ಅಫಜಲಪುರ ತಾಪಂ ಅಧ್ಯಕ್ಷೆಯನ್ನೇ ವರಿಸಿದ ​ಉಪಾಧ್ಯಕ್ಷ, ಇನ್ಮುಂದೆ ಪತಿ-ಪತ್ನಿ ದರ್ಬಾರ್​!

TP- wedding
Published on

ಕರಜಗಿ (ಕಲಬುರಗಿ): ರಾಜ್ಯ ಮಾತ್ರವಲ್ಲ ದೇಶದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್​ ಬದ್ಧ ವೈರಿಗಳಂತಿವೆ. ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಲೇ ಇದೆ. ಆದರೆ, ಅಫಜಲಪುರ ತಾಲೂಕು ಪಂಚಾಯಿತಿ ಮಾತ್ರ ಇದಕ್ಕೆ ತದ್ವಿರುದ್ಧ.

ಈ ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ದೋಸ್ತಿಯಾಗಿ ಅಧಿಕಾರಕ್ಕೇರಿವೆ. ಇದೀಗ ಬಿಜೆಪಿ ಪ್ರತಿನಿಧಿಸುವ ಅಧ್ಯಕ್ಷೆಯನ್ನು ಕಾಂಗ್ರೆಸ್​ ಉಪಾಧ್ಯಕ್ಷ ಮದುವೆಯಾಗಿದ್ದು, ತಾಪಂನಲ್ಲಿ ಇನ್ಮುಂದೆ ಪತಿ-ಪತ್ನಿ ದರ್ಬಾರ್​ ನಡೆಯಲಿದೆ.

ಅಫಜಲಪುರ ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ್​ ಜತೆ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಇಂದು(ಸೋಮವಾರ) ಸಪ್ತಪದಿ ತುಳಿದಿದ್ದಾರೆ. ಲಾಕ್​ಡೌನ್​ ಹಿನ್ನೆಲೆ ಆಳಂದ ತಾಲೂಕಿನ ಜಿಡಗಾ ಮಠದಲ್ಲಿ ಸರಳ ಮದುವೆ ಆಗುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಸರ್ಕಾರದ ಮಾರ್ಗಸೂಚಿ ಪ್ರಕಾರವೇ ದಾಪಂತ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ.

ತಾಪಂ ಅಧ್ಯಕ್ಷೆಯನ್ನು ಉಪಾಧ್ಯಕ್ಷ ವಿವಾಹವಾದ ಅಪರೂಪದ ಘಟನೆ 'ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ', 'ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ' ಎಂಬ ಮಾತನ್ನು ನೆನಪಿಸುತ್ತದೆ.

ಈ ಅಪರೂಪದ ಮದುವೆಗೆ ಮಾಶಾಳ ಜಿಪಂ ಸದಸ್ಯ ಅರುಣಕುಮಾರ ಪಾಟೀಲ್​, ಪ್ರಮುಖರಾದ ತುಕಾರಾಮ ಪಾಟೀಲ್​, ಮಹಾದೇವ ಗೌಡ ಕರೂಟಿ, ಹಾಜಿಮಲಂಗ್​ ಮುತವಲಿ, ಮಲಿಕ್​ಸಾಬ್​ ಕೋರಬು, ಇರ್ಫಾನ್​ ಜಮಾದಾರ, ಗಿರಿಮಲ್ಲಯ್ಯ ಸ್ವಾಮಿ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net