

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ಇದೇ ಜುಲೈ 2ರಿಂದ ಬರ್ಮಿಂಗ್ಹ್ಯಾಮ್ನ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ತಂಡ, ಎರಡನೇ ಟೆಸ್ಟ್ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಮಧ್ಯೆ ಟೀಮ್ ಇಂಡಿಯಾಗೆ ಆಘಾತ ಎದುರಾಗಿದ್ದು, ಇಬ್ಬರೂ ವೇಗಿಗಳು ಮುಂದಿನ ಟೆಸ್ಟ್ಗೆ ಅಲಭ್ಯ ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಸೋಲಿನೊಂದಿಗೆ ಆರಂಭಿಸಿರುವುದು ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಪ್ರಸ್ತುತ 0-1 ಅಂತರದಲ್ಲಿ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ, ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನಾಡಲಿದೆ ಎಂದು ವರದಿಗಳಿವೆ. ಇದರೊಟ್ಟಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಮತ್ತೊಬ್ಬ ಸ್ಟಾರ್ ವೇಗಿ ತಂಡದಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
ಫಿಟ್ನೆಸ್ ಸಮಸ್ಯೆ ಮತ್ತು ಕೆಲಸದ ಹೊರೆ ನಿರ್ವಹಣೆಯಿಂದಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಈ ಹಿಂದೆ ಬುಮ್ರಾ ಅವರನ್ನು ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಿಸಲು ನಿರ್ಧರಿಸಿತ್ತು. ಆದರೆ, ಶುಕ್ರವಾರದ ಅಭ್ಯಾಸ ಅವಧಿಯಲ್ಲಿ ಬುಮ್ರಾ ಭಾಗವಹಿಸಿಲ್ಲ. ಇದರರ್ಥ ಅವರು ಎರಡನೇ ಟೆಸ್ಟ್ನಲ್ಲಿ ಆಡುವುದು ಬಹುತೇಕ ಅನುಮಾನ. ಈಗ, ಅವರೊಂದಿಗೆ ಮತ್ತೊಬ್ಬ ವೇಗಿ ಪಂದ್ಯವನ್ನು ಆಡದಿರಬಹುದು ಎಂದು ಹೇಳಲಾಗುತ್ತಿದೆ. ಅದು ಪ್ರಸಿದ್ಧ್ ಕೃಷ್ಣ.
ಮೊದಲ ಟೆಸ್ಟ್ನಲ್ಲಿ ತಂಡದ ಪರ ಉತ್ತಮವಾಗಿ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ ಕೂಡ ಎರಡನೇ ಟೆಸ್ಟ್ಗೆ ಅಲಭ್ಯ ಎಂದು ಕ್ರಿಕೆಟ್ ವರದಿಗಳು ಉಲ್ಲೇಖಿಸಿವೆ. ಇದಕ್ಕೆ ಕಾರಣ, ಶುಕ್ರವಾರ ನಡೆದ ನೆಟ್ ಸೆಷನ್ನಲ್ಲಿ ಕೃಷ್ಣ ಭಾಗವಹಿಸಲಿಲ್ಲ. ಬುಮ್ರಾ ಜೊತೆಗೆ ಪ್ರಸಿದ್ಧ್ ಕೃಷ್ಣ ಕೂಡ ನೆಟ್ಸ್ನಲ್ಲಿ ತರಬೇತಿ ನಡೆಸದ ಹಿನ್ನಲೆ ಮುಂದಿನ ಟೆಸ್ಟ್ಗೆ ಅವರಿಬ್ಬರು ಅಲಭ್ಯ ಎಂದೇ ವರದಿಗಳು ಸೂಚಿಸಿವೆ,(ಏಜೆನ್ಸೀಸ್).