

ಮುಂಬೈ: ಅಕ್ರಮ ನಿರ್ಮಾಣ ಎಂಬ ಕಾರಣಕ್ಕೆ ಕಂಗನಾ ರಣಾವತ್ ಅವರ ಕಚೇರಿಯನ್ನು ಬುಧವಾರಷ್ಟೇ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಭಾಗಶಃ ಒಡೆದು ಹಾಕಿರುವುದು ಗೊತ್ತೇ ಇದೆ. ಹೀಗೆ ಅರ್ಧಂಬರ್ಧ ಒಡೆದುಹಾಕಲಾಗಿರುವ ಈ ಬಿಲ್ಡಿಂಗ್ ರಿಪೇರಿ ಮಾಡಿಸದಿರಲು ಕಂಗನಾ ನಿರ್ಧರಿಸಿದ್ದಾರೆ ಎಂದು ಈಗಾಗಲೇ ಸುದ್ದಿಯಾಗಿದೆ.
ಹೊಸ ವಿಷಯವೇನೆಂದರೆ, ಅದೇ ಜಾಗದಲ್ಲಿ ಸುಸಜ್ಜಿತ ಸ್ಟುಡಿಯೋ ಕಟ್ಟುವುದಕ್ಕೆ ಅಂಬಾನಿಗಳು, ಕಂಗನಾಗೆ 200 ಕೋಟಿ ಕೊಡುವುದಕ್ಕೆ ತಯಾರಾಗಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್ನಲ್ಲಿ ಶುಕ್ರವಾರ ವಿಪರೀತವಾಗಿ ಕೇಳಿ ಬಂದಿದೆ.
ಇಷ್ಟಕ್ಕೂ ಅಂಬಾನಿಗಳು ಯಾಕೆ ಕಂಗನಾ ರಣಾವತ್ ಅವರಿಗೆ ಸಹಾಯ ಮಾಡುವುದಕ್ಕೆ ಮುಂದೆ ಬಂದಿದ್ದಾರೆ ಎಂಬ ಪ್ರಶ್ನೆ ಬರುವುದು ಸಹಜವೇ. ಈ ಕುರಿತು ತನಿಖೆ ನಡೆಸಿರುವ ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್ಡ್ಬ್ಲ್ಯುಎ) ಇದೊಂದು ಸುಳ್ಳುಸುದ್ದಿ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ರಿಲಯನ್ಸ್ ಇಂಡಸ್ಟ್ರೀಸ್ ಜತೆಗೆ ಮಾತನಾಡಿರುವ ಎಎಫ್ಡ್ಬ್ಲ್ಯುಎ, ಇದೊಂದು ಫೇಕ್ ನ್ಯೂಸ್ ಎಂದು ಪತ್ತೆ ಮಾಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಸಹ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ ಕಂಗನಾ ಅವರ ಬಿಲ್ಡಿಂಗ್ ರಿಪೇರಿ ಮಾಡಿಸೋಕೆ ಅಂಬಾನಿಗಳು 200 ಕೋಟಿ ಕೊಡುತ್ತಾರೆ ಎಂಬುದು ಫೇಕ್ ನ್ಯೂಸ್ ಎಂಬುದು ಗೊತ್ತಿರಲಿ.
ಇದನ್ನೂ ಓದಿ: ‘ಬಾಹುಬಲಿ’ ದಾಖಲೆಯನ್ನು ಮುರಿಯತ್ತಾ ‘ಆದಿಪುರುಷ್’?
ಇನ್ನು ತಮ್ಮ ಕಟ್ಟಡವನ್ನು ಒಡೆದು ಹಾಕಿರುವುದರ ಕುರಿತು ಸಿಟ್ಟಾಗಿರುವ ಕಂಗನಾ, 'ಆಫೀಸ್ ನವೀಕರಣ ಮಾಡಿಸುವುದಕ್ಕೆ ನನ್ನ ಬಳಿ ಹಣ ಇಲ್ಲ. ಅರ್ಧಂಬರ್ಧ ಒಡೆದು ಹಾಕಲಾಗಿರುವ ಆಫೀಸ್ನಲ್ಲೇ ನಾನು ಕೆಲಸ ಮುಂದುವರೆಸುತ್ತೇನೆ. ದುಷ್ಟಶಕ್ತಿಗಳ ವಿರುದ್ಧ ಒಬ್ಬ ಮಹಿಳೆ ಸಿಡಿದೇಳಬಲ್ಲಳು ಎಂದು ಸಾಂಕೇತಿಕವಾಗಿ ಹೇಳುವುದಕ್ಕೆ ಆ ಕಟ್ಟಡವನ್ನು ನವೀಕರಿಸದಿರಲು ನಿರ್ಧರಿಸಿದ್ದೇನೆ' ಎಂದು ಕಂಗನಾ ಹೇಳಿಕೊಂಡಿದ್ದಾರೆ.