

Wasim Akram: ಪ್ರತಿಷ್ಠಿತ ಏಷ್ಯಾಕಪ್ ಟಿ20 ಟೂರ್ನಿಯ ಸೂಪರ್-4ರ ಭಾಗವಾಗಿ ಭಾನುವಾರ (ಸೆ.21) ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಟೀಮ್ ಇಂಡಿಯಾ, 6 ವಿಕೆಟ್‌ಗಳ ಭಾರಿ ಅಂತರದ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ತನ್ನ ಖಾತೆಗೆ ಎರಡು ಅಂಕಗಳನ್ನು ಸೇರಿಸಿಕೊಂಡಿದ್ದು, ಸೋಲಿನ ಮುಖವನ್ನೇ ಕಾಣದ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಪಾಕ್, ಕೇವಲ ಸೊಕ್ಕು ತೋರಿಸುವುದಕ್ಕಷ್ಟೇ ಸೀಮಿತವಾಗಿದೆ.
ಟೀಮ್ ಇಂಡಿಯಾ ವಿರುದ್ಧ ಗೆದ್ದು ಬೀಗಲು ಆಗದ ಪಾಕ್ ಆಟಗಾರರು, ಮೈದಾನದ ತುದಿಯಲ್ಲಿ ನಿಂತು ಬೆರೆಳ ಸನ್ನೆ, ಕೈ ಸನ್ನೆ ತೋರಿಸಿ ಸೊಕ್ಕು ಮೆರೆದಿದ್ದಾರೆ. ಈ ನಡೆಗೆ ಜಾಲತಾಣಗಳಲ್ಲಿ ಈಗಾಗಲೇ ವ್ಯಾಪಕ ಛೀಮಾರಿ ವ್ಯಕ್ತವಾಗಿದ್ದು, ಪಾಕಿಸ್ತಾನ ಆಟಗಾರರಿಗೆ ಭಾರೀ ಟೀಕೆಗಳು ಹರಿದುಬರುತ್ತಿವೆ. ಭಾರತೀಯ ಕ್ರಿಕೆಟ್ ಪ್ರಿಯರಿಂದ ಮಾತ್ರವಲ್ಲ, ಸ್ವತಃ ಪಾಕ್ನಿಂದಲೇ ಪಾಕಿಸ್ತಾನ ತಂಡಕ್ಕೆ ಮುಖಭಂಗ ಉಂಟಾಗಿದೆ. ಇದಕ್ಕೆ ಮತ್ತೊಂದು ಅದ್ಭುತ ನಿದರ್ಶನ, ಪಾಕ್ ಕ್ರಿಕೆಟ್ ದಿಗ್ಗಜ, ಮಾಜಿ ಹಿರಿಯ ಆಟಗಾರ ವಾಸಿಮ್ ಅಕ್ರಂ ಹೇಳಿಕೆ.
"ಪಾಕಿಸ್ತಾನದ ಬ್ಯಾಟಿಂಗ್ ಲೈನ್‌ಅಪ್ ಸರಿಯಿಲ್ಲ. ಮೊದಲು ಟೆಸ್ಟ್ ಕ್ರಿಕೆಟ್ ಆಡಿ ಕಲಿಯಿರಿ. ಆಗ ಸ್ಪಿನ್ ಎದುರಿಸುವುದು, ಆಡುವ ರೀತಿ ತಿಳಿಯುತ್ತದೆ. ಭಾರತವು ಮೂರು ವಿಭಾಗಗಳಲ್ಲಿ ಪಾಕಿಸ್ತಾನಕ್ಕಿಂತ ಉತ್ತಮ ಪ್ರದರ್ಶನ ನೀಡಿದೆ ಮತ್ತು ಕಳೆದ ನಾಲ್ಕೈದು ವರ್ಷಗಳಲ್ಲಿ ಇದು ಹೀಗೆ ಸಾಗಿ ಬಂದಿದೆ. ಪಾಕಿಸ್ತಾನ ಒಮ್ಮೆ ಅಥವಾ ಎರಡು ಬಾರಿಯಷ್ಟೇ ಗೆಲುವು ನೋಡಿದೆ. ಅದು ಅಲ್ಲಿ ಮತ್ತು ಇಲ್ಲಿ ಅಷ್ಟೇ" ಎಂದು ಹೇಳಿದ್ದಾರೆ.
"10 ಓವರ್‌ಗಳಲ್ಲಿ 91/1 ಇದ್ದ ಪಾಕ್, 20 ಓವರ್‌ಗಳಲ್ಲಿ 171 ಗಳಿಸಿತು. ಇದು ಸಾಕಾಗುವುದಿಲ್ಲ. ಬದಲಿಗೆ 200 ರನ್ ತಲುಪಬೇಕು. ಬ್ಯಾಟಿಂಗ್ ಮತ್ತು ಬೌಲಿಂಗ್ ಯೂನಿಟ್ ಎರಡೂ ಕೂಡ ಇಲ್ಲಿ ವಿಫಲವಾಯಿತು. ಭಾರತದಂತಹ ಬಲಿಷ್ಠ ತಂಡದ ವಿರುದ್ಧ ಆಡುತ್ತಿದ್ದೀರಾ ಅಂದಮೇಲೆ ಉತ್ತಮ ಸ್ಕೋರ್ ಗಳಿಸುವುದು ಅತಿಮುಖ್ಯ. ಮೊದಲು ದೇಶಿಯ ಕ್ರಿಕೆಟ್ ಆಡಿ, ಹೇಗೆ ಆಡಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು" ಎಂದು ಪಾಕ್ ಆಟಗಾರರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ,(ಏಜೆನ್ಸೀಸ್).