ಸುಪ್ರೀಂ ಕೋರ್ಟ್‌ ತೀರ್ಪಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಕೈ' ನಾಯಕ ಕರಣ್​ಸಿಂಗ್​ ಸ್ವಾಗತ

sha-karan singh
Published on

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ ಆರ್ಟಿಕಲ್ 370 ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತಿಸಿದ್ದಾರೆ.

2019ರ ಆಗಸ್ಟ್‌ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ನಿಲುವಿನೊಂದಿಗೆ ನಮ್ಮ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಆರ್ಟಿಕಲ್ 370 ರದ್ದು ಮಾಡಿತ್ತು. ಸದ್ಯ ಆ ರಾಜ್ಯದಲ್ಲಿ ಜನ ಜೀವನ ಸಾಮಾನ್ಯ ಸ್ಥಿತಿಗೆ ಬರುತ್ತಿದ್ದು, ಅಭಿವೃದ್ದಿ ಕಾಣುತ್ತಿದೆ. ಮಾನವ ಜೀವನ ಮಟ್ಟ ಸುಧಾರಿಸುತ್ತಿದೆ. ಹಿಂಸೆ ನಿಂತು ಹೋಗಿದೆ. ಪ್ರವಾಸೋದ್ಯ, ಕೃಷಿ ಸೇರಿದಂತೆ ಹಲವು ವಲಯಗಳು ಅಭಿವೃದ್ದಿ ಕಾಣುತ್ತಿದ್ದು, ಸಮೃದ್ಧಿ ಮನೆ ಮಾಡಿದೆ. ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಜನತೆಯ ಆದಾಯದ ಮಟ್ಟವೂ ಏರಿಕೆ ಆಗಿದೆ ಎಂದು ಅಮಿತ್ ಶಾ ವಿವರಿಸಿದ್ದಾರೆ.

ಈ ಎಲ್ಲಾ ಧನಾತ್ಮಕ ಬೆಳವಣಿಗೆಗಳಿಗೆ ಪೂರಕ ಎಂಬಂತೆ ಇದೀಗ ಸುಪ್ರೀಂ ಕೋರ್ಟ್‌ ಕೂಡಾ ಆರ್ಟಿಕಲ್ 370 ರದ್ದತಿ ಸಂವಿಧಾನಬದ್ಧ ಎಂದು ಹೇಳಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಕರಣ್​ ಸಿಂಗ್​ ಸ್ವಾಗತ: ಕಾಂಗ್ರೆಸ್ ಹಿರಿಯ ನಾಯಕ, ಮಹಾರಾಜ ಹರಿ ಸಿಂಗ್ ಅವರ ಪುತ್ರ ಕರಣ್ ಸಿಂಗ್ ತೀರ್ಪನ್ನು ಸಂತಸ ವ್ಯಕ್ತಪಡಿಸಿದ್ದಾರೆ. ಇದುವರೆಗೆ ಏನೆಲ್ಲ ಬೆಳವಣಿಗೆಗಳು ಆಗಿವೆಯೋ ಅವೆಲ್ಲವೂ ಸಂವಿಧಾನ ಬದ್ಧವಾಗಿವೆ ಎಂದಂತಾಯ್ತು. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಅವರು ಆದಷ್ಟು ಬೇಗ ಮತ್ತೆ ರಾಜ್ಯದ ಸ್ಥಾನಮಾನವನ್ನ ಪುನರ್‌ ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

1947ರಲ್ಲಿ ಮಹಾರಾಜ ಹರಿ ಸಿಂಗ್ ತಮ್ಮ ಆಳ್ವಿಕೆಯಲ್ಲಿದ್ದ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಜತೆ ವಿಲೀನ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದೀಗ ಅವರ ಪುತ್ರ ಕರಣ್ ಸಿಂಗ್ ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಿಲುವನ್ನು ಸ್ವಾಗತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net