ಬಾಲ್ಯದಲ್ಲೇ ಹೆತ್ತವರ ಕಳೆದುಕೊಂಡ ಅಮನ್​ ಕಷ್ಟ ಕೇಳಿದ್ರೆ ಕಣ್ಣೀರು ತರಿಸುತ್ತೆ; ಕಂಚಿನ ಹಿಂದೆ ಇಷ್ಟೆಲ್ಲಾ ಶ್ರಮವಿದೆ

ವಿಜಯವಾಣಿ - 2024-08-10T133036.213
Published on

ನವದೆಹಲಿ: 21 ವರ್ಷ ವಯಸ್ಸಿನ ಅಮನ್​ ಸೆಹ್ರಾವತ್​, ನಿನ್ನೆ (ಆ.09) ನಡೆದ ಪುರುಷರ ಕುಸ್ತಿ ಪಂದ್ಯದಲ್ಲಿ 13-5 ಅಂತರದಿಂದ ಡೇರಿಯನ್ ಟಾಯ್ ಕ್ರೂಜ್ ಮಣಿಸಿ, ಕಂಚಿನ ಪದಕಕ್ಕೆ ಮುತ್ತಿಟ್ಟಿದರು. ಛತ್ರಸಾಲ್ ಕ್ರೀಡಾಂಗಣದ ಪರಂಪರೆ ಹೊತ್ತಿಕೊಂಡು ಈ ಹಂತ ತಲುಪಿದ್ದ ಅಮನ್​, ಪ್ಯಾರಿಸ್​ ಒಲಿಂಪಿಕ್ಸ್​ನ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ದೇಶವ್ಯಾಪಿ ಮೆಚ್ಚುಗೆ, ಅಭಿನಂದನೆ ಗಳಿಸುತ್ತಿರುವ ಈ ಯುವ ಚಾಂಪಿಯನ್​, ಬಾಲ್ಯದಿಂದ ಇಲ್ಲಿಯವರೆಗೆ ಪಟ್ಟ ಶ್ರಮ ಕೇಳಿದರೆ ನಿಜಕ್ಕೂ ಕಣ್ಣೀರು ತರಿಸುತ್ತದೆ.

11 ವರ್ಷದಲ್ಲಿದ್ದಾಗಲೇ ತಮ್ಮ ತಂದೆ ಮತ್ತು ತಾಯಿಯನ್ನು ಕಳೆದುಕೊಂಡ ಅಮನ್​, ತೀವ್ರ ಸಂಕಷ್ಟದಲ್ಲಿ ತೊಡಗಿದ್ದರು. ಬಾಲ್ಯವನ್ನು ಆನಂದಿಸುವ ವೇಳೆಗೆ ಪೋಷಕರಿಬ್ಬರು ಅನಾರೋಗ್ಯದ ಸಮಸ್ಯೆಯಿಂದ ಇಹಲೋಕ ತ್ಯಜಿಸಿದರು. ಮುಂದೆ ಏನು ಮಾಡುವುದು ಎಂಬ ದಿಕ್ಕು ತೋಚದಂತೆ ಗೊಂದಲದಲ್ಲಿದ್ದ ಕಂಚು ಗೆದ್ದ ವೀರ, ತಂದೆ ಹಾಕಿಕೊಟ್ಟ ಅಡಿಪಾಯವನ್ನೇ ಗೆಲುವಿನ ದಾರಿ ಎಂದು ಪರಿಗಣಿಸಿದರು. ಅದೇ ಇಂದು ಅವರ ಅದ್ಭುತ ಸಾಧನೆಗೆ ಕಾರಣವಾಗಿದೆ.

ಅಮನ್ ಅವರ ತಂದೆಗೆ ತಮ್ಮ ಮಗ ಒಬ್ಬ ಕುಸ್ತಿಪಟು ಆಗಬೇಕು ಎಂಬ ಆಸೆಯಿತ್ತಂತೆ. ಹೀಗಾಗಿಯೇ ಅವರು ಪುತ್ರನನ್ನು ಛತ್ರಸಾಲ್ ಕುಸ್ತಿ ಅಖಾಡಕ್ಕೆ ಸೇರಿಸಿದ್ದರು. ಕಂಚು ಗೆದ್ದ ಬಳಿಕ ಈ ಕುರಿತು ಭಾವುಕರಾಗಿ ಮಾತನಾಡಿದ ಅಮನ್​, "ನನ್ನ ಪೋಷಕರು ನನ್ನನ್ನು ಒಬ್ಬ ಯಶಸ್ವಿ ಕುಸ್ತಿಪಟುವಾಗಿ ನೋಡುವ ಬಯಕೆ ಹೊಂದಿದ್ದರು. ಅವರಿಗೆ ಒಲಿಂಪಿಕ್ಸ್​ ಬಗ್ಗೆ ಕಿಂಚಿತ್ತು ಮಾಹಿತಿ ಇರಲಿಲ್ಲ. ಆದರೂ ಕೂಡ ದೊಡ್ಡ ಆಸೆಯನ್ನು ಕಂಡು, ಕುಸ್ತಿ ತರಬೇತಿಗೆ ಸೇರಿಸಿದರು" ಎಂದು ಕಣ್ಣಂಚಲಿ ನೀರು ತುಂಬಿಕೊಂಡೇ ಹೇಳಿದರು.

ಛತ್ರಸಾಲ್​ ಕುಸ್ತಿ ಅಖಾಡವೇ ಅಮನ್​ ಎರಡನೇ ಮನೆ:

11 ವರ್ಷಕ್ಕೆ ಪೋಷಕರನ್ನು ಕಳೆದುಕೊಂಡು ಕಂಗಾಲಾದ ಅಮನ್​, ತಂದೆ ಸೇರಿಸಿದ ಛತ್ರಸಾಲ್​ ಕುಸ್ತಿ ಅಖಾಡದಲ್ಲಿ ಮುಂದುವರೆಯಲು ಇಚ್ಛಿಸಿದರು. ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಒಲಿಂಪಿಕ್​ ಪದಕಗಳನ್ನು ಗೆದ್ದು ತಂದಿರುವ ಸುಶೀಲ್​ ಕುಮಾರ್​, ಯೋಗೇಶ್ವರ್​ ದತ್​, ಭಜರಂಗ್ ಪೂನಿಯಾ ಮತ್ತು ರವಿ ಕುಮಾರ್​ ದಹಿಯಾ ಇದೇ ಛತ್ರಸಾಲ್ ಗರಡಿಯಿಂದ ಒಲಿಂಪಿಕ್​ ವೇದಿಕೆ ಹತ್ತಿದವರು. ಪದಕ ವೀರರು ತರಬೇತಿ ಪಡೆದ ಸ್ಟೇಡಿಯಂನಲ್ಲಿಯೇ ಅಮನ್ ಕೂಡ ಬೆಳೆದರು. ಕೇವಲ ತನ್ನ ಎರಡನೇ ಮನೆಯಿದು ಎಂದು ಭಾವಿಸದ ಅಮನ್​ ಸೆಹ್ರಾವತ್​, ಕುಸ್ತಿ ಏಕೆ? ಅಲ್ಲಿ ಉಳಿಯುವ ಉದ್ದೇಶವೇನು ಎಂಬ ಹಲವು ವಿಷಯಗಳನ್ನು ಸರಿಯಾಗಿ ಅರ್ಥೈಸಿಕೊಂಡ ಕಾರಣವೇ ಇಂದು ಅವರು ಚಾಂಪಿಯನ್​ ಆಗಿ ನಿಂತು, ದೇಶಕ್ಕೆ ಕೀರ್ತಿ ತರಲು ಸಾಧ್ಯವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net