

ನವದೆಹಲಿ: ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಯೊಳಗೆ ಬಂದ ದುಷ್ಕರ್ಮಿಗಳು ತನ್ನ ಪುತ್ರಿಯನ್ನು ಅಪಹರಿಸಲು ಮಾಡಿದ ಪ್ರಯತ್ನವನ್ನು ತಾಯಿಯೊಬ್ಬಳು ವಿಫಲಗೊಳಿಸಿದ್ದಾಳೆ. ಈಕೆ ನೀರು ತರಲು ಒಳಹೋದಾಗ ಅಲ್ಲಿಯೇ ಆಟವಾಡುತ್ತಿದ್ದ 4 ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಬೈಕು ಹತ್ತಿ ಪರಾರಿ ಆಗಬೇಕು ಎನ್ನುವಷ್ಟರಲ್ಲಿ ಹೊರಬಂದ ಮಹಿಳೆ ಅಪಹರಣಕಾರನ ಕೈಯಿಂದ ಮಗುವನ್ನು ಕಿತ್ತುಕೊಂಡು ರಕ್ಷಿಸಿಕೊಂಡಿದ್ದಾಳೆ.
ಮಹಿಳೆಯ ಕೂಗು ಕೇಳಿ ಹೊರಬಂದ ನೆರೆಹೊರೆಯವರು ಅಪಹರಣಕಾರರನ್ನು ಸುತ್ತುವರಿಯುತ್ತಿದ್ದಂತೆ ಇಬ್ಬರು ಅಪಹರಣಕಾರರು ಓಡಿ ಹೋಗಿ ತಪ್ಪಿಸಿಕೊಂಡಿದ್ದರು. ಆದರೆ, ಬೈಕ್ನ ನೋಂದಣಿ ಸಂಖ್ಯೆ ಆಧರಿಸಿ ಬೈಕ್ ಚಾಲಕ ಧೀರಜ್ನನ್ನು (26) ಪೊಲೀಸರು ಬಂಧಿಸಿದ್ದರು. ಈತ ಕೊಟ್ಟ ಮಾಹಿತಿ ಆಧರಿಸಿ, ಅಪಹರಣಕ್ಕೆ ಒಳಗಾಗಬೇಕಿದ್ದ ಬಾಲಕಿಯ ಚಿಕ್ಕಪ್ಪ ಉಪೇಂದ್ರನನ್ನೂ ಬಂಧಿಸಿದ್ದಾರೆ.
ಉಪೇಂದ್ರ ಕ್ಯಾಸಿನೋ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲಾಗದೆ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದ. ಸಾಲ ತೀರಿಸಲು ಗಾರ್ಮೆಂಟ್ ಅಂಗಡಿ ನಡೆಸುತ್ತಿದ್ದು ತಕ್ಕಮಟ್ಟಿಗೆ ಸ್ಥಿತಿವಂತನಾಗಿದ್ದ ಅಣ್ಣ ತರುಣ್ನಿಂದ 35 ಲಕ್ಷ ರೂ. ಹಣ ವಸೂಲಿ ಮಾಡಲು ಯೋಜನೆ ರೂಪಿಸಿದ. ಇದಕ್ಕಾಗಿ ಆತ ತರುಣ್ನ ಪುತ್ರಿಯನ್ನೇ ಅಪಹರಿಸುವ ಸಂಚು ರೂಪಿಸಿದ್ದ.
ಅದರಂತೆ ತನ್ನ ಸ್ನೇಹಿತ ಧೀರಜ್ಗೆ 1 ಲಕ್ಷ ರೂ.ಗೆ ಸುಪಾರಿ ಕೊಟ್ಟು ಮಗುವನ್ನು ಅಪಹರಿಸುವಂತೆ ಸೂಚಿಸಿದ್ದ. ಧೀರಜ್ ತನ್ನ ಸಹಚರನ ಜತೆಗೆ ಪೂರ್ವ ದೆಹಲಿಯ ಶಾಕಾರ್ಪುರ್ ಬಡಾವಣೆಯಲ್ಲಿರುವ ತರುಣ್ ಮನೆಗೆ ಮಂಗಳವಾರ ಸಂಜೆ 4 ಗಂಟೆಗೆ ಬಂದಿದ್ದ. ತಾನು ಬೈಕ್ನಲ್ಲಿ ಕುಳಿತು, ಕುಡಿವ ನೀರು ಕೇಳುವ ನೆಪದಲ್ಲಿ ತರುಣ್ ಮನೆಯೊಳಗೆ ಕಳುಹಿಸಿದ್ದ. ಸಂಚಿನಂತೆ ಧೀರಜ್ ಸಹಚರ ಮಗುವನ್ನು ಎತ್ತಿಕೊಂಡು ಬಂದಿದ್ದ. ಬೈಕ್ ಹತ್ತಬೇಕೆನ್ನುವಷ್ಟರಲ್ಲಿ ಮನೆಯಿಂದ ಓಡೋಡಿ ಬಂದ ತರುಣ್ ಪತ್ನಿ ಮಗುವನ್ನು ಬಲವಾಗಿ ಹಿಡಿದುಕೊಂಡು ಎಳೆದಾಡಿ ಆತನಿಂದ ಬಿಡಿಸಿಕೊಂಡಿದ್ದಳು. ಸಹಚರ ಮಗುವನ್ನು ಬಿಟ್ಟು ಓಡಲು ಮುಂದಾಗುತ್ತಿದ್ದಂತೆ ಬೈಕ್ನ ಹಿಂಬದಿಗೆ ಒದ್ದು, ಬೈಕ್ ಸವಾರನನ್ನು ಬೀಳಿಸಿದ್ದಳು.
ಈ ದಾಳಿಯಿಂದ ಎಚ್ಚೆತ್ತುಕೊಂಡು ಧೀರಜ್ ಬೈಕ್ ಎತ್ತಿಕೊಂಡು ಮುಂದಕ್ಕೆ ಸಾಗುವಷ್ಟರಲ್ಲಿ ಎಚ್ಚೆತ್ತುಕೊಂಡಿದ್ದ ನೆರೆಹೊರೆಯವರು ದಾರಿಗೆ ಅಡ್ಡಲಾಗಿ ಮತ್ತೊಂದು ಬೈಕ್ ಅನ್ನು ನಿಲ್ಲಿಸಿ ಆತನನ್ನು ತಡೆದಿದ್ದರು. ತಮ್ಮ ಕೈಗೆ ಸಿಕ್ಕಿಬಿದ್ದ ಇಬ್ಬರು ಅಪಹರಣಕಾರರನ್ನು ಚೆನ್ನಾಗಿ ಥಳಿಸಿದ್ದರು. ಅಷ್ಟರಲ್ಲಿ ಒಬ್ಬಾತ ಚೂರಿ ತೋರಿಸಿ ಬೆದರಿಸಿದ್ದರಿಂದ ಹಿಂದೆ ಸರಿದಿದ್ದರು. ಈ ಸಮಯವನ್ನು ಬಳಸಿಕೊಂಡು ಇಬ್ಬರು ಅಪಹರಣಕಾರರು ಪರಾರಿಯಾಗಿದ್ದರು.
ಆದರೆ ದೆಹಲಿ ಪೊಲೀಸರು ಸ್ಥಳದಲ್ಲಿ ಸಿಕ್ಕ ಬೈಕ್ ಮತ್ತು ಸಿಸಿ ಕ್ಯಾಮರಾಗಳ ವಿಡಿಯೋ ತುಣುಕುಗಳನ್ನು ಆಧರಿಸಿ ಮೊದಲಿಗೆ ಧೀರಜ್ನನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಈತ ನೀಡಿದ ಮಾಹಿತಿಯ ಮೇರೆಗೆ ಉಪೇಂದ್ರನನ್ನೂ ಬಂಧಿಸಿದರು.