ಮುಂಬೈ: ಧು ವಿನೋದ್ ಚೋಪ್ರಾ ನಿರ್ದೇಶನದ ವಿಕ್ರಾಂತ್ ಮ್ಯಾಸ್ಸೆ, ಮೇಧಾ ಶಂಕರ್ ನಟನೆಯ ನಿಜ ಜೀವನ ಆಧಾರಿತ 12ತಹ ಫೇಲ್ ಚಿತ್ರವು ಪ್ರೇಕ್ಷಕರು, ವಿಮರ್ಶಕರು ಹಾಗೂ ಸೆಲೆಬ್ರಿಟಿಗಳಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಯಶಸ್ಸಿನ ನಡುವೆಯೇ ನಾಯಕ ನಟ ವಿಕ್ರಾಂತ್ ಮ್ಯಾಸ್ಸೆ ಮಾಡಿದ್ದ ಹಳೆಯ ಟ್ವೀಟ್ ಒಂದು ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ತಮ್ಮ ಹಳೆಯ ಟ್ವೀಟ್ ವೈರಲ್ ಆಗುತ್ತಿದ್ದಂತೆ ನಟ ವಿಕ್ರಾಂತ್ ಮ್ಯಾಸ್ಸೆ ಕ್ಷಮೆ ಕೇಳಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಇತ್ತ ನಟನ ಹಳೇ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ಹುಟ್ಟುಹಾಕಿದ್ದು, ಕೆಲವರು ಇವರನ್ನ ಹಿಂದೂ ವಿರೋಧಿ ಎಂದು ಕರೆದಿದ್ದಾರೆ.
2018ರಲ್ಲಿ ವಿಕ್ರಾಂತ್ ಮಸ್ಸಿ ಟ್ವೀಟ್ ಒಂದನ್ನು ಮಾಡಿದ್ದರು. ಹಿಂದೂ ಕಾರ್ಯಕರ್ತರು ಬಾಲಕಿಯೊಬ್ಬರನ್ನು ಅತ್ಯಾಚಾರ ಮಾಡಿದ ಸುದ್ದಿಗಾಗಿ ರಚಿಸಲಾದ ಕಾರ್ಟೂನ್ ಒಂದನ್ನು ವಿಕ್ರಾಂತ್ ಮ್ಯಾಸ್ಸೆ ಹಂಚಿಕೊಂಡಿದ್ದರು, ಕಾರ್ಟೂನ್ನಲ್ಲಿ, ಸೀತಾಮಾತೆ, ರಾಮನೊಂದಿಗೆ, ‘ಪುಣ್ಯಕ್ಕೆ ನನ್ನನ್ನು ರಾವಣ ಅಪಹರಣ ಮಾಡಿದ, ನಿನ್ನ ಭಕ್ತರು ಅಪಹರಣ ಮಾಡಿದ್ದರೆ ಕಷ್ಟವಾಗುತ್ತಿತ್ತು’ ಎಂಬ ಸಾಲಿತ್ತು. ಕಾರ್ಟೂನು ಹಂಚಿಕೊಂಡಿದ್ದ ವಿಕ್ರಾಂತ್ ಮ್ಯಾಸ್ಸೆ, ‘ಅರ್ಧ ಬೆಂದ ಆಲೂಗಡ್ಡೆ, ಅರ್ಧ ಬೆಂದ ರಾಷ್ಟ್ರೀಯವಾದಿಗಳು ದೇಹಕ್ಕೆ ನೋವನ್ನೇ ನೀಡುತ್ತವೆ’ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ದ್ವಿಶತಕ; ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಜಿಗಿತ
ಇದೀಗ ಈ ಕುರಿತು ಕ್ಷಮೆ ಕೇಳಿರುವ ನಟ ವಿಕ್ರಾಂತ್ ಮ್ಯಾಸ್ಸೆ, 2018ರ ನನ್ನ ಆ ಟ್ವೀಟ್ ಬಗ್ಗೆ ಕೆಲವು ಮಾತುಗಳನ್ನು ಹೇಳುವುದಕ್ಕಿದೆ. ಹಿಂದೂ ಧರ್ಮಕ್ಕೆ ಅಪಮಾನ ಮಾಡುವ ಅಥವಾ ಕೇಡು ಬಯಸುವ ಉದ್ದೇಶ ನನದ್ದಾಗಿರಲಿಲ್ಲ. ನನ್ನ ಸಹಜ ಬೇಸರವನ್ನು ವ್ಯಂಗ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೆ, ಆದರೆ ನಾನು ಆ ಕಾರ್ಟೂನ್ ಅನ್ನು ನನ್ನ ಟ್ವೀಟ್ ಜೊತೆಗೆ ಸೇರಿಸಬಾರದಿತ್ತು.
ಯಾರಿಗೆ ಆಗಲಿ ನನ್ನ ಟ್ವೀಟ್ನಿಂದ ನೋವಾಗಿದ್ದರೆ ಅಂಥಹವರಿಗೆ ಮನಃಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ನಿಮಗೆಲ್ಲರಿಗೂ ತಿಳಿದೇ ಇರುವಂತೆ, ನಾನು ಎಲ್ಲಾ ನಂಬಿಕೆಗಳನ್ನ ಮತ್ತು ಧರ್ಮಗಳನ್ನು ಸಾಧ್ಯವಾದಷ್ಟು ಹೆಚ್ಚಿನ ಗೌರವಿಸುತ್ತೇನೆ. ನಾವೆಲ್ಲರೂ ಸಮಯದೊಂದಿಗೆ ಬೆಳೆಯುತ್ತೇವೆ ಮತ್ತು ನಮ್ಮ ತಪ್ಪುಗಳಿಂದ ಕಲಿಯುತ್ತೇವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ.