

Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಪ್ರಸ್ತುತ ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಆ ಫೋಟೋವನ್ನು ನೀವು ಮೇಲೆ ನೋಡಬಹುದು. ಬಿಳಿ ಬಣ್ಣದ ಉಡುಗೆ ಧರಿಸಿರುವ ಈ ಪುಟ್ಟ ಪೋರಿ ಇಂದು ಪ್ಯಾನ್ ಇಂಡಿಯಾ ನಟಿ. ಗಮನಾರ್ಹ ಸಂಗತಿ ಏನೆಂದರೆ, ಈಕೆ ನಮ್ಮ ಕನ್ನಡತಿ. ಮೊದಲ ಸಿನಿಮಾದಲ್ಲೇ ಸೂಪರ್-ಡೂಪರ್ ಹಿಟ್ ನೀಡಿ ಜನಮನ್ನಣೆ ಗಳಿಸಿದರು. ಅಲ್ಲದೆ, ವಿವಿಧ ಭಾಷೆಯ ಸಿನಿಮಾಗಳಿಂದ ಆಫರ್ ಗಳಿಸಿ, ಇಂದು ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಬೆಳೆದು ನಿಂತಿದ್ದಾರೆ. ಕನ್ನಡದಲ್ಲಿ ದಿವಂಗತ ನಟ ಪುನೀತ್ ರಾಜ್ಕುಮಾರ್, ನಟ ದರ್ಶನ್ರಿಂದ ಹಿಡಿದು, ತಮಿಳಿನಲ್ಲಿ ವಿಜಯ್, ಕಾರ್ತಿಕ್, ಧನುಷ್ ಮತ್ತು ತೆಲುಗಿನಲ್ಲಿ ವಿಜಯ್ ದೇವರಕೊಂಡ, ಮಹೇಶ್ ಬಾಬು, ಅಲ್ಲು ಅರ್ಜುನ್ ಹಾಗೂ ಬಾಲಿವುಡ್ನಲ್ಲಿ ಸಲ್ಮಾನ್ ಖಾನ್, ವಿಕ್ಕಿ ಕುಶಾಲ್ ಮತ್ತು ರಣಬೀರ್ ಕಪೂರ್ರಂತಹ ದೊಡ್ಡ ನಟರ ಜತೆಯಲ್ಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅನೇಕ ಬಾರಿ ವಿವಾದಗಳಿಗೂ ಈ ನಟಿ ತುತ್ತಾಗಿದ್ದಾರೆ. ಅದರಲ್ಲೂ ಪದೇಪದೆ ಕನ್ನಡಿಗರ ಭಾವನೆಯನ್ನು ಕೆಣಕುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಷ್ಟೆಲ್ಲ ಸುಳಿವು ನೀಡಿದರೂ ಅವರು ಯಾರೆಂದು ಗೊತ್ತಾಗುತ್ತಿಲ್ಲವೇ? ಹಾಗಾದರೆ, ಮುಂದೆ ಓದಿ ಉತ್ತರ ಸಿಗಲಿದೆ.
ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ಕನ್ನಡತಿ, ಕೊಡಗಿನ ಕುವರಿ ಹಾಗೂ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ.
ರಶ್ಮಿಕಾ ಮಂದಣ್ಣ ಅವರು 1996ರ ಏಪ್ರಿಲ್ 5ರಂದು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕೊಡವ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕಾಫಿ ತೋಟ ಮತ್ತು ಫಂಕ್ಷನ್ ಹಾಲ್ ನಡೆಸುತ್ತಾರೆ. ತಾಯಿ ಗೃಹಿಣಿಯಾಗಿದ್ದಾರೆ. ಪುಟ್ಟ ಸಹೋದರಿ ಶಿಮನ್ ಕೂಡ ಅವರ ಕುಟುಂಬದ ಭಾಗವಾಗಿದ್ದಾರೆ. ರಶ್ಮಿಕಾ ಅವರು ಬಾಲ್ಯದಲ್ಲಿ ಆರ್ಥಿಕ ತೊಂದರೆಗಳನ್ನು ಎದುರಿಸಿದ್ದರು. ಗೋಣಿಕೋಪ್ಪಲ್ನ ಕೂರ್ಗ್ ಪಬ್ಲಿಕ್ ಸ್ಕೂಲ್ನಲ್ಲಿ ಶಿಕ್ಷಣ ಪಡೆದು, ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್ನಲ್ಲಿ ಸೈಕಾಲಜಿ, ಜರ್ನಲಿಸಂ ಮತ್ತು ಇಂಗ್ಲಿಷ್ ಲಿಟರೇಚರ್ ಅಧ್ಯಯನ ಮಾಡಿದರು. ಕನ್ನಡ ಚಿತ್ರ ಕಿರಿಕ್ ಪಾರ್ಟಿ (2016)ಯಲ್ಲಿ ನಟಿಸಿ, ಸಾನ್ವಿ ಪಾತ್ರದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಈ ಸಿನಿಮಾಗೆ SIIMA ಬೆಸ್ಟ್ ಡೆಬ್ಯೂ ಆಕ್ಟ್ರೆಸ್ ಪ್ರಶಸ್ತಿ ಸಿಕ್ಕಿತು.
ರಶ್ಮಿಕಾ ಅವರ ವೃತ್ತಿಜೀವನ ಕನ್ನಡ ಚಿತ್ರಗಳಾದ 'ಅಂಜನಿ ಪುತ್ರ' ಮತ್ತು 'ಚಮಕ್' (ಎರಡೂ 2017ರಲ್ಲಿ ಬಿಡುಗಡೆಯಾದವು)ಯೊಂದಿಗೆ ವಿಸ್ತರಿಸಿತು. 2018ರಲ್ಲಿ ತೆಲುಗು ಚಿತ್ರ 'ಚಲೋ'ಯಿಂದ ಕಾಲಿವುಡ್ ಪ್ರವೇಶಿಸಿದರು. 'ಗೀತ ಗೋವಿಂದಂ' ಚಿತ್ರದಿಂದ ಜನಪ್ರಿಯತೆ ಪಡೆದರು. ಇದೇ ಸಿನಿಮಾಗೆ ಫಿಲ್ಮ್ಫೇರ್ ಕ್ರಿಟಿಕ್ಸ್ ಬೆಸ್ಟ್ ಆಕ್ಟ್ರೆಸ್ ಪ್ರಶಸ್ತಿ ಸಿಕ್ಕಿತು. 'ಡಿಯರ್ ಕಾಮ್ರೇಡ್' (2019), 'ಸರಿಲೇರು ನೀಕೆವ್ವರು' ಮತ್ತು 'ಭೀಷ್ಮ' (ಎರಡೂ 2020) ಸಿನಿಮಾಗಳು ಯಶಸ್ಸು ಸಾಧಿಸಿದವು. 'ಪುಷ್ಪ: ದಿ ರೈಸ್' (2021) ಸಿನಿಮಾದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಶ್ಮಿಕಾ ಗುರುತಿಸಿಕೊಂಡಿತು. 'ಅನಿಮಲ್' (2023) ಮತ್ತು 'ಪುಷ್ಪ 2: ದಿ ರೂಲ್' (2024) ಸಿನಿಮಾಗಳು ದಾಖಲೆಗಳನ್ನು ನಿರ್ಮಿಸಿದವು. 2025ರಲ್ಲಿ 'ಛಾವಾ' ಉತ್ತಮ ಯಶಸ್ಸು ಗಳಿಸಿತು. 'ಸಿಕಂದರ್' ಮತ್ತು 'ಕುಬೇರ' ಸಿನಿಮಾಗಳು ಗಳಿಕೆಯಲ್ಲಿ ಹಿಂದೆ ಬಿದ್ದವು. ಮುಂಬರುವ ಚಿತ್ರಗಳ ವಿಚಾರಕ್ಕೆ ಬಂದರೆ, 'ದಿ ಗರ್ಲ್ಫ್ರೆಂಡ್', 'ಥಮ್ಮಾ' ಮತ್ತು 'ಕಾಕ್ಟೇಲ್ 2' ಇವೆ. (ಏಜೆನ್ಸೀಸ್)