ನವದೆಹಲಿ: ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಎರಡರಲ್ಲಿ ಜಯ ಗಳಿಸಿದ್ದು, ಫೆಬ್ರವರಿ 23ರಿಂದ ರಾಂಚಿಯಲ್ಲಿ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ವಶಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ.
ಇನ್ನು ಇಂಗ್ಲೆಂಡ್ ವಿರುದ್ಧದ ಎರಡನೇ ಹಾಗೂ ಮೂರನೇ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕ ಬಾರಿಸುವ ಮೂಲಕ ಭರವಸೆಯ ಆಟಗಾರ ಎನ್ನಿಸಿಕೊಂಡಿರುವ ಟೀಂ ಇಂಡಿಯಾ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರ 20ರ ಪಟ್ಟಿಗೆ ಲಗ್ಗೆ ಇಟ್ಟಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆದಿದ್ದು, ಎಲ್ಲರ ಹುಬ್ಬೇರಿಸಿದೆ. 14 ಸ್ಥಾನಗಳ ಬಡ್ತಿ ಪಡೆದಿರುವ ಜೈಸ್ವಾಲ್, 15ನೇ ಸ್ಥಾನಕ್ಕೇರಿದ್ಧಾರೆ.
ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟಕ್ಕೆ ಸೇರಿಲ್ಲ, ಈ ಒಂದು ವಿಚಾರಕ್ಕೆ ಯಾರೇ ಆದರೂ ಬೆಂಬಲಿಸಲು ಸಿದ್ಧ: ಕಮಲ್ ಹಾಸನ್
22 ವರ್ಷದ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಎರಡು ದ್ವಿಶತಕ ಸಾಧನೆ ಮಾಡಿದ ವಿಶ್ವದ ಏಳನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಆ ಮೂಲಕ ವಿನೋದ್ ಕಾಂಬ್ಳಿ ಹಾಗೂ ವಿರಾಟ್ ಕೊಹ್ಲಿ ಅವರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 209 ರನ್ ಹಾಗೂ ರಾಜ್ಕೋಟ್ನಲ್ಲಿ 214 ರನ್ ಗಳಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ಹಾಗೂ ರವಿಚಂದ್ರನ್ ಅಶ್ವಿನ್ ಅನುಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಭದ್ರವಾಗಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬೂಮ್ರಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ರವಿಚಂದ್ರನ್ ಅಶ್ವಿನ್ ಒಂದು ಸ್ಥಾನ ಬಡ್ತಿ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. ರಾಜ್‌ಕೋಟ್ ಟೆಸ್ಟ್‌ನಲ್ಲಿ ಶತಕ ಗಳಿಸಿರುವ ನಾಯಕ ರೋಹಿತ್ ಶರ್ಮಾ, ಬ್ಯಾಟಿಂಗ್ ವಿಭಾಗದಲ್ಲಿ ಒಂದು ಸ್ಥಾನ ಬಡ್ತಿ ಪಡೆದು 12ಕ್ಕೆ ತಲುಪಿದ್ದಾರೆ. ಇದೇ ಪಂದ್ಯದಲ್ಲಿ 91 ರನ್ ಗಳಿಸಿರುವ ಶುಭಮನ್ ಗಿಲ್, 35ನೇ ಸ್ಥಾನಕ್ಕೆ ತಲುಪಿದ್ದಾರೆ.
ರಾಜ್‌ಕೋಟ್ ಪಂದ್ಯದಲ್ಲಿ ಭಾರತ 434 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಆ ಮೂಲಕ ಟೆಸ್ಟ್ ಇತಿಹಾಸದಲ್ಲೇ ಬೃಹತ್ (ರನ್ ಅಂತರದಲ್ಲಿ) ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ.