More

    ಲೈಂಗಿಕ ದೌರ್ಜನ್ಯ ಪ್ರಕರಣ ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆಯಾಗಲಿ: ನಗರದಲ್ಲಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

    ಮಂಡ್ಯ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ನಿಷ್ಪಕ್ಷಪಾತ, ಪ್ರಾಮಾಣಿಕ ತನಿಖೆ ನಡೆಯುವ ಬಗ್ಗೆ ಅನುಮಾನ ಇರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
    ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟ ಸಮಿತಿಯ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ  ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು. ರಾಜಕಾರಣಿಗಳ ಹೆಣ್ಣು ಬಾಕತನದಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿದ್ದು, ಅಧಿಕಾರ ಹಣ ಬಲದಿಂದ ಕಾನೂನು, ಸಂವಿಧಾನಕ್ಕೆ ಕಿಮ್ಮತ್ತು ನೀಡದ ಹೆಣ್ಣು ಬಾಕ ಜನಪ್ರತಿನಿಧಿಗಳಿಗೆ ಕಾಯಾರ್ಂಗ, ಶಾಸಕಾಂಗ ಸಹಕಾರ ನೀಡುತ್ತಿದೆ. ಇದಕ್ಕೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಎಚ್.ವೈ.ಮೇಟಿ, ರೇಣುಕಾಚಾರ್ಯ, ರಾಮದಾಸ್ ಮತ್ತು ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಸಾಕ್ಷಿಯಾಗಿವೆ. ಇಂತಹ ಹಗರಣದ ಬಗ್ಗೆ ಕಾರ್ಯಾಂಗ ವ್ಯವಸ್ಥೆಗೆ ಗೊತ್ತಿದ್ದರೂ ಕಾನೂನು ಕ್ರಮವಹಿಸದೆ ಪ್ರಕರಣ ತಿರುಚಿ ಸಂತ್ರಸ್ತರನ್ನು ಬಲಿ ಮಾಡುವ ಸಂವಿಧಾನ ದ್ರೋಹಿ ಹೀನ ಕೃತ್ಯ ಕಾಣುತ್ತಿದ್ದೇವೆ ಎಂದು ಆರೋಪಿಸಿದರು.
    ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರ ಮತ್ತು ಹಣ ಬಲ ದುರ್ಬಳಕೆ ಮಾಡಿಕೊಂಡು ನೊಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದು, ಕಿಡಿಗೇಡಿಗಳು ಪೆನ್‌ಡ್ರೈವ್ ಬಿಡುಗಡೆ ಮಾಡುವ ಮೂಲಕ ಮಹಿಳೆಯರ ಖಾಸಗಿ ಜೀವನ ಪ್ರದರ್ಶಿಸಿ ಮಾನಹಾನಿ ಮಾಡುತ್ತಿದ್ದಾರೆ. ಇಂತಹ ಬಹು ದೊಡ್ಡ ಲೈಂಗಿಕ ಹಗರಣ ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆಯ ಗುಪ್ತಚರ ವ್ಯವಸ್ಥೆ ವಿಫಲವಾಗಿದ್ದು, ಜತೆಗೆ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವೈಪಲ್ಯವಾಗಿದೆ ಎಂದು ದೂರಿದರು.
    ಲೈಂಗಿಕ ಹಗರಣ ಬೆಳಕಿಗೆ ಬಂದ ನಂತರ ರಾಜಕೀಯ ತೇಜೋವಧೆ ಮಾಡಲಾಗುತ್ತಿದೆ ವಿನಃ ಸಂತ್ರಸ್ತ ಮಹಿಳೆಯರ ಮಾನ ಉಳಿಸುವ ಮತ್ತು ನ್ಯಾಯ ದೊರಕಿಸಿ ಕೊಡುವ ಕೆಲಸ ನಡೆಯುತ್ತಿಲ್ಲ. ಇದುವರೆಗೆ ನಡೆದಿರುವ ಲೈಂಗಿಕ ಹಗರಣದಲ್ಲಿ ಯಾವುದೇ ಒಬ್ಬ ಜನಪ್ರತಿನಿಧಿಗೆ ಶಿಕ್ಷೆಯಾದ ನಿದರ್ಶನವಿಲ್ಲ. ಬದಲಾಗಿ ಕಾನೂನು ವ್ಯವಸ್ಥೆ ಜನಸಾಮಾನ್ಯರನ್ನು ಮಾತ್ರ ಶಿಕ್ಷಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ರಾಜ್ಯದ ಮಹಿಳೆಯರ ಮಾನ ಪ್ರಾಣ ಸಂರಕ್ಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಡಿ.ರೇವಣ್ಣ ಹಾಗೂ ಪೆನ್‌ಡ್ರೈವ್ ಬಿಡುಗಡೆ ಮಾಡಿರುವ ಎಲ್ಲರಿಗೂ ಕಠಿಣ ಶಿಕ್ಷೆ ನೀಡಬೇಕು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸಲು ನಿರ್ದೇಶಿಸಬೇಕು. ಸಂತ್ರಸ್ತ ಮಹಿಳೆಯರ ಖಾಸಗಿ ಜೀವನದ ಗೌಪ್ಯತೆ ಕಾಪಾಡಲು ತನಿಖಾ ತಂಡಕ್ಕೆ ಸೂಚಿಸಬೇಕು. ಹಗರಣದ ಎಲ್ಲ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಅನಿಲ್‌ಕುಮಾರ್,  ಕೆ.ಎಂ.ಶ್ರೀನಿವಾಸ್, ಎಸ್.ಕುಮಾರ್, ಭಾಗ್ಯಮ್ಮ, ಗೀತಾ, ಸುಕನ್ಯಾ, ಸೋಮಶೇಖರ್, ಸುರೇಶ್‌ಕುಮಾರ್, ಬಿ.ಆನಂದ, ಚನ್ನಕೇಶವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts