
ಮುಂಬೈ: ಬಾಲಿವುಡ್ನ ಸಿನಿಮಾಗಳು ಜನರ ಮನಸ್ಸನ್ನು ತಲುಪುವಲ್ಲಿ ಯಶಸ್ವಿಯಾಗುತ್ತಿಲ್ಲ. ಬಿಗ್ ಬಜೆಟ್ ಸಿನಿಮಾ ಶಮ್ಶೀರ, ಲಾಲ್ ಸಿಂಗ್ ಛಡ್ಡಾ ಮತ್ತು ಹಲವಾರು ಬಾಲಿವುಡ್ ತಾರೆಯರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿಲ್ಲ. ಇದಕ್ಕೆ ಕಾರಣ, ಕರೊನಾ ನಂತರದ ದಿನಗಳಲ್ಲಿ ಜನ ಥಿಯೇಟರ್ಗಳತ್ತ ಬರುತ್ತಿಲ್ಲ. ಇದಲ್ಲದೇ ಬಾಲಿವುಡ್ನ ಈ ಸ್ಥಿತಿಗೆ ದಕ್ಷಿಣ ಭಾರತದ ಸಿನಿಮಾಗಳ ಜನಪ್ರಿಯತೆ ಇನ್ನೊಂದು ಕಾರಣ ಎಂಬುದು ಹಲವರ ಅಭಿಪ್ರಾಯ. ಆದರೆ ನಟ ಅಕ್ಷಯ್ ಕುಮಾರ್ ಇವೆರಡನ್ನೂ ಒಪ್ಪುವುದಿಲ್ಲ. ಅಕ್ಷಯ್ ಕುಮಾರ್ ಹೇಳುವುದೇನೆಂದರೆ, ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಬಾಲಿವುಡ್ ಅನ್ನು ಪುನಃ ಯಶಸ್ಸಿನ ಕಡೆ ಕರೆದೊಯ್ಯಬಹುದು.
ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿಲ್ಲ. ಥಿಯೇಟರ್ಗೆ ಜನರನ್ನು ಕರೆತರುವಲ್ಲಿ ವಿಫಲವಾಗಿವೆ. ಬಾಲಿವುಡ್ ತನ್ನನ್ನು ತಾನು ರೀಇನ್ವೆಂಟ್ ಮಾಡಿಕೊಳ್ಳಬೇಕು. ಸಿನಿಮಾದ ಬಜೆಟ್ ಮತ್ತು ಟಿಕೆಟ್ನ ದರವನ್ನು ಸುಮಾರು ಶೇಕಡಾ 30- 40ರ ಷ್ಟು ಕಡಿತಗೊಳಿಸಬೇಕೆಂದು ಅಕ್ಷಯ್ ಕುಮಾರ್ ಇತ್ತೀಚೆಗೆ ಸಮಾರಂಭವೊಂದರಲ್ಲಿ ಹೇಳಿದ್ದಾರೆ.
“ನಾವು ಎಲ್ಲವನ್ನೂ ಕೆಡವಿ, ಮರುನಿರ್ಮಿಸಿ, ಮರುಶೋಧಿಸಿ ಮತ್ತೆ ಪ್ರಾರಂಭಿಸಬೇಕು. ನಟರ ಸಂಭಾವನೆ, ಸಿನಿಮಾ ನಿರ್ಮಾಣದ ಖರ್ಚು ಕಡಿಮೆ ಮಾಡಬೇಕು. ಟಿಕೆಟ್ನ ದರವನ್ನು ಕಡಿತಗೊಳಿಸಬೇಕು. ಜನರನ್ನು ಪುನಃ ಥಿಯೇಟರ್ಗೆ ಕರೆತರಲು ಇದನ್ನು ಮಾಡಲೇಬೇಕು” ಎಂದು ಅಕ್ಷಯ್ ಕುಮಾರ್ ಬಾಲಿವುಡ್ಗೆ ಸಲಹೆ ನೀಡಿದ್ದಾರೆ.
2022ರಲ್ಲಿ ರಿಲೀಸ್ ಆದ ಅಕ್ಷಯ್ ಕುಮಾರ್ ಅವರ ನಾಲ್ಕು ಚಿತ್ರಗಳು ಗಲ್ಲಾ ಪೆಟ್ಟಿಗೆ ತುಂಬಿಸಲಿಲ್ಲ. 55 ವರ್ಷದ ಅಕ್ಷಯ್ ಕುಮಾರ್ ಕೈಯಲ್ಲಿ ಬಡೇ ಮಿಯಾ ಛೋಟೆ ಮಿಯಾ ಮತ್ತು ಸೋರಾರೈ ಪೊಟ್ರುವಿನ ರೀಮೇಕ್ ಸೇರಿದಂತೆ ಹಲವಾರು ಚಿತ್ರಗಳಿವೆ. – ಏಜೆನ್ಸೀಸ್