ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಬೈಂದೂರು ಹಾಗೂ ಕುಂದಾಪುರ ಭಾಗದಲ್ಲಿ ಬಸ್ ಸಮಸ್ಯೆಯಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ನಿವಾರಿಸಿ, ಬೇಡಿಕೆ ಇರುವ ಕಡೆಗಳಲ್ಲಿ ಕೆಎಸ್‌ಆರ್‌ಟಿಸಿಯಿಂದ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಶನಿವಾರ ಕುಂದಾಪುರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಿತು.
ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕುಂದಾಪುರದ ಮಿನಿ ವಿಧಾನಸೌಧದವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಅಲ್ಲಿ ಕುಂದಾಪುರ ಹಾಗೂ ಬೈಂದೂರು ಶಾಸಕರು, ಕುಂದಾಪುರ ತಹಸೀಲ್ದಾರ್, ಕುಂದಾಪುರದ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು. ಎರಡು ವಾರದೊಳಗೆ ಬೇಡಿಕೆಗೆ ಸ್ಪಂದಿಸದಿದ್ದರೆ ಮತ್ತೆ ಬೃಹತ್ ಮಟ್ಟದ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಸಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ, ಕೆಎಸ್‌ಆರ್‌ಟಿಸಿ ಕುಂದಾಪುರ ಡಿಪೋ ಮ್ಯಾನೇಜರ್ ಎ.ಉದಯ ಶೆಟ್ಟಿ ಮನವಿ ಸ್ವೀಕರಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ ಮತ್ತು ಸಹ ಸಂಚಾಲಕ ದರ್ಶನ್ ಶೆಟ್ಟಿ ಮಾತನಾಡಿದರು.
ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜು, ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜು ಸಹಿತ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಎಬಿವಿಪಿ ರಾಜ್ಯ ಕಾರ‌್ಯಕಾರಣಿ ಸದಸ್ಯೆ ಸಂಹಿತಾ, ಪ್ರಮುಖರಾದ ಆಕಾಶ್, ಅಜಿತ್ ಜೋಗಿ, ಶ್ರೀವತ್ಸ, ನವೀನ್, ರಮೇಶ್, ಲಕ್ಷ್ಮೀಕಾಂತ್, ಶಬರಿ, ರಾಜೇಶ್ವರಿ, ರಶ್ಮೀ, ವಿನಾಯಕ ಭಾಗವಹಿಸಿದ್ದರು.
ಪ್ರತೀ ರೂಟ್‌ನ ಸಮಸ್ಯೆ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಬೇಕಾಗಿದೆ. ಪ್ರತಿಭಟನೆ, ಹೋರಾಟದ ಮೂಲಕವೇ ನಾವು ಬೇಡಿಕೆ ಈಡೇರಿಸಿಕೊಳ್ಳಲು ಇರುವ ದಾರಿ. ಮಕ್ಕಳು ಪ್ರತಿಭಟನೆ ಮಾಡುತ್ತಿದ್ದರೆ ಅದಕ್ಕೆ ಅಧಿಕಾರಿಗಳು ಗೌರವ ಕೊಡಿ. ನಿರ್ಲಕ್ಷೃ ಮಾಡಬೇಡಿ. ಅಧಿವೇಶನದಲ್ಲೂ ಈ ಬಗ್ಗೆ ಗಮನ ಸೆಳೆಯಲಾಗುವುದು. ಪರ್ಮಿಟ್ ಇರುವ ಕಡೆಗಳಲ್ಲಿ ಬಸ್ ಆರಂಭಿಸಿ.
-ಗುರುರಾಜ್ ಗಂಟಿಹೊಳೆ ಶಾಸಕ