ಬೆಂಗಳೂರು: ತಾವೇ ನಟಿಸಿದ ಸಿನಿಮಾಗೆ ಓಮ್ಮೊಮ್ಮೆ ಆ ನಟರಿಗೆನೇ ಟಿಕೆಟ್ ಸಿಗುವುದಿಲ್ಲ. ಇನ್ನು, ಹಾಗೆ ಟಿಕೆಟ್ ಸಿಗದಿದ್ದಾಗ ಹೇಗೆ ಅನಿಸುತ್ತೆ ಎಂಬ ಕುತೂಹಲ ಹಲವರಲ್ಲಿ ಇದ್ದೇ ಇರುತ್ತೆ. ಇದೀಗ, ಈ ಕುತೂಹಲಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ 'RRR' ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ ಶ್ರಿಯಾ ಶರಣ್ ಅವರು ಉತ್ತರ ಕೊಟ್ಟಿದ್ದಾರೆ. ಅಂದಹಾಗೆ, ತಾವೇ ನಟಿಸಿರುವ ಸಿನಿಮಾ ನೋಡಲು ತಮಗೆ ಟಿಕೆಟ್ ಸಿಗದಿದ್ದಾಗ ಬೇಸರದ ಜತೆಗೆ ಸಂತೋಷ ಆಗುತ್ತಂತೆ. ಈ ಸಂತೋಷದ ಅನುಭವದ ಬಗ್ಗೆ ನಟಿ ಶ್ರಿಯಾ ಶರನ್ ಅವರು, ''ಸಿನಿಮಾ ಬಿಡುಗಡೆ ಆದಾಗ ನಾನು ಮುಂಬೈನಲ್ಲಿದ್ದೆ. ಅಲ್ಲಿ ಸಿನಿಮಾ ನೋಡಲು ಯತ್ನಿಸಿದೆ. ಆದರೆ, ನನಗೆ ಟಿಕೆಟ್ ದೊರಕಲಿಲ್ಲ. ಅದು ಬಹಳ ಖುಷಿಕೊಟ್ಟಿತು. ಈಗ ಬೆಂಗಳೂರಿಗೆ ಬಂದಿದ್ದೇನೆ. ಇಲ್ಲೂ ಚಿತ್ರಮಂದಿರಗಳು ಫುಲ್ ಆಗಿವೆ... ಆದರೆ, ಈ ವಾರಾಂತ್ಯದಲ್ಲಿ ಇಲ್ಲಿಯೇ ಸಿನಿಮಾ ನೋಡುವ ವಿಶ್ವಾಸದಲ್ಲಿದ್ದೇನೆ'', ಎಂದು ತಮ್ಮ ಖುಷಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.