ರೆಸಾರ್ಟಲ್ಲಿ ಯುವತಿಯ ಕೊಲೆ, ಬಿಜೆಪಿ ಮಾಜಿ ಸಚಿವನ ಪುತ್ರ ಅರೆಸ್ಟ್; ವಾರದ ಹಿಂದೆ ನಾಪತ್ತೆ ಆಗಿದ್ದ ಉದ್ಯೋಗಿ..

Arrest
Published on

ಉತ್ತರಾಖಂಡ: ವಾರದ ಹಿಂದೆ ನಾಪತ್ತೆ ಆಗಿದ್ದ ಯುವತಿಯೊಬ್ಬಳ ಕೊಲೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರೊಬ್ಬರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ ಆತನ ರೆಸಾರ್ಟ್​​ನಲ್ಲೇ ಈ ಮಹಿಳೆಯ ಕೊಲೆ ನಡೆದಿತ್ತು.

ಉತ್ತರಾಖಂಡದಲ್ಲಿನ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ವಿನೋದ್ ಆರ್ಯ ಎಂಬವರ ಪುತ್ರ ಪುಳ್ಕಿತ್ ಆರ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹರಿದ್ವಾರದ ರಿಷಿಕೇಶ್​ನಲ್ಲಿರುವ ಪುಳ್ಕಿತ್ ಮಾಲೀಕತ್ವದ ರೆಸಾರ್ಟ್​ನಲ್ಲಿ ನಡೆದ 19ರ ವಯಸ್ಸಿನ ಯುವತಿಯ ಕೊಲೆಗೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ. ಜತೆಗೆ ಇನ್ನಿಬ್ಬರು ಸಿಬ್ಬಂದಿಯನ್ನೂ ಬಂಧಿಸಲಾಗಿದೆ.

ಕೊಲೆಗೀಡಾಗಿರುವ ಯುವತಿ ಇದೇ ರೆಸಾರ್ಟ್​​ನಲ್ಲೇ ಉದ್ಯೋಗಿಯಾಗಿದ್ದು, ವಾರದ ಹಿಂದೆ ಕಾಣೆಯಾಗಿದ್ದಳು. ಈ ವಿಷಯ ಪುಳ್ಕಿತ್ ಹೆಸರಿನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪುಳ್ಕಿತ್​ನನ್ನು ಬಂಧಿಸಿದ್ದಾರೆ.

ಆರೋಪಿಗಳು ಆರಂಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಆದರೆ ಬಳಿಕ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಪರಾಧ ಎಸಗಿದ್ದನ್ನು ಒಪ್ಪಿಕೊಂಡಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಯುವತಿಯ ಶವಕ್ಕಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net