

ನವದೆಹಲಿ: ಕೋವಿಡ್ನಿಂದ ಮೃತಪಟ್ಟರೆ ವಿಧಿವತ್ತಾಗಿ ಅಂತ್ಯ ಸಂಸ್ಕಾರವನ್ನು ಮಾಡಲು ಮಕ್ಕಳೇ ಹಿಂಜರಿಯುತ್ತಾರೆ. ಶವವನ್ನು ಆಸ್ಪತ್ರೆಗೆ ಒಪ್ಪಿಸಿ ಸುಮ್ಮನಾಗುತ್ತಾರೆ. ಇದಷ್ಟೇ ಅಲ್ಲ, ಹೆಣವನ್ನ ಬಸ್ ತಂಗುದಾಣದಲ್ಲಿ ಬಿಟ್ಟು ಹೋದ ನಿದರ್ಶನವೂ ನಮ್ಮಲ್ಲಿ ನಡೆದಿದೆ. ಅಂಥದ್ದರಲ್ಲಿ ಕೋವಿಡ್ನಿಂದ ಸಾವಿಗೀಡಾದವನ ಶವ ಬೇಕೆಬೇಕೆಂದು ನಾಲ್ವರು ಸರ್ಕಾರಿ ಉದ್ಯೋಗಿಗಳು ಹಾಗೂ ಇಬ್ಬರು ನಾಗರಿಕರನ್ನು ಅಪಹರಿಸಿದ ವಿದ್ಯಮಾನ ನಡೆದಿದೆ.
ಈಕ್ವೆಡಾರ್ನ ಕಿಟೋದಲ್ಲಿ ಅಮೆಜಾನ್ ಕಾಡುಗಳ ಬುಡಕಟ್ಟು ಜನಾಂಗದ ನಾಯಕನೊಬ್ಬ ಕೋವಿಡ್ ಕಾಯಿಲೆಯಿಂದಾಗಿ ಮೃತಪಟ್ಟಿದ್ದ. ಹೀಗಾಗಿ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ವಯ ಆತನ ಶವವನ್ನು ಹೂಳಲಾಗಿತ್ತು. ಆದರೆ, ನಾಯಕನ ಶವವನ್ನು ನಮಗೆ ಒಪ್ಪಿಸಬೇಕು ಎನ್ನುವುದು ಬುಡಕಟ್ಟು ಜನರ ಬೇಡಿಕೆಯಾಗಿತ್ತು.
ಇದನ್ನೂ ಓದಿ; ಧರಾಶಾಯಿಯಾಯ್ತು ಬಿಗ್ ಬಿ ಮನೆಯ 43 ವರ್ಷಗಳ ಇತಿಹಾಸ…!
ಇದಕ್ಕೆ ಸರ್ಕಾರ ಸ್ಪಂದಿಸದಿದ್ದಾಗ ಇಬ್ಬರು ಪೊಲೀಸರು, ಇಬ್ಬರು ಯೋಧರು ಹಾಗೂ ಇಬ್ಬರು ನಾಗರಿಕರನ್ನು ಅಪಹರಿಸಿದ್ದರು. ನಾಯಕನ ಶವವನ್ನು ಒಪ್ಪಿಸಲೇಬೇಕು ಎಂದು ಪಟ್ಟು ಹಿಡಿದಿದ್ದರು. ಅಪಹರಿಸಿದ್ದ ಆರು ಜನರನ್ನು 600 ಜನರು ಸುತ್ತುವರಿದಿದ್ದರು.
ಕೊನೆಗೆ ಅವರ ಬೇಡಿಕೆಗೆ ಮಣಿದ ಸರ್ಕಾರ ಹೂತಿದ್ದ ಶವವನ್ನು ಹೊಗೆ ತೆಗೆದು ಅವರ ನಾಯಕನದ್ದೇ ಎಂದು ಖಚಿತಪಡಿಸಿಕೊಂಡು ಜನರಿಗೆ ಒಪ್ಪಿಸಲಾಯಿತು ಎಂದು ಒಳಾಡಳಿತ ಸಚಿವ ಮರಿಯಾ ಪೌಲಾ ರೋಮೊ ಹೇಳಿದ್ದಾರೆ. ಇದಾದ ಬಳಿಕ ಅಪಹರಿಸಿದವರನ್ನು ಬಿಡುಗಡೆ ಮಾಡಲಾಗಿತ್ತು. ಈಕ್ವೆಡಾರ್ನಲ್ಲಿ ಈವರೆಗೆ 61 ಸಾವಿರ ಜನರಿಗೆ ಸೋಂಕು ತಗುಲಿದ್ದು, 4,800 ಜನರು ಮೃತಪಟ್ಟಿದ್ದಾರೆ.