ಉಗುರುಗಳನ್ನು ಉಜ್ಜುವುದರಿಂದ ಕೂದಲು ಬೆಳವಣಿಗೆಯಾಗುತ್ತಾ? ಇಲ್ಲಿದೆ ನೋಡಿ ಅಸಲಿ ಸಂಗತಿ... Balayam Yoga

Balayam Yoga
Published on

Balayam Yoga : ಕೂದಲು ಉದುರುವಿಕೆ ಇಂದಿನ ಯುವಕರು ಮತ್ತು ವಯಸ್ಕರನ್ನು ಕಾಡುವ ಪ್ರಮುಖ ಸಮಸ್ಯೆಗಳಾಗಿವೆ. ಈ ಸಮಸ್ಯೆಗೆ ಪರಿಹಾರವಾಗಿ, ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಪ್ರಾಚೀನ ವಿಧಾನದ ಬಗ್ಗೆ ನಾವು ಆಗಾಗ ಕೇಳುತ್ತಿರುತ್ತೇವೆ. ಅದರಲ್ಲಿ ಉಗುರು ಉಜ್ಜುವುದು ಅಥವಾ ಬಾಲಯಾಮ ಯೋಗ ಕೂಡ ಒಂದು.

ಅಂದಹಾಗೆ, ಬಾಲಯಾಮ ಯೋಗ ನಿಜವಾಗಿಯೂ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆಯೇ? ಈ ಯೋಗ ತುಂಬಾ ಪರಿಣಾಮಕಾರಿಯೇ? ಈ ಯೋಗದ ಹಿಂದಿರುವ ವೈಜ್ಞಾನಿಕ ಕಾರಣಗಳೇನು? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಬಾಲಯಾಮ ಎಂದರೇನು?

ಬಾಲಯಾಮವು ಯೋಗದ ಭಾಗವಾಗಿರುವ ಕೈ ಭಂಗಿ ಅಥವಾ ಮುದ್ರೆ ತಂತ್ರವಾಗಿದೆ. ಈ ತಂತ್ರದಲ್ಲಿ, ಎರಡೂ ಕೈಗಳ ಉಗುರುಗಳನ್ನು (ಹೆಬ್ಬೆರಳಿನ ಉಗುರುಗಳನ್ನು ಹೊರತುಪಡಿಸಿ) ಒಟ್ಟಿಗೆ ಸ್ಪರ್ಶಿಸಿ ಸುಮಾರು 5 ರಿಂದ 10 ನಿಮಿಷಗಳ ಕಾಲ ವೇಗವಾಗಿ ಉಜ್ಜಲಾಗುತ್ತದೆ. ಕೆಲವು ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆಗಳ ಪ್ರಕಾರ, ಈ ತಂತ್ರವನ್ನು ಪ್ರತಿದಿನ ಮಾಡುವುದರಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಬೋಳು ಸಮಸ್ಯೆ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.

ಇನ್ನು ಬಾಲಯಾಮ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಕಾರಣ ರಿಫ್ಲೆಕ್ಸೋಲಜಿ ಸಿದ್ಧಾಂತಕ್ಕೆ ಸಂಬಂಧಿಸಿದೆ. ರಿಫ್ಲೆಕ್ಸೋಲಜಿಯ ಪ್ರಕಾರ, ನಮ್ಮ ದೇಹದ ಕೆಲವು ಪ್ರದೇಶಗಳು ಅಥವಾ ಅಂಗಗಳು ಕೈ ಮತ್ತು ಕಾಲುಗಳ ಮೇಲಿನ ನಿರ್ದಿಷ್ಟ ಬಿಂದುಗಳಿಗೆ ಸಂಪರ್ಕ ಹೊಂದಿವೆ. ಅದೇ ರೀತಿ ನಮ್ಮ ಬೆರಳುಗಳ ತುದಿಯಲ್ಲಿರುವ ನರಗಳು ನೆತ್ತಿಯಲ್ಲಿರುವ ನರಗಳಿಗೆ ಸಂಪರ್ಕ ಹೊಂದಿವೆ ಎಂದು ನಂಬಲಾಗಿದೆ. ಹೀಗಾಗಿ ನಮ್ಮ ಉಗುರುಗಳನ್ನು ಉಜ್ಜುವುದರಿಂದ ಆ ನರಗಳು ಪ್ರಚೋದಿಸಲ್ಪಡುತ್ತವೆ. ಇದರ, ಪರಿಣಾಮ ನೇರವಾಗಿ ತಲೆಯ ಮೇಲೆ ಬೀಳುತ್ತದೆ.

ಇನ್ನು ಉಗುರುಗಳನ್ನು ವೇಗವಾಗಿ ಉಜ್ಜುವುದರಿಂದ ನೆತ್ತಿಗೆ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ಕೂದಲು ಕಿರುಚೀಲಗಳಿಗೆ ಹೆಚ್ಚಿನ ಆಮ್ಲಜನಕ ಮತ್ತು ಪೋಷಕಾಂಶಗಳು ದೊರೆಯುತ್ತವೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ.

ಆದಾಗ್ಯೂ, ಆಧುನಿಕ ವಿಜ್ಞಾನವು ಈ ಹೇಳಿಕೆಯನ್ನು ಸಂಪೂರ್ಣವಾಗಿ ದೃಢಪಡಿಸಿಲ್ಲ. ನಿಮ್ಮ ಉಗುರುಗಳನ್ನು ಉಜ್ಜುವುದರಿಂದ ಕೂದಲು ಬೆಳೆಯಲು ಸಹಾಯವಾಗುತ್ತದೆ ಎಂಬುದಕ್ಕೆ ಯಾವುದೇ ನಿರ್ದಿಷ್ಟ ವೈಜ್ಞಾನಿಕ ಪುರಾವೆಗಳಿಲ್ಲ. ಹೆಚ್ಚಿನ ತಜ್ಞರು ಇದು ಕೂದಲಿನ ಬೆಳವಣಿಗೆಗೆ ನೇರ ಚಿಕಿತ್ಸೆಯಲ್ಲ ಎಂದು ಹೇಳುತ್ತಾರೆ. ಬದಲಾಗಿ, ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.

ಗಮನಿಸಿ: ಕೂದಲು ಉದುರುವಿಕೆ ಅಥವಾ ಬೋಳು ಸಮಸ್ಯೆ ತೀವ್ರವಾಗಿದ್ದರೆ, ಬಾಲಯಾಮವನ್ನು ಅವಲಂಬಿಸುವ ಬದಲು ಸರಿಯಾದ ಪೋಷಣೆ, ವೈದ್ಯಕೀಯ ಸಲಹೆ ಮತ್ತು ಅಗತ್ಯ ಚಿಕಿತ್ಸೆಯನ್ನು ಪಡೆಯುವುದು ಬಹಳ ಮುಖ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net