

Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಪ್ರಸ್ತುತ ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಆ ಫೋಟೋವನ್ನು ನೀವು ಮೇಲೆ ನೋಡಬಹುದು. ಹಳದಿ ಬಣ್ಣದ ಉಡುಗೆ, ಕೆಂಪು ಬಣ್ಣದ ಕೈ ಬಳೆಗಳು ಹಾಗೂ ಕಾಲು ಗೆಜ್ಜೆ ಧರಿಸಿ ಬಾಲಕಿಯೊಬ್ಬಳು ಕ್ಯಾಮೆರಾಗೆ ಪೋಸ್ ನೀಡಿದ್ದಾಳೆ. ಈ ಬಾಲಕಿ ಸಾಮಾನ್ಯ ಬಾಲಕಿಯಲ್ಲ. ಮಲಯಾಳಂ ಚಿತ್ರರಂಗದ ಸ್ಟಾರ್ ನಟಿ ಈಕೆ. ಅಷ್ಟೇ ಅಲ್ಲದೆ, ಪ್ಯಾನ್ ಇಂಡಿಯಾ ನಟಿ ಕೂಡ. ಮಲಯಾಳಂ ಮಾತ್ರವಲ್ಲದೆ, ತಮಿಳು ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ, ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ನಟ ಪುನೀತ್ ರಾಜ್‌ಕುಮಾರ್ ಜೊತೆ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಇಷ್ಟೆಲ್ಲ ಸುಳಿವು ನೀಡಿದರೂ ಅವರು ಯಾರೆಂದು ಗೊತ್ತಾಗುತ್ತಿಲ್ಲವೇ? ಹಾಗಾದರೆ, ಮುಂದೆ ಓದಿ ಉತ್ತರ ಸಿಗಲಿದೆ.
ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ಸ್ಟಾರ್ ನಟಿ ಅನುಪಮಾ ಪರಮೇಶ್ವರನ್. ಆಲ್ಫೋನ್ಸ್ ಪುತ್ರೆನ್ ನಿರ್ದೇಶನದ ಪ್ರೇಮಂ ಸಿನಿಮಾದಲ್ಲಿ ಅನುಪಮಾ ಹೆಸರು ಮೊದಲು ಕೇಳಿಬಂದಿತು. ಮೊದಲ ಚಿತ್ರವೇ ಬ್ಲಾಕ್ಬಸ್ಟರ್ ಹಿಟ್ ಆದರೂ ಕೂಡ ಅವರ ಸಿನಿ ಜರ್ನಿಯಲ್ಲಿ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಸಾಕಷ್ಟು ಸಿನಿಮಾಗಳು ಫ್ಲಾಪ್ ಆದವು. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿರುವ ಅನುಪಮಾ, ಪುನೀತ್ ರಾಜ್‌ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲೂ ನಟಿಸುವ ಮೂಲಕ ಅನುಪಮಾ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಅನುಪಮಾ ಪರಮೇಶ್ವರನ್ ಕೇರಳದ ತ್ರಿಸ್ಸೂರ್ ಜಿಲ್ಲೆಯ ಇರಿಂಜಲಕುಡದಲ್ಲಿ 1996, ಫೆ. 18ರಂದು ಮಲಯಾಳಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಪರಮೇಶ್ವರನ್ ಎರೆಕ್ಕತ್ ಮತ್ತು ತಾಯಿ ಸುನಿತಾ ಪರಮೇಶ್ವರನ್. ಅವರಿಗೆ ಓರ್ವ ತಮ್ಮನು ಇದಾನೆ. ಆತನ ಹೆಸರು ಅಕ್ಷಯ್. ಚಿಕ್ಕ ವಯಸ್ಸಿನಿಂದಲೇ ನಾಟಕ ಸಂಘಗಳಲ್ಲಿ ಭಾಗವಹಿಸಿ ಅಭಿನಯದ ಒಡನಾಟ ಹೊಂದಿದ ಅನುಪಮಾ, ಕೊಟ್ಟಯಂನ ಸಿಎಂಎಸ್ ಕಾಲೇಜಿನಲ್ಲಿ ಕಮ್ಯುನಿಕೇಟಿವ್ ಇಂಗ್ಲಿಷ್ ಅಧ್ಯಯನ ಮಾಡಿದರು ಆದರೆ, ಅವರ ಮನಸ್ಸು ಮಾತ್ರ ಅಭಿನಯ ಕ್ಷೇತ್ರಕ್ಕೆ ಮತ್ತೆ ಸೆಳೆಯಿತು.
2015ರಲ್ಲಿ ಮಲಯಾಳ ಚಿತ್ರ 'ಪ್ರೇಮಂ'ನಲ್ಲಿ ಮೇರಿ ಜಾರ್ಜ್ ಪಾತ್ರದ ಮೂಲಕ ಅಭಿನಯ ಜಗತ್ತಿಗೆ ಪರಿಚಯಿಸಿಕೊಂಡ ಅನುಪಮಾ, ನಿವಿನ್ ಪೌಲಿಯೊಂದಿಗೆ ನಟಿಸಿ ದೊಡ್ಡ ಯಶಸ್ಸು ಗಳಿಸಿದರು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ನಿರ್ಮಾಣ ಮಾಡಿತು. ನಂತರ ತೆಲುಗು ಚಿತ್ರಗಳಾದ 'ಕೋಡಿ' (2016), 'ವುನ್ನಾದಿ ಒಕಟೆ ಜಿಂದಗಿ' (2017) ಮತ್ತು 'ಶತಮಾಂಭವತಿ' (2017)ಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಲ್ಲಿದರು.
ಅನುಪಮಾ 2019ರಲ್ಲಿ ಕನ್ನಡ ಚಿತ್ರ 'ನಟಸಾರ್ವಭೌಮ'ದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು, ಇದರಲ್ಲಿ ಪೂಣಿತ್ ರಾಜ್‌ಕುಮಾರ್ ಅವರೊಂದಿಗೆ ನಟಿಸಿದರು. ಇತ್ತೀಚಿನ ಚಿತ್ರಗಳಾದ 'ಕಾರ್ತಿಕೇಯ 2' (2022) ಮತ್ತು 'ಟಿಲ್ಲು ಸ್ಕ್ವೇರ್' (2024)ಗಳಲ್ಲಿ ಅವರ ಪಾತ್ರಗಳು ಗಮನ ಸೆಳೆದವು. ಹೈದರಾಬಾದ್ ಟೈಮ್ಸ್ 30 ಮೋಸ್ಟ್ ಡಿಜೈರಬಲ್ ವುಮನ್ ಪಟ್ಟಿಯಲ್ಲಿ ಸೇರಿದ್ದು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲೂ ಅವರ ಚಟುವಟಿಕೆಗಳು ಮುಂದುವರಿದಿವೆ. (ಏಜೆನ್ಸೀಸ್)