

Kamal Haasan: 'ಕನ್ನಡ ಹುಟ್ಟಿದ್ದು ತಮಿಳಿನಿಂದ' ಎಂದು ಹೇಳುವ ಮೂಲಕ ಇದೀಗ ನಟ ಕಮಲ್ ಹಾಸನ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದನ್ನು ತೀಕ್ಷ್ಣವಾಗಿ ಖಂಡಿಸಿರುವ ಕನ್ನಡಿಗರು ಜಾಲತಾಣ ಸೇರಿದಂತೆ ಪ್ರತಿಭಟನೆ ಮೂಲಕ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಕ್ಷಮೆ ಕೋರುವಂತೆ ಕೂಡ ಆಗ್ರಹಿಸಿದ್ದಾರೆ. ಆದರೆ, ಕಮಲ್ ಹಾಸನ್ ಮಾತ್ರ ನಾನು ಕ್ಷಮೆ ಕೇಳುವುದಿಲ್ಲ ಎನ್ನುವ ಮೂಲಕ ಉದ್ಧಟತನ ಪ್ರದರ್ಶಿಸಿರುವುದು ಸದ್ಯ ಕನ್ನಡಿಗರ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ.
ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಮಲ್ ಹಾಸನ್, 'ನಾನು ಕ್ಷಮೆ ಕೋರುವುದಿಲ್ಲ. ನಾನು ಪ್ರೀತಿಯಿಂದಲೇ ಹೇಳಿರುವುದು' ಎಂದಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಕಮಲ್ ಹೇಳಿಕೆ ಕಿಡಿ ಹಚ್ಚಿದರೆ, ಮತ್ತೊಂದೆಡೆ, ಜಾಲತಾಣದಲ್ಲಿ ಕನ್ನಡ ನಟಿ ರಮ್ಯ ಹಾಕಿರುವ ಪೋಸ್ಟ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕಮಲ್ ಅವರ ಸಿನಿಮಾಗೆ ನಿಷೇಧ ಹೇರುವ ಆಗ್ರಹದ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ರಮ್ಯ, 'ಅವರು ಅನುಚಿತವಾಗಿ ಮಾತನಾಡಿರುವುದು ಸತ್ಯ. ಆದ್ರೆ, ಅವರ ಸಿನಿಮಾವನ್ನು ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಗಲಿಲ್ಲವೇ? ಒಂದು ಸಣ್ಣ ಕ್ಷಮೆ ಕೊಡಬಹುದಲ್ಲವೇ' ಎಂದು ಹೇಳಿದ್ದಾರೆ.
"ಇಲ್ಲಿ ನಾನು ಕಮಲ್ ಹಾಸನ್ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ. ಪ್ರೀತಿಯಲ್ಲಿ ಅಹಂಕಾರ ಇರುವುದಿಲ್ಲ. ಸುಲಭವಾಗಿ ಕ್ಷಮೆ ಕೇಳಬಹುದು. ಒಂದು ಕ್ಷಮೆ ಕೇಳಿ, ಮುಂದೆ ಹೋಗುವುದು ಉತ್ತಮ" ಎಂದು ರಮ್ಯ ಪ್ರತಿಕ್ರಿಯಿಸಿದ್ದಾರೆ. ಸದ್ಯ ರಮ್ಯ ಹಾಕಿರುವ ಪೋಸ್ಟ್ ಕೆಲವರ ಅಸಮಾಧಾನಕ್ಕೆ ಕಾರಣವಾಗಿದ್ದು, ನಟಿಯ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಮತ್ತೊಬ್ಬರು ಟ್ವೀಟ್ ಮಾಡಿ, "ಸೋನು ನಿಗಮ್ ಅವರನ್ನು ಬಹಿಷ್ಕರಿಸುವುದು ಓಕೆ. ಅದೇ ಕಮಲ್ ಹಾಸನ್ ಅವರನ್ನು ಬಹಿಷ್ಕರಿಸಬಾರದು ಏಕೆಂದರೆ ನಾವು ಕಪಟಿಗಳು ಅಲ್ವಾ ರಮ್ಯಾ ಅವರೇ?" ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ರಮ್ಯ, "ನಾನು ಯಾವುದೇ ನಿಷೇಧ ಅಥವಾ ಬಹಿಷ್ಕಾರವನ್ನು ಬೆಂಬಲಿಸುವುದಿಲ್ಲ. ಅದು ಪ್ರಜಾಪ್ರಭುತ್ವ ವಿರೋಧಿ. ನಾವು ಸದಾ ಉತ್ತಮ ಸಂವಾದದಲ್ಲಿ ತೊಡಗಿಸಿಕೊಳ್ಳಬಹುದು" ಎಂದು ಉತ್ತರಿಸಿದ್ದಾರೆ.