

ಬೆಂಗಳೂರು: ರಾಜ್ಯದ ಜನತೆಗೆ ಇದು ಶಾಕಿಂಗ್ ನ್ಯೂಸ್ ಎಂದರೂ ತಪ್ಪೇನಲ್ಲ. ಏಕೆಂದರೆ ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಮತ್ತೆ ಹೆಚ್ಚಿಸಿದೆ. ಆ ಮೂಲಕ ಜನರಿಗೆ ಶಾಕ್ ಕೊಟ್ಟಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಈ ಏರಿಕೆಯನ್ನು ಮಾಡಿದೆ.
ಇದೇ ಏಪ್ರಿಲ್ನಲ್ಲಿ ವಿದ್ಯುತ್ ಬೆಲೆ ಏರಿಕೆ ಬಿಸಿ ಅನುಭವಿಸಿದ್ದ ಗ್ರಾಹಕರು ಈಗ ಮತ್ತೆ ಇನ್ನೊಮ್ಮೆ ದರ ಹೆಚ್ಚಳದ ಹೊರೆ ಹೊರುವಂತಾಗಿದೆ. ಈ ಸಲ ಕೆಇಆರ್ಸಿ ಪ್ರತಿ ಯುನಿಟ್ಗೆ 24 ಪೈಸೆಯಿಂದ 43 ಪೈಸೆ ತನಕ ಏರಿಕೆ ಮಾಡಿದೆ.
ಇಂಧನ ಹೊಂದಾಣಿಕೆ ಮೂಲಕ ಪ್ರತಿ 3 ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡಲು ಕೇಂದ್ರೀಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸೂಚನೆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ನಡೆಯುತ್ತಿದೆ ಎಂದು ಕೆಇಆರ್ಸಿ ಆದೇಶ ಸ್ಪಷ್ಟಪಡಿಸಿದೆ. ಈ ಬೆಲೆಗಳು 2023ರ ಮಾರ್ಚ್ ಅಂತ್ಯದ ತನಕ ಜಾರಿಯಲ್ಲಿರುತ್ತವೆ ಎಂದು ಆದೇಶದಲ್ಲಿ ತಿಳಿಸಿದೆ.
ಕಳೆದ ಏಪ್ರಿಲ್ನಲ್ಲಿ ಪ್ರತಿ ಯುನಿಟ್ಗೆ ಸರಾಸರಿ 35 ಪೈಸೆ ಏರಿಕೆ ಮಾಡಲಾಗಿತ್ತು. ಹಾಲಿ ಪರಿಷ್ಕರಣೆಯಿಂದ 6 ತಿಂಗಳ ಅವಧಿಯಲ್ಲಿ 70 ಪೈಸೆ ಏರಿಕೆ ಆದಂತಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯುನಿಟ್ ವಿದ್ಯುತ್ ಬೆಲೆ 40 ರಿಂದ 43 ಪೈಸೆ ಹೆಚ್ಚಳವಾಗಲಿದೆ.