

ಶಿಲ್ಲೋಂಗ್: ಆ ಮಗುವಿಗೆ ಕೇವಲ 8 ತಿಂಗಳು ಪ್ರಾಯ. ಅನಾರೋಗ್ಯಪೀಡಿತವಾಗಿ ಅರಿವು ತಪ್ಪಿದ ಆ ಮಗುವನ್ನು ಉಳಿಸುವುದಕ್ಕಾಗಿ ಅಪ್ಪ-ಅಮ್ಮ ಚಾಲಕನೊಬ್ಬನ ನೆರವಿನೊಂದಿಗೆ 400 ಕಿ.ಮೀ. ದೂರದ ಆಸ್ಪತ್ರೆಗೆ ಧಾವಿಸಿದ್ದರು. ಅವರು ಚಿಕಿತ್ಸೆಗಾಗಿ ಅರುಣಾಚಲ ಪ್ರದೇಶದಿಂದ ಅಸ್ಸಾಂ ದಾರಿಯಾಗಿ ಮೇಘಾಲಯಕ್ಕೆ ಕೆಲವೇ ಗಂಟೆಗಳಲ್ಲಿ ಆಗಮಿಸಿದ್ದರು.
ಅರುಣಾಚಲ ಪ್ರದೇಶದ ತೋಮೊ ರಿಬಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಆ್ಯಂಡ್ ಮೆಡಿಕಲ್ ಸೈನ್ಸಸ್ನಿಂದ ಹೆಚ್ಚಿನ ಚಿಕಿತ್ಸೆಗಾಗಿ ಆ ಮಗುವನ್ನು ಮೇಘಾಲಯದ ಇಂದಿರಾಗಾಂಧಿ ರೀಜಿನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಆ್ಯಂಡ್ ಮೆಡಿಕಲ್ ಸೈನ್ಸಸ್ ಗೆ ಕೊಂಡೊಯ್ದು ದಾಖಲಿಸುವಂತೆ ಡಾಕ್ಟರ್ ಶಿಫಾರಸು ಮಾಡಿದ್ದರು. ಅದರಂತೆ ಆ ಪಾಲಕರು ಮಗುವನ್ನು ರಸ್ತೆ ದಾರಿಯಾಗಿ ಕರೆದುಕೊಂಡು ಬಂದಿದ್ದರು.
ಕೂಡಲೇ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ ವೈದ್ಯರು ಮಗುವನ್ನು ಕೋವಿಡ್ 19 ಟೆಸ್ಟ್ಗೆ ಒಳಪಡಿಸಿ ಚಿಕಿತ್ಸೆ ಮುಂದುವರಿಸಿದರು. ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಸಂಜೆ ವೇಳೆಗೆ ಮಗು ಮೃತಪಟ್ಟಿದೆ. ಕೂಡಲೇ ಪಾಲಕರನ್ನು ಮತ್ತು ಅವರನ್ನು ಕರೆ ತಂದ ಚಾಲಕನನ್ನೂ ಕೋವಿಡ್ -19 ಟೆಸ್ಟ್ಗೆ ಒಳಪಡಿಸಲಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇದುವರೆಗೆ ಮೇಘಾಲಯದಲ್ಲಿ 89 ಕೋವಿಡ್ 19 ಕೇಸ್ಗಳು ದೃಢಪಟ್ಟಿವೆ. ಇದರಲ್ಲಿ 44 ಮಂದಿಗೆ ಚಿಕಿತ್ಸೆ ನಡೆಯುತ್ತಿದೆ. 43 ಜನ ಸೋಂಕು ಮುಕ್ತರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ಸಕ್ರಿಯ ಕೇಸ್ಗಳ ಪೈಕಿ 22 ಕೇಸ್ಗಳು ಸ್ಥಳೀಯ ಬಿಎಸ್ಎಫ್ ಕೇಂದ್ರ ಕಚೇರಿಯಲ್ಲಿ ಕಾಣಿಸಿಕೊಂಡಿರುವಂಥದ್ದು. (ಏಜೆನ್ಸೀಸ್)