

ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರದ್ದು ದೊಡ್ಡ ಹೆಸರು. ಅವರೊಂದಿಗೆ ಸಿನಿಮಾ ಮಾಡಬೇಕೆಂದರೆ ಈಗಲೂ ಸಾಲು ಗಟ್ಟಿ ನಿರ್ದೇಶಕರು ನಿಲ್ಲುತ್ತಾರೆ. ಆದರೆ, ಇದೇ ನಟಿ ಸಿನಿಮಾರಂಗದಲ್ಲಿ ಅನುಭವಿಸಿದ ಯಾತನೆ ತುಂಬ ದೊಡ್ಡದು. ಆ ಆರಂಭದ ದಿನಗಳನ್ನು ಸ್ವತಃ ಐಶ್ವರ್ಯಾ ನೆನಪು ಮಾಡಿಕೊಂಡಿದ್ದಾರೆ.
ಮಾಡೆಲಿಂಗ್ ಕ್ಷೇತ್ರಕ್ಕೆ ಬರುವುದಕ್ಕೂ ಮುನ್ನ ಡಬ್ಬಿಂಗ್ ಕಲಾವಿದೆಯಾಗಿ ಐಶ್ವರ್ಯಾ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದರು. ಅಲ್ಪ ಸ್ವಲ್ಪ ಆ ಕೆಲಸದಿಂದಾದರೂ ಸಿನಿಮಾ ಅವಕಾಶ ಮತ್ತು ಸಂಪಾದನೆ ಮಾಡಬಹುದೆಂಬ ಕನಸು ಅವರದ್ದಾಗಿತ್ತು. ಆದರೆ, ಸಾಕಷ್ಟು ಕಿರುತೆರೆಯ ಡಬ್ಬಿಂಗ್ ಅವಕಾಶಗಳಿಂದ ಅವರನ್ನು ಕೈ ಬಿಡಲಾಗಿತ್ತು. ಡಬ್ಬಿಂಗ್ ಮಾಡೋಕೂ ನೀನು ಅರ್ಹಳಲ್ಲ ಎಂದು ಎಷ್ಟೋ ಮಂದಿ ಐಶ್ವರ್ಯಾ ಅವರನ್ನು ಹೀಯಾಳಿಸಿದ್ದರು.
‘ನಿನಗೆ ಡಬ್ಬಿಂಗ್ ಮಾಡಲು ಬರುವುದಿಲ್ಲ. ನೀನು ಡಬ್ಬಿಂಗ್ ಮಾಡಲು ಅರ್ಹಳೂ ಅಲ್ಲ. ಎಂದು ಸಾಕಷ್ಟು ಕಿರುತೆರೆ ಧಾರಾವಾಹಿಗಳಿಂದ ಅವಕಾಶಗಳನ್ನು ಕಳೆದುಕೊಂಡಿದ್ದೆ. ಆದರೆ, ವಿಶ್ವ ಸುಂದರಿ ಪಟ್ಟ ಒಲಿದ ಬಳಿಕ ಆ ಎಲ್ಲವೂ ಮರಳಿ ಬಂದಿತು. ಸಿನಿಮಾಗಳಲ್ಲಿ ನಾಯಕಿಯಾದೆ‘ ಎಂದು ಹೇಳಿಕೊಳ್ಳುತ್ತಾರೆ ಐಶ್ವರ್ಯಾ.
ಅದ್ಯಾವುದಕ್ಕೂ ಧೃತಿಗೆಡದ ಐಶ್ವರ್ಯಾ, 1994ರಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ದಿನದಿಂದ ದಿನಕ್ಕೆ ಒಳ್ಳೊಳ್ಳೆ ಮಾಡೆಲಿಂಗ್ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಕೊನೆಗೆ ವಿಶ್ವ ಸುಂದರಿ ಪಟ್ಟವನ್ನೂ ಅಲಂಕರಿಸಿದರು. ಅಲ್ಲಿಂದ ಐಶ್ವರ್ಯಾ ಲಕ್ ಬದಲಾಯಿತು. ಸಾಲು ಸಾಲು ಸಿನಿಮಾ ಅವಕಾಶಗಳು ಅವರನ್ನು ಅರಸಿ ಬಂದವು. ಅಲ್ಲಿಂದ ಕೇವಲ ಬಾಲಿವುಡ್ ಮಾತ್ರವಲ್ಲ, ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ಮಿಂಚಿದರು.
ಸದ್ಯ ಮಣಿರತ್ನಂ ನಿರ್ದೇಶನದ ಸಿನಿಮಾವೊಂದರಲ್ಲಿ ನಾಯಕಿಯಾಗಿ ಐಶ್ವರ್ಯಾ ನಟಿಸುತ್ತಿದ್ದಾರೆ. ಇನ್ನೇನು ಶೀಘ್ರದಲ್ಲಿ ಅದರ ಶೂಟಿಂಗ್ನಲ್ಲಿಯೂ ಅವರು ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್)