ್ವಸಂಸ್ಥೆ, ವಿಶ್ವಬ್ಯಾಂಕ್, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವ ಆರ್ಥಿಕ ವೇದಿಕೆಯಂತಹ ಸಂಸ್ಥೆಗಳು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಗುರುತಿಸಲು ತಮ್ಮದೇ ಆದ ಸೂಚಕಗಳನ್ನು ಬಳಸುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ, ಮುಂದುವರಿದ ದೇಶ ಎಂದು ವ್ಯಾಖ್ಯಾನಿಸಲು – ಅಲ್ಲಿ ಬಡತನದ ಮಟ್ಟ ಕಡಿಮೆ ಇರಬೇಕು; ಜನಸಂಖ್ಯಾ ಬೆಳವಣಿಗೆ ದರ ಕಡಿಮೆ ಪ್ರಮಾಣದಲ್ಲಿರಬೇಕು; ನಿರುದ್ಯೋಗ ಪ್ರಮಾಣ ಕಡಿಮೆ ಇರಬೇಕು; ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಉನ್ನತ ಸ್ಥಾನ ಹೊಂದಿರಬೇಕು. ವಿಶ್ವಸಂಸ್ಥೆಯು ಆಯಾ ದೇಶದ ಜಿಡಿಪಿ ಆಧಾರದ ಮೇಲೆ ಕಡಿಮೆ, ಕಡಿಮೆ ಮಧ್ಯಮ, ಮೇಲ್ಮಧ್ಯಮ ಮತ್ತು ಹೆಚ್ಚಿನ ಆದಾಯದ ದೇಶಗಳು ಎಂದು ವರ್ಗೀಕರಿಸುತ್ತದೆ. ಆ ಪ್ರಕಾರ ಭಾರತವು ಕಡಿಮೆ-ಮಧ್ಯಮ ಆದಾಯದ ಸಾಲಿನಲ್ಲಿದೆ. ಅಭಿವೃದ್ಧಿ ಹೊಂದಿದ ದೇಶ ಎನಿಸಿಕೊಳ್ಳಲು ನಾವು ಮುಂದಿನ ಹಂತಕ್ಕೆ ಹೋಗಬೇಕು.

    ಹೀಗಿದ್ದರೂ, ಸ್ವಾತಂತ್ರೊ್ಯೕತ್ತರ ಭಾರತದ ಪ್ರಗತಿಯನ್ನು ಕಡೆಗಣಿಸುವಂತಿಲ್ಲ. ಆರ್ಥಿಕತೆಯಲ್ಲಿ ಈಗ ಐದನೇ ಸ್ಥಾನದಲ್ಲಿರುವ ಭಾರತ 2050ರ ವೇಳೆಗೆ ಅಮೆರಿಕ ಮತ್ತು ಚೀನಾದ ನಂತರ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದುನಿಲ್ಲಲಿದೆ ಎಂದು ಅನೇಕ ಆರ್ಥಿಕ ಸಂಸ್ಥೆಗಳು ಅಂದಾಜಿಸಿವೆ.

    ಆದರೆ ಇತಿಹಾಸದ ಪುಟಗಳನ್ನು ಗಮನಿಸಿದರೆ, ಭಾರತವು ಜಾಗತಿಕ ಆರ್ಥಿಕತೆಯಲ್ಲಿ ತನ್ನದೇ ಆದ ಪಾರಮ್ಯ ಸಾಧಿಸಿತ್ತು ಎಂಬುದು ಅರಿವಿಗೆ ಬರುತ್ತದೆ. ಅನೇಕ ಅರ್ಥಶಾಸ್ತ್ರಜ್ಞರು ಈ ವಾಸ್ತವವನ್ನು ಗುರುತಿಸಿದ್ದಾರೆ ಮತ್ತು ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಭಾರತ ಹೇಗೆ ಹಿನ್ನಡೆ ಕಾಣುವಂತಾಯಿತು ಎಂಬುದನ್ನು ಸಾಧಾರವಾಗಿ ನಿರೂಪಿಸಿದ್ದಾರೆ. ‘1700ನೇ ಇಸ್ವಿಯಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಪಾಲು ಶೇ. 24.4 ರಷ್ಟಿತ್ತು. 1950ರಲ್ಲಿ ಅದು ಶೇ. 4.2ಕ್ಕೆ ಕುಸಿಯಿತು’ ಎಂದು ಬ್ರಿಟಿಷ್ ಅರ್ಥಶಾಸ್ತ್ರಜ್ಞ ಆಂಗಸ್ ಮ್ಯಾಡಿಸನ್ ಹೇಳಿದ್ದಾರೆ.

    ಭಾರತದಲ್ಲಿ ಆಡಳಿತ ನಡೆಸುತ್ತಿದ್ದಾಗ ಬ್ರಿಟಿಷರು ತಮ್ಮ ದೇಶಕ್ಕೆ ಇಲ್ಲಿಂದ ಅಪಾರ ಪ್ರಮಾಣದ ಧನಕನಕಗಳನ್ನು ಸಾಗಿಸಿದ್ದರು ಎಂಬುದು ನಮಗೆ ಗೊತ್ತಿರುವ ಸಂಗತಿಯೇ. ಇದಕ್ಕೆ ಒಂದು ಉದಾಹರಣೆ ನೀಡುವುದಾದರೆ- ಬ್ರಿಟನ್ ರಾಣಿಯ ಕಿರೀಟದಲ್ಲಿರುವ ವಿಖ್ಯಾತ ಕೊಹಿನೂರ್ ವಜ್ರ. ಇಂಥ ಎಷ್ಟು ಸಂಪತ್ತು ಬ್ರಿಟನ್ ಪಾಲಾಗಿದೆಯೋ! ಅರ್ಥಶಾಸ್ತ್ರಜ್ಞೆ ಉತ್ಸಾ ಪಟ್ನಾಯಕ್ ಅವರು ಈ ಬಗ್ಗೆ ಒಂದು ಸ್ಥೂಲವಾದ ಲೆಕ್ಕ ಕೊಟ್ಟಿದ್ದಾರೆ. ಆ ಅಂದಾಜನ್ನು ನೋಡಿದರೆ ಎದೆಯೊಡೆಯುತ್ತದೆ! 1765-1938ರ ಅವಧಿಯಲ್ಲಿ ಬ್ರಿಟಿಷರು ಭಾರತದಿಂದ ಸಾಗಿಸಿದ ಸಂಪತ್ತಿನ ಮೊತ್ತ ಈಗಿನ ಲೆಕ್ಕದಲ್ಲಿ 45 ಟ್ರಿಲಿಯನ್ ಡಾಲರ್​ಗಳು! ಅಂದರೆ ಇಂದಿನ ಬ್ರಿಟನ್ನಿನ ಜಿಡಿಪಿಯ 17 ಪಟ್ಟು ಆಗುತ್ತದೆ. ಒಂದು ಟ್ರಿಲಿಯನ್ ಅಂದರೆ ಒಂದು ಲಕ್ಷ ಕೋಟಿ ರೂಪಾಯಿ ಎಂಬುದನ್ನು ಗಣಿಸಿದರೆ (ಡಾಲರ್ ಲೆಕ್ಕದಲ್ಲಿ ಸುಮಾರು 80 ಲಕ್ಷ ಕೋಟಿ ರೂ. ಆಗುತ್ತದೆ) ಈ ಮೊತ್ತದ ಅಗಾಧತೆಯನ್ನು ಊಹಿಸಬಹುದು. ಒಂದೊಮ್ಮೆ ಈ ಹಣ ಭಾರತದಲ್ಲೇ ಉಳಿದಿದ್ದರೆ?!

    ಹಾಗಾದರೆ ಬ್ರಿಟಿಷರು ಭಾರತದ ಇಷ್ಟೆಲ್ಲ ಸಂಪತ್ತನ್ನು ಲಪಟಾಯಿಸಿದ್ದು ಹೇಗೆ? ಉತ್ಸಾ ಪಟ್ನಾಯಕ್ ಇದನ್ನು ವಿವರಿಸಿದ್ದಾರೆ. ಬ್ರಿಟಿಷರು ಭಾರತದಲ್ಲಿ ಪಾರಮ್ಯ ಸಾಧಿಸುವ ಮೊದಲು, ಜವಳಿ ಹಾಗೂ ಅಕ್ಕಿಯನ್ನು ಇಲ್ಲಿಂದ ಖರೀದಿಸುತ್ತಿದ್ದರು. ಆಗಿನ ಪದ್ಧತಿ ಪ್ರಕಾರ, ಬಹುತೇಕ ಬೆಳ್ಳಿಯ ಮೂಲಕ ಪಾವತಿಸುತ್ತಿದ್ದರು. ಆದರೆ, 1765ರ ಹೊತ್ತಿಗೆ ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರದಲ್ಲಿ ಹಿಡಿತ ಸಾಧಿಸಿದ ತರುವಾಯ ಈ ಸನ್ನಿವೇಶ ಬದಲಾಯಿತು. ಶುರುವಿನಲ್ಲಿ ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ತೆರಿಗೆ ಸಂಗ್ರಹಿಸಲು ತೊಡಗಿತು. ಕ್ರಮೇಣ ಎಂಥ ಚಾಲಾಕಿತನ ಮಾಡಿದರೆಂದರೆ, ಹೀಗೆ ಸಂಗ್ರಹಿಸಿದ ತೆರಿಗೆಯಲ್ಲಿಯೇ ಸುಮಾರು ಶೇ.30 ಭಾಗವನ್ನು ಭಾರತದಿಂದ ಖರೀದಿಸುವ ವಸ್ತುಗಳಿಗೆ ಪಾವತಿಸಲು ಬಳಸತೊಡಗಿದರು. ತಮ್ಮ ಕಿಸೆಯಿಂದ ವ್ಯಯಿಸಲಿಲ್ಲ. ಬ್ರಿಟಿಷ್ ವ್ಯಾಪಾರಿಗಳೂ ಭಾರತದ ರೈತರು ಹಾಗೂ ನೇಕಾರರಿಂದ ಅವರಿಂದಲೇ ಸಂಗ್ರಹಿಸಿದ ತೆರಿಗೆ ಹಣ ಬಳಸಿ ವಸ್ತು ಖರೀದಿಸತೊಡಗಿದರು. ತೆರಿಗೆ ಸಂಗ್ರಹಿಸುವ ಏಜೆಂಟ್ ಹಾಗೂ ವಸ್ತು ಖರೀದಿ ಮಾಡುವವ ಬೇರೆಬೇರೆಯಾಗಿದ್ದುದರಿಂದ ವಾಸ್ತವದಲ್ಲಿ ಏನಾಗುತ್ತಿದೆ ಎಂಬ ಅರಿವು ಜನರಿಗಾಗಲಿಲ್ಲ ಎಂದು ಉತ್ಸಾ ಪಟ್ನಾಯಕ್ ವಿಶ್ಲೇಷಿಸುತ್ತಾರೆ. ಬ್ರಿಟಿಷರು ಹೀಗೆ ಖರೀದಿಸಿದ್ದರಲ್ಲಿ ಕೆಲ ಪ್ರಮಾಣವನ್ನು ತಾವು ಬಳಸಿ, ಕೆಲವನ್ನು ಇತರ ದೇಶಗಳಿಗೆ ರಫ್ತು ಮಾಡಿದರು. ಹೀಗೆ ಮಾಡುವಾಗ ತಾವು ಮೂಲದಲ್ಲಿ ಖರೀದಿಸಿದ್ದಕ್ಕಿಂತ ಹೆಚ್ಚಿನ ದರಕ್ಕೆ ಮಾರಿದರು. ಇದಲ್ಲದೆ, ಹಲವು ದೇಶಗಳಲ್ಲಿ ಬ್ರಿಟನ್ ನಡೆಸಿದ ಯುದ್ಧದ ಖರ್ಚುಗಳಿಗೆ ಭಾರತದ ಹಣವನ್ನು ಬಳಸಿತು ಎಂದು ಕೂಡ ಉತ್ಸಾ ಪಟ್ನಾಯಕ್ ದಾಖಲಿಸಿದ್ದಾರೆ.

    ಅಭಿವೃದ್ಧಿ ಹೊಂದಿದ ದೇಶ ಎನಿಸಿಕೊಳ್ಳಲು ಆರ್ಥಿಕವಾಗಿ, ಸಾಮಾಜಿಕವಾಗಿ ನಮ್ಮ ಸ್ಥಿತಿಗತಿ ಸುಧಾರಿಸಬೇಕು ಎಂಬುದನ್ನು ಒಪ್ಪೋಣ. ಆದರೆ ಅದೇ ಸಂದರ್ಭದಲ್ಲಿ ಮಾನವನ ಅಂತರಂಗದ ಜಗತ್ತು ಹಾಗೂ ಧಾರ್ವಿುಕ-ಆಧ್ಯಾತ್ಮಿಕ ವಿಷಯದಲ್ಲಿ ಭಾರತದ ಮೇರುವನ್ನು ಮರೆಯದಿರೋಣ. ಹಾಗೆನೋಡಿದರೆ, ಲೌಕಿಕ ಜಗತ್ತಿನಲ್ಲಿ ತಾವರೆ ಎಲೆಯ ಮೇಲಿನ ಹನಿಯ ಹಾಗೆ ಇದ್ದುಕೊಂಡು, ಪಾರಲೌಕಿಕ ಬದುಕಿನತ್ತ ಸಾಧನೆ ಮಾಡುತ್ತಿರಬೇಕೆನ್ನುವುದು ಹಿಂದುವಿನ ಸಿದ್ಧಾಂತ. ಸಹಸ್ರಾರು ಸಂಖ್ಯೆಯ ಋಷಿಮುನಿಗಳು ಈ ದಾರಿಯಲ್ಲಿ ದೀಪವನ್ನು ಬೆಳಗಿಸಿಟ್ಟಿದ್ದಾರೆ. ಹಾಗಂತ ಲೌಕಿಕ ಅಥವಾ ಭೌತಿಕ ಬದುಕನ್ನು ನಿರಾಕರಿಸಬೇಕು ಎಂದು ಭಾರತೀಯ ಸಿದ್ಧಾಂತ ಹೇಳುವುದಿಲ್ಲ ಅಥವಾ ಆಗ್ರಹಿಸುವುದಿಲ್ಲ. ಇಲ್ಲಿದ್ದುಕೊಂಡೇ ಅಲೌಕಿಕತೆಯತ್ತ ತುಡಿಯಬೇಕೆನ್ನುವುದನ್ನು ಬೋಧಿಸುತ್ತದೆ. ಹೀಗಾಗಿಯೇ ನಮ್ಮಲ್ಲಿ ಮೊದಲಿನಿಂದಲೂ ಲಕ್ಷ್ಮಿ ಅಂದರೆ ಹಣ ಅಥವಾ ಸಂಪತ್ತಿಗಿಂತ ಸರಸ್ವತಿ ಅಂದರೆ ವಿದ್ಯೆಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಈಗ ಸರಸ್ವತಿ ಇದ್ದರೆ ಲಕ್ಷ್ಮಿ ಬಂದಹಾಗೇ ಎನ್ನಿ. ಏಕೆಂದರೆ, ಇದು ಜ್ಞಾನಯುಗ. ಈಗ ಒಂದು ವಿನೂತನ ಬಿಜಿನೆಸ್ ಐಡಿಯಾ ಹುಡುಕಿದವ ರಾತ್ರೋರಾತ್ರಿ ಕೋಟ್ಯಧೀಶನಾಗಬಲ್ಲ.

    ಮಹಾನ್ ಸಂತ ಶ್ರೀ ಶ್ರೀಧರ ಸ್ವಾಮಿಗಳು ವಿವಿಧ ವಿಷಯಗಳಲ್ಲಿ ಸಾವಿರಾರು ಪ್ರವಚನ ನೀಡಿದ್ದಾರೆ; ಅನೇಕ ಕೃತಿಗಳನ್ನು ರಚಿಸಿದ್ದಾರೆ. ಲೌಕಿಕ ಬದುಕಿನ ಕರ್ತವ್ಯಗಳನ್ನು ನೆರವೇರಿಸುತ್ತಲೇ ಹೇಗೆ ಪಾರಮಾರ್ಥಿಕ ಆಸಕ್ತಿಯನ್ನೂ ಬೆಳೆಸಿಕೊಳ್ಳಬೇಕೆಂಬುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಅದೇ ವೇಳೆ, ಅವರು ಭಾಗವತ, ಪುರಾಣೋಪನಿಷತ್ತು ಇತ್ಯಾದಿ ಉಲ್ಲೇಖಿಸಿ ಭಾರತದ ಮಹಿಮೆಯನ್ನು ಕಟ್ಟಿಕೊಟ್ಟಿರುವ ಪರಿ ಮನೋಜ್ಞವಾಗಿದೆ. ಶ್ರೀಧರ ಸ್ವಾಮಿಗಳ ಮಾತಿನಲ್ಲೇ (‘ಶ್ರೀಧರ ವಚನಾಮೃತ’ ಕೃತಿಯಿಂದ) ಕೆಲವನ್ನು ಪರಿಶೀಲಿಸುವುದಾದರೆ-

    ‘ಧನ್ಯಾಸ್ತು ತೇ ಭಾರತದಿಗ್ವಿಭಾಗೇ- ಈ ಭಾರತದಲ್ಲಿ ಜನ್ಮವೆತ್ತುವವರು ಧನ್ಯಧನ್ಯರು ಎಂದು ಪಾಡಿಪೊಗಳುವರು. ಭಾರತದ ಮಾಹಾತ್ಮ್ಯ ಹೆಚ್ಚುಗಾರಿಕೆಯೇ ಅದಕ್ಕೆ ಕಾರಣ. ಶಂಕರಾನಂದರು ಗೀತೆಯ ಮೇಲೆ ಬರೆದಿರುವ ಟೀಕೆಯಲ್ಲಿ, ‘ಭಾ ಬ್ರಹ್ಮವಿದ್ಯಾ/ತಸ್ ಯಾಮೇವ ರಮತ ಇತಿ ಭಾರತಃ’ ಭಾರತದೇಶ ಅಂದರೆ- ಭಾ ಅಂದರೆ ಬ್ರಹ್ಮವಿದ್ಯೆ. ಆ ಬ್ರಹ್ಮವಿದ್ಯೆಯಲ್ಲಿ ರಮಿಸತಕ್ಕ ದೇಶ ಅಥವಾ ಆ ಭಾರತದಲ್ಲಿ ಇರುವ ಜನರು ಭಾರತೀಯರು. ಆದ್ದರಿಂದಲೇ ಭಾರತಕ್ಕೆ ಅಷ್ಟೊಂದು ಮಹತ್ವ ಪ್ರಾಪ್ತವಾಗಿರುವುದು.

    ದೇವತೆಗಳು ಸಹ ಆಲೋಚನೆ ಮಾಡುವರು- ಆ ಭಾರತವರ್ಷದಲ್ಲಿ ಜನಿಸಿರುತ್ತಾರಲ್ಲ, ಅವರು ಅಂಥದ್ದು ಏನು ಪುಣ್ಯ ಮಾಡಿರಲಿಕ್ಕೆ ಸಾಕು?

    ಈ ಭಾರತದೇಶದಲ್ಲಿ ಜನ್ಮ ಎತ್ತಿದ ಜನರ ಸೌಭಾಗ್ಯ ಅಹೋಭಾಗ್ಯ! ಆಹಾ! ಅವರು ಏನು ಪುಣ್ಯ ಮಾಡಿರುತ್ತಾರೊ? ಅಷ್ಟೇ ದೊಡ್ಡದಿರಬೇಕು ಅದು. ಇಲ್ಲವಾದರೆ ಸಾಮಾನ್ಯಪುಣ್ಯಕ್ಕೆ ಅಲ್ಲಿ ಜನ್ಮವೆತ್ತಲಿಕ್ಕೆ ಸಾಧ್ಯವಿಲ್ಲ. ಅಥವಾ ಆ ಭಾರತವರ್ಷದಲ್ಲಿ ಜನ್ಮವೆತ್ತಿದ ಮಾತ್ರಕ್ಕೆ ಆ ಶ್ರೀಹರಿಯು ಅಷ್ಟು ಸಂತುಷ್ಟನಾಗುತ್ತಾನೋ ಹೇಗೆ? ಅದು ಕೂಡ ಆ ಸಂಭವನೀಯವಾದುದೇ ಸರಿ. ಭಾರತವರ್ಷದ ಮಾಹಾತ್ಮ್ಯೇ ಹಾಗೆ.’ ಮುಂದುವರಿದು ಶ್ರೀಧರರು ವ್ಯಾಖ್ಯಾನಿಸುತ್ತಾರೆ- ‘ಈ ಮುಂದಾದರೂ ಜನ್ಮ ಎತ್ತುವುದಾದರೆ ಕೃತಕರ್ಮಶೇಷದಿಂದ ಭಾರತವರ್ಷದಲ್ಲೇ ನಾವು ಜನಿಸಬೇಕೆಂದು ದೇವತೆಗಳು ಮನಸ್ಸಿನಲ್ಲಿ ಸಂಕಲ್ಪಿಸುವರು. ಈ ವಿಧವಾಗಿದೆ ಭಾರತವರ್ಷದ ಹಿರಿಮೆ.’

    ವಿಷ್ಣುಪುರಾಣದ ಶ್ಲೋಕವೊಂದನ್ನು ಉದ್ಧರಿಸಿ ಶ್ರೀಧರ ಸ್ವಾಮಿಗಳು ಹೀಗೆನ್ನುತ್ತಾರೆ:‘ ಜಂಬೂದ್ವೀಪದಲ್ಲಿ ಮತ್ತೂ ಎಷ್ಟೋ ವರ್ಷಗಳು, ದೇಶಗಳು ಇದ್ದಾವೆ. ಆ ಎಲ್ಲಾ ದೇಶಗಳಲ್ಲಿ ಭಾರತ ಬಲು ಹೆಚ್ಚಿನದು. ಇದು ಕರ್ಮಭೂಮಿ. ಇಲ್ಲಿ ಕರ್ಮಮಾಡಿದರೆ ತನ್ನ ಕೃತಿಯಿಂದ ನರನು ನಾರಾಯಣನಾಗಬಲ್ಲನು. ಬಾಕಿಯೆಲ್ಲಾ ದೇಶಗಳು ಭೋಗಭೂಮಿ. ಅಲ್ಲಿ ಮಾಡಿದ ಕರ್ಮದ ಫಲವನ್ನು ಅನುಭವಿಸುವುದಷ್ಟೇ ಅಲ್ಲದೆ ಇನ್ನಷ್ಟು ಮಾಡಿ ಮತ್ತಷ್ಟು ಹೆಚ್ಚಿನ ಪದ ಗಳಿಸಲಿಕ್ಕಾಗುವುದಿಲ್ಲ. ಭಾರತಭೂಮಿಯಲ್ಲಿ ಹಾಗಲ್ಲ. ಎಷ್ಟು ಪಡೆದಿದ್ದಾನೋ ಅದಕ್ಕಿಂತಲೂ ಹೆಚ್ಚು ಪಡೆದು, ಎಲ್ಲಕ್ಕಿಂತಲೂ ಹೆಚ್ಚಿನದಾದ ಆ ಪರಮಾತ್ಮನ ಪದ ಪಡೆದು ಪರಮಾತ್ಮನೇ ಆಗಿಬಿಡುವುದೂ ಸಾಧ್ಯ. ಹೀಗೆ ಇಲ್ಲಿ ಜನ್ಮ ಎತ್ತುವುದು ಬಹಳ ಪುಣ್ಯದ ಫಲ. ಸುಕೃತದ ಪರಿಪಾಕ.’

    ಕೊನೇ ಮಾತು: ಗೌತಮ್ ಅದಾನಿ, ಮುಕೇಶ್ ಅಂಬಾನಿ ಮುಂತಾದ ಸಿರಿವಂತರು ಜಾಗತಿಕ ಕುಬೇರರ ಪಟ್ಟಿಯಲ್ಲಿ ಸ್ಥಾನಪಡೆದು ಸುದ್ದಿಯಾಗುತ್ತಿದ್ದಾರೆ. ಇವರು ಭಾರತದವರು ಎಂಬುದು ಖುಷಿಯೇ. ಅದೇ ಹೊತ್ತಿಗೆ, ನಮ್ಮಲ್ಲಿ ಬಡವರ ಪ್ರಮಾಣವೂ ದೊಡ್ಡದಿದೆ. ಹೊಟ್ಟೆ ಹಸಿದಿದ್ದಾಗ ಧರ್ಮದ ಮಾತಾಡಿದರೆ ಪ್ರಯೋಜನವಾಗದು. ಜೀವನ ನಿರ್ವಹಣೆಗೆ ತೊಂದರೆ ಇಲ್ಲದಿದ್ದಾಗ ಧರ್ಮ-ಅಧ್ಯಾತ್ಮ ರುಚಿಸುತ್ತದೆ. ಲೌಕಿಕ-ಅಲೌಕಿಕದ ಸಮನ್ವಯದಿಂದ ಭಾರತ ಇನ್ನಷ್ಟು ಬೆಳಗಬಲ್ಲದು!

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts