

ನವದೆಹಲಿ: ಕರೊನಾ ಎರಡನೇ ಅಲೆ ಜೋರಾಗಿಯೇ ಬೀಸುತ್ತಿದ್ದು, ಮತ್ತೊಮ್ಮೆ ಜನಜೀವನವನ್ನು ಅಡಿಮೇಲು ಮಾಡಲು ಆರಂಭಿಸಿದೆ. ದಿನೇದಿನೆ ಸೋಂಕಿನ ಪ್ರಮಾಣ ಮಾತ್ರವಲ್ಲದೆ ಸಾವಿನ ಪ್ರಮಾಣವೂ ಏರುತ್ತಿದ್ದು, ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ.
ಈ ನಡುವೆಯೇ ದೇಶದಲ್ಲಿನ ಸೋಂಕಿನ ಪ್ರಮಾಣ ಈಗ ಹೇಳಲಾಗಿರುವುದಕ್ಕಿಂತಲೂ ಜಾಸ್ತಿ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಕರೊನಾ ಕುರಿತ ಭಯ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಒಂದುವೇಳೆ ಆ ಅಂದಾಜು ಸರಿಯಾದುದೇ ಆಗಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇರಲಿದೆ.
ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯನ್ವಯ ಭಾರತದಲ್ಲಿ ಶುಕ್ರವಾರದ ವರದಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 2,17,353 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 1,185 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಗುರುವಾರ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 2 ಲಕ್ಷ ದಾಟಿದೆ. ಇದು ದೇಶದಲ್ಲಿ 2020ರಲ್ಲಿ ಕರೊನಾ ಪ್ರಕರಣ ಕಾಣಿಸಿಕೊಂಡ ಬಳಿಕ ಒಂದು ದಿನದಲ್ಲಿ ವರದಿಯಾದ ಪ್ರಕರಣಗಳಲ್ಲೇ ಗರಿಷ್ಠವಾಗಿದೆ.
ಆದರೆ ಸೋಂಕಿನ ಪ್ರಕರಣಗಳ ಅಸಲಿ ಸಂಖ್ಯೆ ಇನ್ನೂ ಹೆಚ್ಚಿದೆ ಎನ್ನುತ್ತಾರೆ ಕೆಲವು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೂ ಪ್ರತಿ ಪ್ರಕರಣವನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದಿರುವ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಎರಿಕ್ ಫೀಗ್ಲ್ ಡಿಂಗ್, ಭಾರತದಲ್ಲಿ ಸೋಂಕಿನ ಪ್ರಮಾಣ ಈಗ ಖಚಿತ ಪಡಿಸಿರುವುದಕ್ಕಿಂತಲೂ 5ರಿಂದ 10 ಪಟ್ಟು ಹೆಚ್ಚಿರಬಹುದು ಎಂದಿದ್ದಾರೆ. (ಏಜೆನ್ಸೀಸ್)