ನನ್ನಿಂದ ಇದು ಸಾಧ್ಯವಿಲ್ಲ... ಸೆಮಿಫೈನಲ್​ ಪಂದ್ಯದ​ ನಡುವೆ ನಡೆದ ಶಾಕಿಂಗ್​ ಸಂಗತಿ ಬಿಚ್ಚಿಟ್ಟ ಜೆಮಿಮಾ! Jemimah Rodrigues

Jemimah Rodrigues
Published on

ಮುಂಬೈ: ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಭಾಗವಾಗಿ ಗುರುವಾರ (ಅ.30) ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಏಳು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿ, ಫೈನಲ್​ ಪ್ರವೇಶಿಸುವ ಮೂಲಕ ಭಾರತದ ಮಹಿಳಾ ಪಡೆ ಇತಿಹಾಸ ಸೃಷ್ಟಿಸಿತು. ಬೃಹತ್ ಗುರಿ ಮತ್ತು ಹೆಡ್-ಟು-ಹೆಡ್ ದಾಖಲೆಗಳ ಒತ್ತಡದ ಹೊರತಾಗಿಯೂ, ತವರಿನಲ್ಲಿ (ನವಿ ಮುಂಬೈ) ಪ್ರೇಕ್ಷಕರ ಬೆಂಬಲದೊಂದಿಗೆ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವನ್ನು ಜೆಮಿಮಾ ರೊಡ್ರಿಗಸ್ ನೀಡಿದರು.

ಅನಿರೀಕ್ಷಿತವಾಗಿ ಒನ್ ಡೌನ್​ನಲ್ಲಿ ಬ್ಯಾಟಿಂಗ್ ಮಾಡಬೇಕಾಗಿ ಬಂದರೂ, ಆತ್ಮವಿಶ್ವಾಸದಿಂದಲೇ ಕ್ರೀಸ್​ಗೆ ಪ್ರವೇಶಿಸಿ ಅಜೇಯ ಶತಕ ಗಳಿಸಿದರು. 134 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ 127 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಫೈನಲ್​ ಪ್ರವೇಶವನ್ನು ಖಚಿತಪಡಿಸುವ ಮೂಲಕ ಪಂದ್ಯದ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು.

ಸೆಮಿಫೈನಲ್​ನಲ್ಲಿ ಭರ್ಜರಿ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್​ನಲ್ಲಿ ಮಾತನಾಡಿದ ಜೆಮಿಮಾ ಅಚ್ಚರಿ ಸಂಗತಿ ಬಿಚ್ಚಿಟ್ಟರು. ಪಂದ್ಯದ ಒಂದು ಹಂತದಲ್ಲಿ ಚೇಸ್​ ಮಾಡಲು ಸಾಧ್ಯವಿಲ್ಲ ಎಂದು ಜೆಮಿಮಾ ಭಾವಿಸಿದ್ದರು. ಈ ವೇಳೆ ಕ್ರೀಸ್​ನಲ್ಲಿದ್ದ ದೀಪ್ತಿ ಜೊತೆ ತನ್ನ ಕಳವಳಗಳನ್ನು ಹಂಚಿಕೊಂಡರು. ತಾನು ತುಂಬಾ ದಣಿದಿದ್ದೇನೆ ಎಂದು ಹೇಳಿಕೊಂಡಳು. ಆದರೆ, ಆಕೆಯ ಉತ್ಸಾಹ ಕಡಿಮೆಯಾಗಲು ದೀಪ್ತಿ ಬಿಡಲಿಲ್ಲ. ಆಕೆ ಹೇಳಿಕೊಂಡ ಕ್ಷಣದಿಂದ ದೀಪ್ತಿ, ಜೆಮಿಮಾರನ್ನು ಪ್ರೋತ್ಸಾಹಿಸುತ್ತಲೇ ಇದ್ದರು ಮತ್ತು ಅಂತಿಮವಾಗಿ ಜೆಮಿಮಾ ಅವರು ತಂಡಕ್ಕೆ ಗೆಲುವು ತಂಡುಕೊಟ್ಟುರು.

ನಾನು 85 ರನ್​ಗಳ ಆಸುಪಾಸಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ, ನಾನು ನಿಜವಾಗಿಯೂ ದಣಿದಿದ್ದೆ. ಆ ಸಮಯದಲ್ಲಿ ನಾನು ದೀಪ್ತಿ ಜೊತೆ ಮಾತನಾಡಿದ್ದೆ. ನಿನಗೆ ಗೊತ್ತು ದೀಪು, ದಯವಿಟ್ಟು ನನ್ನ ಜೊತೆ ಮಾತನಾಡುತ್ತಲೇ ಇರು, ನನಗೆ ಚೇಸ್​ ಮಾಡಲು ಸಾಧ್ಯವಿಲ್ಲ ಎನಿಸುತ್ತಿದೆ ಎಂದು ಹೇಳಿದೆ. ಅಲ್ಲಿಂದಾಚೆಗೆ ಪ್ರತಿ ಎಸೆತದಲ್ಲೂ ದೀಪ್ತಿ ನನ್ನನ್ನು ಹುರಿದುಂಬಿಸುತ್ತಿದ್ದಳು ಮತ್ತು ಪ್ರೋತ್ಸಾಹಿಸುತ್ತಿದ್ದಳು. ನನ್ನ ಒಂದು ರನ್‌ಗಾಗಿ ತನ್ನ ವಿಕೆಟ್ ಅನ್ನು ಸಹ ಆಕೆ ತ್ಯಾಗ ಮಾಡಿದಳು. ತದನಂತರ ಆಕೆ ಪೆವಿಲಿಯನ್​ಗೆ ಹಿಂತಿರುಗುವಾಗ, 'ಕೋಯಿ ನಾ, ತು ಮ್ಯಾಚ್ ಖತಮ್ ಕರ್ ಕೆ ಆ (ಚಿಂತಿಸಬೇಡಿ, ನೀನು ಪಂದ್ಯವನ್ನು ಮುಗಿಸು) ಎಂದು ಹೇಳಿದಳು ಎಂದು ಜೆಮಿಮಾ ಹೇಳಿದರು.

ಉತ್ತಮ ಜತೆಯಾಟ ಇಲ್ಲದೇ ಹೋಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ದೀಪ್ತಿ, ರಿಚಾ ಮತ್ತು ಅಮನ್ಜೋತ್ ಆಡಿದ ಉತ್ತಮ ಇನ್ನಿಂಗ್ಸ್ ನನ್ನ ಮೇಲಿದ್ದ ಬಹಳಷ್ಟು ಒತ್ತಡವನ್ನು ಕಡಿಮೆ ಮಾಡಿತು. ಖಂಡಿತವಾಗಿಯು ಹರ್ಮನ್‌ಪ್ರೀತ್ ಮತ್ತು ನಾನು ಉತ್ತಮ ಜೊತೆಯಾಟ ಆಡಿದ್ದೇವೆ. ಆದರೆ, ಈ ಹಿಂದೆ ನಮ್ಮಲ್ಲಿ ಯಾರಾದರು ಒಬ್ಬರು ವಿಕೆಟ್​ ಕಳೆದುಕೊಂಡರೆ ಪಂದ್ಯವನ್ನೇ ಕಳೆದುಕೊಳ್ಳುತ್ತಿದ್ದೆವು. ಆದರೆ, ಇಂದು ನಮ್ಮ ತಂಡದ ಅದನ್ನು ಬದಲಾಯಿಸಿತು ಎಂದು ಜೆಮಿಮಾ ಹೇಳಿದರು.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಗುರುವಾರ (ಅ.30) ನವಿ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಐದು ವಿಕೆಟ್​ಗಳಿಂದ ಭರ್ಜರಿ ಜಯ ದಾಖಲಿಸಿತು. ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ಹರ್ಮನ್‌ಪ್ರೀತ್ ಕೌರ್​ ಪಡೆ, ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. ಮತ್ತೊಂದೆಡೆ, ಆಸೀಸ್ ಒಂದೇ ಒಂದು ಪಂದ್ಯವನ್ನು ಸೋಲದೆ ಅಜೇಯವಾಗಿ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದ್ದನ್ನು ಕಂಡ ಹಲವರು, ಗೆಲುವು ಆಸೀಸ್​ನದ್ದೇ ಎಂದು ಮುಂಚಿತವಾಗಿಯೇ ಊಹಿಸಿದ್ದರು. ಆದರೆ, ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ವಿಶ್ವಕಪ್ ಭರವಸೆ ಜೀವಂತವಾಗಿರಿಸುವಲ್ಲಿ ಕಡೆಗೂ ಟೀಮ್ ಇಂಡಿಯಾ ಸಫಲವಾಗಿದೆ.

ನಾಯಕಿ ಹರ್ಮನ್​ಪ್ರೀತ್​ ಕೌರ್ (89 ರನ್​) ಮತ್ತು ಜೆಮಿಮಾ ರೋಡ್ರಿಗಸ್ ಅವರ ಅಬ್ಬರದ ಶತಕದಾಟ (ಅಜೇಯ 127 ರನ್​) ಆಸೀಸ್​ ತಂಡಕ್ಕೆ ಸೋಲಿನ ರುಚಿ ಉಣಿಸಿದರು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಪಡೆಯನ್ನು ಬಗ್ಗುಬಡಿಯುವ ಮೂಲಕ ಇದೀಗ ಭಾರತ ಏಕದಿನ ವಿಶ್ವಕಪ್​ನ ಫೈನಲ್​ಗೆ ಎಂಟ್ರಿಕೊಟ್ಟಿದೆ. ಈ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕೌರ್ ಪಡೆ ಎದುರಿಸಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net