

Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಪ್ರಸ್ತುತ ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಆ ಫೋಟೋವನ್ನು ನೀವು ಮೇಲೆ ನೋಡಬಹುದು. ಫೋಟೋದಲ್ಲಿ ಬಿಳಿ ಬಣ್ಣದ ಉಡುಪು ಧರಿಸಿರುವ ಪುಟ್ಟ ಬಾಲಕಿ ನಗುತ್ತಾ , ಕ್ಯಾಮೆರಾಗೆ ಪೋಸ್ ನೀಡಿದ್ದಾಳೆ. ಆ ಬಾಲಕಿ ಇಂದು ಬಾಲಿವುಡ್ ಚಿತ್ರರಂಗದ ಸ್ಟಾರ್ ನಟಿ. ಒಂದು ಕಾಲದಲ್ಲಿ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಮಿತಾಭ್ ಬಚ್ಚನ್, ಆಮೀರ್ ಖಾನ್ ಹಾಗೂ ಶಾರೂಖ್ ಖಾನ್ರಂತಹ ಘಟಾನುಘಟಿ ನಾಯಕರ ಜತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ಟಾರ್ ನಟನೊಬ್ಬನನ್ನು ಮದುವೆ ಆಗಿರುವ ಈ ನಟಿ ಸದ್ಯ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ಈ ನಟಿ ತಾಯಿಯಾಗಿ ಬಡ್ತಿ ಪಡೆಯಲಿದ್ದಾಳೆ. ಇಷ್ಟೆಲ್ಲ ಸುಳಿವು ನೀಡಿದರೂ ಅವರು ಯಾರೆಂದು ಗೊತ್ತಾಗುತ್ತಿಲ್ಲವೇ? ಹಾಗಾದರೆ, ಮುಂದೆ ಓದಿ ಉತ್ತರ ಸಿಗಲಿದೆ.
ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್. ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದ್ದರು ಕತ್ರಿನಾ.
ಕತ್ರಿನಾ ಕೈಫ್ 1983 ಜುಲೈ 16ರಂದು ಹಾಂಗ್‌ಕಾಂಗ್‌ನಲ್ಲಿ ಜನಿಸಿದರು. ಅವರ ತಂದೆ ಮೊಹಮ್ಮದ್ ಕೈಫ್, ಕಾಶ್ಮೀರಿ ಮೂಲದ ಬ್ರಿಟಿಷ್ ವ್ಯಾಪಾರಿ ಮತ್ತು ತಾಯಿ ಸುಝಾನ್ (ಸುಸಾನ್ನಾ) ಇಂಗ್ಲಿಷ್ ವಕೀಲೆ. ಅವರಿಗೆ ಏಳು ಸಹೋದರ-ಸಹೋದರಿಯರು ಇದ್ದು, ಅವರಲ್ಲಿ ಒಬ್ಬ ಸಹೋದರಿ ಐಸಬೆಲ್ ಕೈಫ್ ಸಹ ಮಾಡೆಲ್ ಮತ್ತು ನಟಿ. ತಾಯಿ-ತಂದೆಯ ವಿಚ್ಛೇದನದ ನಂತರ ತಂದೆ ಅಮೆರಿಕಕ್ಕೆ ಹೊರಟರು ಮತ್ತು ತಾಯಿ ಸಮಾಜ ಸೇವೆಗಾಗಿ ಚೀನಾ, ಜಪಾನ್, ಫ್ರಾನ್ಸ್, ಸ್ವಿಟ್ಜರ್‌ಲ್ಯಾಂಡ್, ಬೆಲ್ಜಿಯಂ, ಹವಾಯಿ ಮುಂತಾದ ದೇಶಗಳಲ್ಲಿ ಸಂಚರಿಸಿದರು. ಲಂಡನ್‌ನಲ್ಲಿ ಮೂರು ವರ್ಷಗಳ ಕಾಲ ನೆಲೆಸಿದ ಕತ್ರಿನಾ, ಮನೆಯಲ್ಲೇ ಶಿಕ್ಷಣ ಪಡೆದರು. 14 ವರ್ಷ ವಯಸ್ಸಿನಲ್ಲಿ ಹವಾಯಿಯಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಮಾಡೆಲಿಂಗ್ ಆರಂಭಿಸಿದರು. ಲಂಡನ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿ, ಭಾರತಕ್ಕೆ ಆಕರ್ಷಿತರಾಗಿ ಮುಂಬೈಗೆ ಬಂದರು.
ಕತ್ರಿನಾ ಕೈಫ್ ಅವರ ಸಿನಿಮಾ ಜೀವನ 2003ರಲ್ಲಿ ಹಿಂದಿ-ಇಂಗ್ಲಿಷ್ ಚಿತ್ರ 'ಬೂಮ್'ದಿಂದ ಆರಂಭವಾಯಿತು. ಆದರೆ, ಈ ಸಿನಿಮಾ ಸೋಲುಂಡಿತು. ಬಳಿಕ ತೆಲುಗು ಚಿತ್ರ 'ಮಲ್ಲಿಶ್ವರಿ' (2004)ಯಲ್ಲಿ ಯಶಸ್ಸು ಗಳಿಸಿದರು. 2005ರಲ್ಲಿ 'ಮೈನ್ ಪ್ಯಾರ್ ಕ್ಯೂನ್ ಕ್ಯಾ' ಯಿಂದ ಬಾಲಿವುಡ್‌ನಲ್ಲಿ ಯಶಸ್ಸು ಸಿಕ್ಕಿತು. 2007ರಲ್ಲಿ 'ನಮಸ್ತೆ ಲಂಡನ್', 'ಅಪ್ನೆ', 'ಪಾರ್ಟ್ನರ್', 'ವೆಲ್ಕಮ್' ಚಿತ್ರಗಳು ಹಿಟ್ ಆಗಿ ಅವರನ್ನು ಸ್ಟಾರ್ ನಟಿಯನ್ನಾಗಿ ಮಾಡಿದವು. 'ನ್ಯೂ ಯಾರ್ಕ್' (2009), 'ಅಜಬ್ ಪ್ರೇಮ್ ಕಿ ಘಜಬ್ ಕಹಾನಿ' (2009), 'ರಾಜ್ನೀತಿ' (2010), 'ಜಿಂದಗಿನ ಮಿಲೇಗಿ ದೋಬಾರಾ' (2011)ಸಿನಿಮಾಗಳಲ್ಲಿ ಕತ್ರಿನಾ ಅಭಿನಯಕ್ಕೆ ಪ್ರಶಂಸೆಗಳು ದೊರೆತವು. ಬ್ಲಾಕ್‌ಬಾಸ್ಟರ್‌ಗಳಾದ 'ಎಕ್ ಥಾ ಟೈಗರ್' (2012), 'ಧೂಮ್ 3' (2013, ಆಗಿನ ಭಾರತೀಯ ಚಿತ್ರದ ರೆಕಾರ್ಡ್), 'ಟೈಗರ್ ಝಿಂದಾ ಹೈ' (2017), 'ಭಾರತ್' (2019), 'ಸೂರ್ಯವಂಶಿ' (2021) ಹಾಗೂ 'ಟೈಗರ್ 3' (2023) ಸಿನಿಮಾಗಳು ಅವರ ವೃತ್ತಿಜೀವನವನ್ನು ಉನ್ನತಗೊಳಿಸಿದವು.
ಕತ್ರಿನಾ ಕೈಫ್ ತಮ್ಮ ವೈಯಕ್ತಿಕ ಜೀವನವನ್ನು ಯಾವಾಗಲೂ ಖಾಸಗಿಯಾಗಿ ಇರಿಸಿಕೊಳ್ಳಲು ಇಚ್ಛಿಸುತ್ತಾರೆ. ಸಲ್ಮಾನ್ ಖಾನ್ (2005 ರಿಂದ 2010) ಮತ್ತು ರಣಬೀರ್ ಕಪೂರ್ (2012 ರಿಂದ 2016) ಜೊತೆ ಡೇಟಿಂಗ್ನಲ್ಲಿದ್ದರು. 2021ರ ಡಿಸೆಂಬರ್‌ನಲ್ಲಿ ನಟ ವಿಕ್ಕಿ ಕೌಶಲ್‌ರನ್ನು ರಾಜಸ್ಥಾನದಲ್ಲಿ ವಿವಾಹ ಮಾಡಿಕೊಂಡರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ 2025ರ ಸೆಪ್ಟೆಂಬರ್‌ನಲ್ಲಿ ದಂಪತಿ ಸುದ್ದಿ ಹಂಚಿಕೊಂಡರು. (ಏಜೆನ್ಸೀಸ್)