Vinayakan : ಸೂಪರ್ಸ್ಟಾರ್ ರಜಿನಿಕಾಂತ್ ( Rajinikanth ) ಅಭಿನಯದ ಜೈಲರ್ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದ ಪ್ರತಿಯೊಂದು ಪಾತ್ರವು ಕೂಡ ವೀಕ್ಷಕರ ಮೆಚ್ಚುಗೆ ಪಡೆಯಿತು. ಅದರಲ್ಲೂ ಖಳನಾಯಕ ವಿನಾಯಕನ್ ( Vinayakan ) ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಜನಪ್ರಿಯತೆ ಪಡೆದುಕೊಂಡರು. ವಿನಾಯಕನ್ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು. ಜೈಲರ್ ಸಿನಿಮಾದ ಬಳಿಕ ವಿನಾಯಕನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿದ್ದಾರೆ.
ಈ ವಿನಾಯಕನ್ ನಟನೆಗಿಂತ ವಿವಾದದಿಂದಲೇ ಸುದ್ದಿಯಾಗಿದ್ದು ಹೆಚ್ಚು. ಹಿಂದೊಮ್ಮೆ ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ ಎನ್ನುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ಅಸಭ್ಯ ವರ್ತನೆ ತೋರಿ ಚರ್ಚೆಗೆ ಗ್ರಾಸವಾಗಿದ್ದರು. ಮಾಡೆಲ್ ಮತ್ತು ಆಕೆಯ ತಾಯಿಯನ್ನು ಮಂಚಕ್ಕೆ ಕರೆದಿದ್ದಾಗಿ ಒಪ್ಪಿಕೊಂಡು ಸುದ್ದಿಯಾಗಿದ್ದರು. ಹೀಗೆ ಸಿನಿಮಾಗಿಂತ ಬೇಡದ ವಿಚಾರಕ್ಕೆ ವಿನಾಯಕನ್ ಹೆಚ್ಚು ಸುದ್ದಿಯಾಗಿದ್ದಾರೆ.
ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅದೇನೆಂದರೆ, ವಿನಾಯಕನ್ ತಮ್ಮ ಫ್ಲಾಟ್‌ನ ಬಾಲ್ಕನಿಯಿಂದ ಅಶ್ಲೀಲವಾಗಿ ಕೂಗುತ್ತಾ ನಗ್ನತೆಯನ್ನು ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ರಿದಾಡುತ್ತಿದೆ. ವಿನಾಯಕನ್ ಅವರು ತಮ್ಮ ನೆರೆಹೊರೆಯವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ರೀತಿಯಲ್ಲಿ ಈ ವಿಡಿಯೋ ಪ್ರಸಾರವಾಗುತ್ತಿದೆ.
ಇದನ್ನೂ ಓದಿ: ಹಬ್ಬದ ಹೋರಿ ಮಾರಾಟದಲ್ಲಿ ಮೋಸದಾಟ: ಆತ್ಮಹತ್ಯೆ ಮಾಡಿಕೊಂಡ ಮಾಲೀಕ
ವಿಡಿಯೋ ಹೊರಬಿದ್ದ ನಂತರ, ವಿನಾಯಕನ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಇದೇ ಸಂದರ್ಭದಲ್ಲಿ ವಿನಾಯಕನ್ ತಮ್ಮ ಫೇಸ್‌ಬುಕ್ ಪೇಜ್ನಲ್ಲಿ ಹರಿದಾಡುತ್ತಿರುವ ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಸಹ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ವಿನಾಯಕನ್ ಅವರು ತಮ್ಮ ಫ್ಲಾಟ್‌ನ ಬಾಲ್ಕನಿಯಿಂದ ಅಶ್ಲೀಲ ಪದವನ್ನು ನಿರಂತರವಾಗಿ ಕೂಗುತ್ತಿರುವುದನ್ನು ಕಾಣಬಹುದು. ಬಳಿಕ ಧರಿಸಿದ್ದ ಶರ್ಟ್ ಕಳಚಿ ನಗ್ನತೆಯನ್ನು ಪ್ರದರ್ಶಿಸಿದ್ದಾರೆ ಎನ್ನಲಾಗಿದೆ.
ವಿನಾಯಕನ್ ಈ ಹಿಂದೆಯೂ ಹಲವಾರು ಬಾರಿ ವಿವಾದಗಳಲ್ಲಿ ಸಿಲುಕಿದ್ದಾರೆ. ವಿನಾಯಕನ್ ತಮ್ಮ ಫ್ಲಾಟ್ ಹೊರಗೆ ಅಶ್ಲೀಲ ಸನ್ನೆ ಮಾಡುತ್ತಿರುವ ವಿಡಿಯೋಗಳು ಈ ಹಿಂದೆಯೂ ಕಾಣಿಸಿಕೊಂಡಿದ್ದವು. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೇಟ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ನಂತರ ಸಿಐಎಸ್‌ಎಫ್ ವಿನಾಯಕನ್ ಅವರನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿತ್ತು. ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರನ್ನು ನಿಂದಿಸಿದ ಪ್ರಕರಣದಲ್ಲಿ ಕೊಚ್ಚಿ ನಗರ ಪೊಲೀಸರು ವಿನಾಯಕನ್ ಅವರನ್ನು ವಿಚಾರಣೆ ನಡೆಸಿದ್ದರು. ಹೀಗೆ ಸಾಕಷ್ಟು ವಿವಾದಗಳಲ್ಲಿ ವಿನಾಯಕನ್ ಸಿಲುಕಿಕೊಂಡಿದ್ದರು.
ಅಂದಹಾಗೆ ವಿನಾಯಕನ್ ತಮಿಳಿನಲ್ಲಿ ‘ತಿಮಿರು’, ‘ಸಿರುತೈ’, ‘ಮರಿಯಾನ್’ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ತಮ್ಮ ತವರು ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. (ಏಜೆನ್ಸೀಸ್)