'ಬಾಹುಬಲಿ' ದಾಖಲೆಯನ್ನು ಮುರಿಯತ್ತಾ 'ಆದಿಪುರುಷ್​'?

Adipurush - Final
Published on

ಮುಂಬೈ: ಪ್ರಭಾಸ್​ ಅಭಿನಯದ 'ಆದಿಪುರುಷ್​' ಚಿತ್ರದ ಚಿತ್ರೀಕರಣ ಪ್ರಾರಂಭವಾಗುವುದು ಮುಂದಿನ ವರ್ಷವೇ ಆದರೂ, ಈಗಾಗಲೇ ತೆರೆಮರೆಯಲ್ಲಿ ಕೆಲಸಗಳು ಪ್ರಾರಂಭವಾಗಿದೆ. ವಿಶೇಷ ಎಂದರೆ, 'ಬಾಹುಬಲಿ' ಚಿತ್ರದ ದಾಖಲೆಗಳನ್ನು ಈ ಚಿತ್ರ ಮುರಿಯಲಿದೆ ಎಂದು ಹೇಳಲಾಗುತ್ತಿದೆ.

ಹೇಗೆ? ಎಂಬ ಪ್ರಶ್ನೆ ಬರುವುದು ಸಹಜ. ಪ್ರಮುಖವಾಗಿ 'ಬಾಹುಬಲಿ' ಚಿತ್ರದಲ್ಲಿ ವಿಷ್ಯುಯಲ್​ ಎಫೆಕ್ಟ್ಸ್​​ಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿತ್ತು. ಆ ಚಿತ್ರದಲ್ಲಿ 45 ಸಾವಿರಕ್ಕೂ ಹೆಚ್ಚು ವಿಷ್ಯುಯಲ್​ ಎಫೆಕ್ಟ್ಸ್​ ಶಾಟ್​ಗಳಿದ್ದು, ಭಾರತೀಯ ಚಿತ್ರರಂಗದಲ್ಲಿ ವಿಎಫ್​ಎಕ್ಸ್​ ಅಷ್ಟೊಂದು ವ್ಯಾಪಕವಾಗಿ ಬಳಸಲಾದ ಚಿತ್ರ ಎಂಬ ಹೆಗ್ಗಳಿಕೆಗೆ 'ಬಾಹುಬಲಿ' ಚಿತ್ರಕ್ಕಿತ್ತು.

ಅಷ್ಟೇ ಅಲ್ಲ, ಈ ಚಿತ್ರದ ಗ್ರಾಫಿಕ್ಸ್​ ಕೆಲಸಗಳಿಗಾಗಿಯೇ, ಭಾರತದ 36 ಸ್ಟುಡಿಯೋಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ತಂತ್ರಜ್ಱರು ಕೆಲಸ ಮಾಡಿದ್ದರು. ಈ ಕೆಲಸ ತೆರೆಯ ಮೇಲೆ ಅದ್ಭುತವಾಗಿ ಮೂಡಿಬಂದಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಗ್ರಾಫಿಕ್ಸ್​ ವಿಷಯದಲ್ಲಿ 'ಬಾಹುಬಲಿ'ಯನ್ನು ಹಿಂದಿಕ್ಕಲು ಓಂ ರೌತ್​ ನಿರ್ದೇಶನದ 'ಆದಿಪುರುಷ್​' ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಒಟ್ಟಾರೆ ಬಜೆಟ್​ನಲ್ಲಿ ಅರ್ಧದಷ್ಟು ದುಡ್ಡನ್ನು ಬರೀ ವಿಎಫ್​ಎಕ್ಸ್​ಗೆ ಮೀಸಲಿಡಲಾಗುತ್ತಿದ್ದು, ಈ ಚಿತ್ರ ಯಾವ ಮಟ್ಟಿಗೆ ಮೂಡಿಬರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಮೂಲಗಳ ಪ್ರಕಾರ, ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಬರಬೇಕು ಎನ್ನುವ ನಿಟ್ಟಿನಲ್ಲಿ ನಿರ್ದೇಶಕ ಓಂ ರೌತ್​ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಎಫ್​ಎಕ್ಸ್​ ತಂತ್ರಜ್ಱರನ್ನು ಈ ಚಿತ್ರಕ್ಕೆ ಕರೆಸುತ್ತಿದ್ದಾರಂತೆ. ಪ್ರಮುಖವಾಗಿ 'ಗೇಮ್​ ಆಫ್​ ಥ್ರೋನ್ಸ್​'ಗೆ ಕೆಲಸ ಮಾಡಿದ್ದ ತಂತ್ರಜ್ಱರಿಂದ ಈ ಕೆಲಸ ಮಾಡಿಸಲಾಗುತ್ತದಂತೆ.

'ಆದಿಪುರುಷ್​' ಚಿತ್ರವು ರಾಮಾಯಣವನ್ನಾಧರಿಸಿದ್ದು, ಈ ಚಿತ್ರವನ್ನು ಟಿ-ಸೀರೀಸ್​ನ ಭೂಷಣ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್​ ಅವರು ರಾಮನ ಪಾತ್ರವನ್ನು ಮಾಡಿದರೆ, ರಾವಣನ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net