ಕಾರು -ಟ್ರಕ್​ ಮುಖಾಮುಖಿ: ನಾಲ್ವರು ಸಜೀವ ದಹನ| Aligarh

death jaipura
Published on

Aligarh : ಉತ್ತರ ಪ್ರದೇಶದ ಅಲಿಗಢದ ರಾಷ್ಟ್ರೀಯ ಹೆದ್ದಾರಿ ಬಳಿ ಮಂಗಳವಾರ (ಸೆಪ್ಟೆಂಬರ್​ 23) ಕಾರು ಮತ್ತು ಮಿನಿ ಟ್ರಕ್ ನಡುವೆ ಘೋರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದೇ ಮನೆಯ ನಾಲ್ವರು ಸದಸ್ಯರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಪೊಲೀಸ್ ವರದಿಯ ಪ್ರಕಾರ, ಅಪಘಾತ ಸುಮಾರು ಬೆಳಿಗ್ಗೆ 6 ಗಂಟೆಗೆ ಅಲಿಗಢ ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ನಾನೌ ಬ್ರಿಡ್ಜ್ ಬಳಿ ನಡೆದಿದೆ. ಇನ್ನು ಕಾನ್ಪುರದ ಕಡೆಗೆ ಹೊರಟಿದ್ದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದ ನಂತರ ವಿರುದ್ಧ ದಿಕ್ಕಿನಲ್ಲಿ ಚಲಿಸಿ ಮಿನಿ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಿಂದ ಇಂಧನನ ಟ್ಯಾಂಕ್​ ಒಡೆದು ಎರಡೂ ವಾಹನಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸಜೀವ ದಹನವಾಗಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕಾರಿನಲ್ಲಿದ್ದ ನಾಲ್ಕು ಸದಸ್ಯರು ದೇವಸ್ಥಾನದ ಭೇಟಿಯಿಂದ ಹಿಂತಿರುಗುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಮೃತರ ದೇಹಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಗುರುತಿಸುವುದು ಕಷ್ಟಕರವಾಗಿತ್ತು. ಐದನೇ ಪ್ರಯಾಣಿಕರನ್ನು ಸ್ಥಳೀಯರು ಅವಶೇಷಗಳಿಂದ ಹೊರತೆಗೆದು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಅಲಿಘರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದ ಸ್ವಲ್ಪ ಸಮಯದ ನಂತರ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅಮೃತ್ ಜೈನ್ ಮಾತನಾಡಿದ್ದು, ಘಟನೆ ನಂತರ ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಂದಿಸಲು 30 ರಿಂದ 40 ನಿಮಿಷಗಳು ಬೇಕಾಯಿತು, ಆ ಹೊತ್ತಿಗೆ ವಾಹನಗಳು ಸುಟ್ಟುಹೋಗಿದ್ದವು. ರಕ್ಷಣಾ ಕಾರ್ಯ ನಡೆಯುತ್ತಿರುವಾಗ ಜನನಿಬಿಡ ಆಗ್ರಾ-ಅಲಿಗಢ ಮಾರ್ಗದಲ್ಲಿ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಯಿತು ಎಂದರು.

ಪೊಲೀಸರು ಈ ಪ್ರಕರಣವನ್ನು ಅಪಘಾತವನ್ನು ದಾಖಲಿಸಿಕೊಂಡಿದ್ದು, ಅತಿವೇಗ, ಚಾಲಕನ ನಿರ್ಲಕ್ಷ್ಯ ಅಥವಾ ಯಾಂತ್ರಿಕ ದೋಷ ಸೇರಿದಂತೆ ಇನ್ನಿತರ ಕಾರಣಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಈ ಘಟನೆಯನ್ನು ದುರಂತ ಎಂದು ಬಣ್ಣಿಸಿದ ಎಸ್​ಪಿ ಅಮೃತ್​ ಜೈನ್ ರಸ್ತೆ ಸುರಕ್ಷತಾ ಅಭಿಯಾನ ನಡೆಸಲಾಗುವುದು ಹಾಗೆಯೇ ಮೃತರ ಕುಟುಂಬಗಳಿಗೆ ಜಿಲ್ಲಾಡಳಿತ ತಲಾ 2 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net