ನಾನು ಕಳ್ಳತನ ಮಾಡಲು ಐಶ್ವರ್ಯಾ ಕಾರಣ! ಪೊಲೀಸರ ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸೇವಕಿ

Aishwarya Rajinikanth
Published on

ಚೆನ್ನೈ: ಸೂಪರ್​​ ಸ್ಟಾರ್​​​ ರಜನಿಕಾಂತ್​ ಪುತ್ರಿ ಹಾಗೂ ನಿರ್ದೇಶಕಿ ಐಶ್ವರ್ಯಾ ರಜಿನಿಕಾಂತ್​ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಈಶ್ವರಿ ಹಾಗೂ ಕಳ್ಳತನಕ್ಕೆ ಕುಮ್ಮಕ್ಕು ನೀಡಿದ ಕಾರು ಚಾಲಕ ವೆಂಕಟೇಶ್​ನನ್ನು ಈಗಾಗಲೇ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಇದೀಗ ವಿಚಾರಣೆ ವೇಳೆ ಆರೋಪಿ ಈಶ್ವರಿ ಕಳ್ಳತನ ಮಾಡಲು ಕಾರಣ ಏನೆಂಬುದನ್ನು ಪೊಲೀಸರು ಮುಂದೆ ಬಹಿರಂಪಡಿಸಿದ್ದಾಳೆ. ಕೋಟ್ಯಂತರ ಮೌಲ್ಯದ ಚಿನ್ನಾಭರಣ ಕಳ್ಳತನಕ್ಕೆ ಮನೆಯ ಮಾಲೀಕರೇ ಕಾರಣ ಎನ್ನುವ ಮೂಲಕ ಐಶ್ವರ್ಯಾ ರಜನಿಕಾಂತ್​ ಮೇಲೆಯೇ ಈಶ್ವರಿ ಗೂಬೆ ಕೂರಿಸಿದ್ದಾಳೆ.

ಅಂದಹಾಗೆ ಐಶ್ವರ್ಯಾ, 2019ರಲ್ಲಿ ತಮ್ಮ ತಂಗಿ ಸೌಂದರ್ಯ ಅವರ ಮದುವೆಯಲ್ಲಿ ಆಭರಣವನ್ನು ಧರಿಸಿದ್ದರು. ಮದುವೆ ಬಳಿಕ ನಾನು ಆಭರಣಗಳನ್ನು ಪ್ರತ್ಯೇಕ ಲಾಕರ್‌ನಲ್ಲಿ ಇರಿಸಿದೆ. ನಾನು ಅದನ್ನು ಮತ್ತೆ ತೆರೆಯಲಿಲ್ಲ. ಆಳ್ವಾರಪೇಟೆಯ ಸೇಂಟ್ ಮೇರಿಸ್ ರಸ್ತೆ, ಸಿಐಟಿ ನಗರ, ಬಾಯ್ಸ್ ಗಾರ್ಡನ್‌ನ ಮೂರು ಮನೆಗಳಲ್ಲಿರುವ ಲಾಕರ್‌ಗಳನ್ನು ಪರ್ಯಾಯವಾಗಿ ಇರಿಸಲಾಗಿತ್ತು ಎಂದು ಐಶ್ವರ್ಯಾ ಹೇಳಿದ್ದಾರೆ.

ನೆಕ್ಲೇಸ್, ವಜ್ರಾಭರಣ ಸೇರಿದಂತೆ 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಐಶ್ವರ್ಯಾ ಮನೆಯಲ್ಲಿ ಕಳ್ಳತನವಾಗಿದೆ. ಇದೇ ಸಮಯದಲ್ಲಿ ಐಶ್ವರ್ಯಾ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಈಶ್ವರಿ ಅವರ ಬ್ಯಾಂಕ್ ಖಾತೆಯಲ್ಲಿ ಲಕ್ಷಗಟ್ಟಲೆ ಹಣದ ವ್ಯವಹಾರ ನಡೆದಿರುವುದು ಪೊಲೀಸರಿಗೆ ತಿಳಿದುಬಂದಿತು.

Aishwarya Rajinikant 1

ಇದಾದ ಬಳಿಕ ಪೊಲೀಸರು ಮಂಟವೇಲಿ ಏರಿಯಾದಲ್ಲಿ ವಾಸವಿದ್ದ ಈಶ್ವರಿ ಮತ್ತು ಆಕೆಯ ಪತಿ ಅಂಗಮುತುರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಐಶ್ವರ್ಯಾ ಮನೆಯಲ್ಲಿ 18 ವರ್ಷದಿಂದ ಕೆಲಸ ಮಾಡುತ್ತಿದ್ದೆ. ಚಿನ್ನಾಭರಣವನ್ನು ಎಲ್ಲಿಟ್ಟಿದ್ದಾರೆ ಮತ್ತು ಲಾಕರ್​ ಕೀ ಎಲ್ಲಿದೆ ಎಂಬುದು ನನಗೆ ತಿಳಿದಿತ್ತು. ಮೊದಲ ನಾನು ಲಾಕರ್​ನಲ್ಲಿ ಸ್ವಲ್ಪ ಆರಭರಣವನ್ನು ಕಳ್ಳತನ ಮಾಡಿದೆ. ಈ ವೇಳೆ ಐಶ್ವರ್ಯಾ ಮನೆಯಲ್ಲಿ ಯಾರು ಕೂಡ ಗಮನಿಸಲಿಲ್ಲ ಎಂದು ಈಶ್ವರಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಳು.

95 ಲಕ್ಷ ರೂ.ಗೆ ಮನೆ ಖರೀದಿ

ಆಭರಣಗಳನ್ನು ಕದ್ದ ಬಳಿಕ ಚಾಲಕ ವೆಂಕಟೇಶನ್​ ಸಹಾಯದಿಂದ ಸ್ವಲ್ಪ ಸ್ವಲ್ಪವಾಗಿ ಸುಮಾರು 4 ವರ್ಷಗಳವರೆಗೆ ಲಾಕರ್​ನಲ್ಲಿದ್ದ ಎಲ್ಲ ಆಭರಣಗಳನ್ನು ಕಳ್ಳತನ ಮಾಡಿದೆ. ಇದೇ ಸಂದರ್ಭದಲ್ಲಿ ನಾನು ಯಾರಿಗೂ ಅನುಮಾನ ಬರಬಾರದು ಅಂತಾ ಬ್ಯಾಂಕ್​ ಲೋನ್​ ಪಡೆದುಕೊಂಡು ಚೋಳಿಂಗನಲ್ಲೂರಿನಲ್ಲಿ 95 ಲಕ್ಷ ರೂ.ಗೆ ಮನೆ ಖರೀದಿ ಮಾಡಿದೆ. ಎರಡೇ ವರ್ಷದಲ್ಲಿ ನಾನು ಬ್ಯಾಂಕ್​ ಸಾಲವನ್ನು ಮರು ಪಾವತಿ ಮಾಡಿದೆ. ಆರು ತಿಂಗಳ ಹಿಂದೆ ನಾನು ಕೆಲಸ ಬಿಟ್ಟಿದ್ದೆ ಎಂದಿರುವ ಈಶ್ವರಿ ಕಳ್ಳತನಕ್ಕೆ ಪ್ರೇರೇಪಿಸಿದ್ದು ಐಶ್ವರ್ಯಾ ಅವರೇ ಎಂದು ಸ್ಫೋಟಕ ಸಂಗತಿಯನ್ನು ಬಿಚ್ಚಿಟ್ಟಿದ್ದಾಳೆ.

ಪೊಲೀಸರು ಈಶ್ವರಿಯನ್ನು ಹಲವು ಆಯಾಮಗಳಿಂದ ವಿಚಾರಣೆ ನಡೆಸಿದಾಗ, ಐಶ್ವರ್ಯಾ ಮನೆಯಲ್ಲಿ ಪ್ರತಿನಿತ್ಯ ದನದಂತೆ ದುಡಿಯುತ್ತಿದ್ದೆ. ಆದರೆ, ಅವರು ಕೆಲಸಕ್ಕೆ ತಕ್ಕಂತೆ ಸಂಬಳ ನೀಡಲಿಲ್ಲ ಎಂದು ಹೇಳಿದ್ದಾರೆ. ಎಷ್ಟ ಸಂಬಳ ಪಡೆಯುತ್ತಿದ್ದೆ ಎಂದು ಪೊಲೀಸರು ಕೇಳಿದಾಗ, ತಿಂಗಳಿಗೆ 30 ಸಾವಿರ ರೂಪಾಯಿ ನೀಡುತ್ತಿದ್ದರೂ ಸಂಬಳ ಸಾಕಾಗದ ಕಾರಣ ಐಶ್ವರ್ಯಾ ಮನೆಯಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದೆ ಎಂದು ಈಶ್ವರಿ ಹೇಳಿದ್ದಾಳೆ.

ಐಶ್ವರ್ಯಾ ಕಾರಣ

ಕಳ್ಳತನದ ಬಗ್ಗೆ ಐಶ್ವರ್ಯಾ ಮತ್ತು ಅವರ ಕುಟುಂಬದವರಿಗೆ ಗೊತ್ತಾಗದ ಕಾರಣ ಕದಿಯಲು ಪ್ರಾರಂಭಿಸಿದ್ದಾಗಿ ಮತ್ತು ಆಭರಣಗಳನ್ನು ಮಾರಿ, ಮನೆಗಳನ್ನು ಖರೀದಿಸಿದ್ದಾಗಿ ಈಶ್ವರಿ ತಪ್ಪೊಪ್ಪಿಕೊಂಡಿದ್ದಾಳೆ. ಇನ್ನು ಸ್ವಲ್ಪ ದಿನ ಮನೆಯಲ್ಲಿದ್ದಿದ್ದರೆ ಇನ್ನಷ್ಟು ಕಳ್ಳತನ ಮಾಡುತ್ತಿದ್ದೆ ಎಂದು ಯಾವುದೇ ಹಿಂಜರಿಕೆಯಿಲ್ಲದೆ ಹೇಳಿದ್ದಾರೆ. ನನಗೆ ನೀಡುತ್ತಿದ್ದ ಕಡಿಮೆ ಸಂಬಳವೇ ಐಶ್ವರ್ಯಾ ಮನೆಯಲ್ಲಿ ಕಳ್ಳತನ ಮಾಡಲು ಪ್ರೇರೇಪಿಸಿತು ಎಂದು ಈಶ್ವರಿ ಹೇಳಿದ್ದು, ಇದನ್ನು ಕೇಳಿ ಅನೇಕರು ಹುಬ್ಬೇರಿಸಿದ್ದಾರೆ.

ಚೆನ್ನೈನ ಮೈಲಾಪುರದಲ್ಲಿರುವ ಆಭರಣ ಮಳಿಗೆಯೊಂದರ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಈಶ್ವರಿ ಅಕ್ರಮವಾಗಿ ಮಾರಾಟ ಮಾಡಿದ್ದ ಐಶ್ವರ್ಯಾ ರಜನಿಕಾಂತ್ ಅವರ 100 ಚಿನ್ನಾಭರಣ ಮತ್ತು ವಜ್ರದ ಆಭರಣಗಳ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಐಶ್ವರ್ಯಾ ರಜನಿಕಾಂತ್ ಅವರು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಅಡಿಯಲ್ಲಿ ತಮ್ಮ ಹೊಸ ಚಿತ್ರ ‘ಲಾಲ್ ಸಲಾಮ್’ ಅನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ವಿಕ್ರಾಂತ್ ಮತ್ತು ವಿಷ್ಣು ವಿಶಾಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಜೀವಿತಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net