ಅಮ್ಮಾ ತಾಯಿ.. ಭಿಕ್ಷೆ ನೀಡಿ.. ಸಂಬಳ ಕೊಟ್ಟಿಲ್ಲ, ದಯವಿಟ್ಟು ಭಿಕ್ಷೆ ಹಾಕಿ: ಹಬ್ಬದ ದಿನವೇ ಸಾರಿಗೆ ಸಂಸ್ಥೆ ನೌಕರರಿಂದ ಭಿಕ್ಷಾಟನೆ

Beg
ಮಕ್ಕಳೊಂದಿಗೆ ಭಿಕ್ಷೆ ಬೇಡಿದ ಸಾರಿಗೆ ಸಂಸ್ಥೆ ನೌಕರ
Published on

ಕೋಲಾರ/ಬಾಗಲಕೋಟೆ: ನಷ್ಟದ ಕಾರಣಕ್ಕೆ ಸಂಬಳ ಕೊಡಲೂ ಹಣವಿಲ್ಲ ಎಂದು ಹೇಳಿದ್ದ ಸಾರಿಗೆ ಸಂಸ್ಥೆ ಇದೀಗ ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಕೆಲವರಿಗಷ್ಟೇ ವೇತನ ನೀಡಿದೆ. ಈ ನಡುವೆ ಹಬ್ಬ ಆಚರಿಸಲು ಹಣವಿಲ್ಲ ಎಂದು ಹೇಳಿ ಸಾರಿಗೆ ಸಂಸ್ಥೆ ನೌಕರರು ಭಿಕ್ಷಾಟನೆ ಮಾಡಿದ್ದೂ ನಡೆದಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ಬಸ್ ನಿಲ್ದಾಣ ಬಳಿ ಸಾರಿಗೆ ಸಂಸ್ಥೆ ನೌಕರ ಪ್ರೇಮ್​ಕುಮಾರ್​ ಹಬ್ಬದ ದಿನವಾದ ಯುಗಾದಿಯಂದೇ ಭಿಕ್ಷೆ ಬೇಡಿದ್ದಾರೆ. ಸಂಸ್ಥೆ ಸಂಬಳ ನೀಡದ ಕಾರಣ ಹಬ್ಬ ಆಚರಣೆ ಮಾಡಲೂ ಹಣವಿಲ್ಲ. ಅದರಲ್ಲೂ ಬಸ್​ ನಿಲ್ದಾಣದಲ್ಲಿ ಇವರೊಬ್ಬರೇ ಭಿಕ್ಷೆ ಬೇಡಿಲ್ಲ. ಭಿಕ್ಷಾಟನೆಗೆ ತನ್ನಿಬ್ಬರೂ ಮಕ್ಕಳನ್ನು ಕರೆದುಕೊಂಡು ಬಂದಿದ್ದರಿಂದ ಸಾರ್ವಜನಿಕರು ಅನುಕಂಪ ವ್ಯಕ್ತಪಡಿಸಿದರು.

ಮತ್ತೊಂದೆಡೆ ಬಾಗಲಕೋಟೆಯಲ್ಲಿ ಚಾಲಕಿ-ಕಂ-ಕಂಡಕ್ಟರ್​ರೊಬ್ಬರು ಮನೆಮನೆಗೂ ತೆರಳಿ ಭಿಕ್ಷಾಟನೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದಲ್ಲಿ ರಾಜೇಶ್ವರಿ ಬಂಗಾರಿ ಎಂಬ ಈ ಉದ್ಯೋಗಿ ತಟ್ಟೆ ಹಿಡಿದು ಬೇಡಿದ್ದು, ಜನರು ಐದು, ಹತ್ತು, ಇಪ್ಪತ್ತು ರೂಪಾಯಿ ಭಿಕ್ಷೆ ನೀಡಿದ್ದಾರೆ. ಬಿರು ಬಿಸಿಲಿನಲ್ಲಿ ಒಂಟಿಯಾಗಿ ತಿರುಗಾಡಿದ ಇವರು, 'ಅಮ್ಮಾ.. ತಾಯಿ.. ನಮಗೆ ಸಂಬಳ ಕೊಟ್ಟಿಲ್ಲ.. ಉಣ್ಣಲೂ ಏನೂ ಇಲ್ಲ..' ಎಂದು ಬೇಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net