

ಚೆನ್ನೈ: ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈಗಾಗಲೇ ಚಿತ್ರರಂಗದ ಸಾಕಷ್ಟು ಕಲಾವಿದರು ಸ್ಪಂದಿಸುತ್ತಿದ್ದಾರೆ. ಇದೀಗ ಅದೇ ರೀತಿ ತಮಿಳಿನ ಖ್ಯಾತ ಹಿರಿಯ ನಟ ಶಿವಕುಮಾರ್ ಮತ್ತು ಅವರ ಮಕ್ಕಳಾದ ಸೂರ್ಯ ಮತ್ತು ಸಹೋದರ ಕಾರ್ತಿ ತಮಿಳುನಾಡು ಸರ್ಕಾರಕ್ಕೆ 1 ಕೋಟಿ ರೂಗಳ ಚೆಕ್ ಹಸ್ತಾಂತರಿಸಿದ್ದಾರೆ.
ಬುಧವಾರ ನೂತನ ಸಿಎಂ ಸ್ಟಾಲಿನ್ ಅವರನ್ನು ಭೇಟಿ ಮಾಡಿದ ಸೂರ್ಯ, ಕಾರ್ತಿ ಕೋವಿಡ್ ಹಿನ್ನೆಲೆಯಲ್ಲಿ ಇಡೀ ಸರ್ಕಾರ ಜನರ ಪ್ರಾಣ ಉಳಿಸುವುದಕ್ಕೆ ಶ್ರಮ ವಹಿಸುತ್ತಿದೆ. ಹಾಗಾಗಿ ಸರ್ಕಾರಕ್ಕೆ ನಮ್ಮ ಕಡೆಯಿಂದ ಸಣ್ಣ ಸಹಾಯ. ಅವಶ್ಯಕತೆ ಇದ್ದವರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿ ಎಂದು ಕೋರಿದ್ದಾರೆ.
ಅಂದಹಾಗೆ ಮೇ 11ರಂದು ನೂತನ ಸಿಎಂ ಸ್ಟಾಲಿನ್ ಸಾರ್ವಜನಿಕವಾಗಿ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಬಹುದು ಎಂದು ಕೋರಿದ್ದರು. ಆ ಮೊತ್ತವನ್ನು ಕೋವಿಡ್ ನಿರ್ವಹಣೆಗೆ ಬಳಸಿಕೊಳ್ಳಲಾಗುವುದೂ ಎಂದಿದ್ದರು. ಅದರಂತೆ ಇದೀಗ ಶಿವಕುಮಾರ್ ಆ್ಯಂಡ್ ಸನ್ಸ್ ಒಟ್ಟಿಗೆ ಆಗಮಿಸಿ 1 ಕೋಟಿ ರೂಪಾಯಿ ಚೆಕ್ ಅನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.