

ಒಂದು ಕಾಲಕ್ಕೆ ಅಮಿತಾಭ್ ಬಚ್ಚನ್ ಅವರನ್ನು ಪ್ಯಾಶನ್ ಐಕಾನ್ ಎಂದು ಕರೆಯಲಾಗುತಿತ್ತು. ಅವರು ಏನು ಮಾಡಿದರೂ ಸ್ಟೈಲು ಎಂದು ಪರಿಗಣಿಸಲಾಗಿತ್ತು. ಆದರೆ, ತಾವು ಮಾಡಿದ್ದೆಲ್ಲವೂ ಸ್ಟೈಲ್ ಅಲ್ಲ, ಕೆಲವೊಮ್ಮೆ ಮಾಡಿಕೊಂಡ ಎಡವಟ್ಟು ಮುಚ್ಚಿಹಾಕುವುದಕ್ಕೆ ಏನೋ ಪ್ರಯತ್ನ ಮಾಡಿ, ಅದು ಸ್ಟೈಲ್ ಆಗಿ ಕಾಣಿಸಿದ್ದೂ ಇದೆ ಎಂದು ಅಮಿತಾಭ್ ಹೇಳಿಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಅಭಿನಯದ ‘ಶರಾಬಿ’ ಚಿತ್ರ ನೆನಪಿರಬಹುದು. ಅದರಲ್ಲಿ ಹಾಡೊಂದರಲ್ಲಿ ಅವರು ಒಂದು ಕೈಯಲ್ಲಿ ಗ್ಲಾಸ್ ಇಟ್ಟುಕೊಂಡು, ಎಡಗೈಯನ್ನು ಕೋಟ್ ಜೇಬೊಳಗಿಟ್ಟುಕೊಂಡು ಡ್ಯಾನ್ಸ್ ಮಾಡುವ ದೃಶ್ಯವಿದೆ. ಅದು ಆ ಕಾಲಕ್ಕೆ ಸಖತ್ ಸ್ಟೈಲ್ ಎಂದು ಪರಿಗಣಿಸಲಾಗಿತ್ತಂತೆ. ಪಾರ್ಟಿಗಳಲ್ಲಿ ಎಷ್ಟೋ ಜನ ಅದೇ ಡ್ಯಾನ್ಸ್ ಮಾಡಿದ ಉದಾಹರಣೆಗಳಿವೆಯಂತೆ. ಅದೇ ತರಹ ‘ಇಂಕ್ವಿಲಾಬ್’ ಎಂಬ ಚಿತ್ರದಲ್ಲಿ ಅಮಿತಾಭ್ ತಮ್ಮ ಎಡಗೈಗೆ ಕರ್ಚೀು ಕಟ್ಟಿಕೊಂಡಿರುತ್ತಾರೆ. ಇದು ಸಹ ಸ್ಟೈಲ್ ಸ್ಟೇಟ್‌ಮೆಂಟ್ ಎಂದು ಹೇಳಲಾಗಿತ್ತು.
ಆದರೆ, ಇವೆರೆಡೂ ಮಾಡಿಕೊಂಡ ಎಡವಟ್ಟನ್ನು ಮುಚ್ಚಿಹಾಕುವ ಪ್ರಯತ್ನ ಮಾಡಲಾಗಿತ್ತು ಎಂದು ಹೇಳಿಕೊಂಡಿದ್ದಾರೆ ಅಮಿತಾಭ್. ಇತ್ತೀಚೆಗೆ, ಈ ಕುರಿತು ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಅವರು, ಇಂಥದ್ದೆಲ್ಲಾ ಯಾಕೆ ಮಾಡಬೇಕಾಯಿತು ಎಂದು ವಿವರಿಸಿದ್ದಾರೆ.
ಅಮಿತಾಭ್ ಹೇಳುವಂತೆ, ಇಷ್ಟೆಲ್ಲಾ ಮಾಡುವುದಕ್ಕೆ ಕಾರಣ, ಕೈಯಲ್ಲಿ ಪಟಾಕಿ ಸಿಡಿದಿದ್ದು. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚುವುದಕ್ಕೆ ಹೋದಾಗ, ಅಮಿತಾಭ್ ಅವರ ಕೈಯಲ್ಲಿ ಪಟಾಕಿ ಸಿಡಿದು ಗಾಯವಾಯಿತಂತೆ. ಹಬ್ಬ ಮುಗಿಯುತ್ತಿದ್ದಂತೆಯೇ ‘ಇಂಕ್ವಿಲಾಬ್’ ಮತ್ತು ‘ಶರಾಬಿ’ ಚಿತ್ರಗಳ ಹಾಡುಗಳ ಚಿತ್ರೀಕರಣದಲ್ಲಿ ಭಾಗವಹಿಸಬೇಕಿತ್ತಂತೆ. ಆದರೆ, ಕೈಯಲ್ಲಿ ಬ್ಯಾಂಡೇಜ್ ಇರುವುದರಿಂದ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಒಂದು ಕಡೆ ಚಿತ್ರೀಕರಣದಲ್ಲೂ ಭಾಗವಹಿಸಬೇಕು, ಇನ್ನೊಂದು ಕಡೆ ಬ್ಯಾಂಡೇಜ್ ಸಹ ಕಾಣಬಾರದು ... ಈ ಬಗ್ಗೆ ಏನು ಮಾಡಬೇಕು ಎಂದು ಯೋಚಿಸಿದಾಗ ಐಡಿಯಾ ಹೊಳೆಯಿತಂತೆ.
ಅದರಂತೆ ‘ಇಂಕ್ವಿಲಾಬ್’ ಚಿತ್ರದ ಹಾಡಿನಲ್ಲಿ, ಅಮಿತಾಭ್ ಅವರು ತಮ್ಮ ಎಡಗೈಗೆ ಕರ್ಚೀು ಕಟ್ಟಿಕೊಂಡು ಕುಣಿದರೆ, ‘ಶರಾಬಿ’ ಚಿತ್ರದ ಹಾಡಿನಲ್ಲಿ ತಮ್ಮ ಎಡಗೈಯನ್ನು ಕೋಟಿನಲ್ಲಿಟ್ಟುಕೊಂಡು ಕುಣಿದಿದ್ದಾರೆ. ಇವೆರೆಡೂ ಕಾಲಕ್ರಮೇಣ ಸ್ಟೈಲ್ ಎಂದು ಪರಿಗಣಿತವಾಗಿದೆ. ಆದರೆ, ಇದು ಸ್ಟೈಲ್ ಅಲ್ಲ ಎಂದು ಅದರ ಹಿಂದಿನ ರಹಸ್ಯವನ್ನು ಅಮಿತಾಭ್ ಇದೀಗ ಬಿಚ್ಚಿಟ್ಟಿದ್ದಾರೆ.