ಸಾವರ್ಕರ್ ಆದ ಸುನೀಲ್ ರಾವ್; ಪಲ್ಲಕ್ಕಿ ರಾಧಾಕೃಷ್ಣ ನಿರ್ದೇಶನದಲ್ಲಿ ಬಯೋಪಿಕ್

Veer Savarkar
Published on

ವೀರ ಸಾವರ್ಕರ್ ಜೀವನಾಧಾರಿತ ಸಿನಿಮಾಗೆ ಸಿದ್ಧತೆ ಪ್ರಾರಂಭವಾಗಿದೆ. ನಟ-ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಈ ಬಯೋಪಿಕ್​ಗೆ ಆಕ್ಷನ್ ಕಟ್ ಹೇಳಲಿದ್ದು, ಸಾವರ್ಕರ್ ಪಾತ್ರದಲ್ಲಿ ಸುನೀಲ್ ರಾವ್ ನಟಿಸಲಿದ್ದಾರೆ. ಈಗಾಗಲೇ ಅವರ ಪಾತ್ರದ ಲುಕ್ ಟೆಸ್ಟ್ ಕೂಡ ಮಾಡಲಾಗಿದ್ದು, ಪಾತ್ರಕ್ಕೆ ಸುನೀಲ್ ರಾವ್ ಸಿದ್ಧತೆಯನ್ನೂ ಪ್ರಾರಂಭಿಸಿದ್ದಾರೆ. ಅದರ ನಡುವೆಯೇ ಅವರು ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.

| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

  • ವೀರ ಸಾವರ್ಕರ್ ಜೀವನಾಧಾರಿತ ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ?

ಅದು ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಅವರ ಕಲ್ಪನೆ. ಸಾವರ್ಕರ್ ಪಾತ್ರಕ್ಕೆ ನಾನು ಸೂಟ್ ಆಗಬಹುದು ಅಂತ ರಾಧಾಕೃಷ್ಣ ಅವರಿಗೆ ಹೇಗೆ ಅನ್ನಿಸಿತೋ ಗೊತ್ತಿಲ್ಲ ಈ ಪಾತ್ರ ನನಗೆ ಬಂತು. ಕೆಲವು ದಿನಗಳ ಹಿಂದೆ ಅವರು ನನ್ನನ್ನು ಸಂಪರ್ಕ ಮಾಡಿ, ಸಾವರ್ಕರ್ ಬಯೋಪಿಕ್ ಕುರಿತು ಹೇಳಿದರು.

  • ವೀರ ಸಾವರ್ಕರ್ ಪಾತ್ರಕ್ಕೆ ನಿಮ್ಮ ಲುಕ್ ಟೆಸ್ಟ್ ಕೂಡ ನಡೆದಿದೆ ...

ಹೌದು, ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಅವರು ಸಾವರ್ಕರ್ ಪಾತ್ರಕ್ಕೆ ಲುಕ್ ಟೆಸ್ಟ್ ಮಾಡಬಹುದಾ ಅಂತ ಕೇಳಿದರು. ಮಹತ್ವದ ಪಾತ್ರವಾದ ಕಾರಣ ಒಬ್ಬ ನಟನಾಗಿ ನನಗೂ ಕುತೂಹಲವಿತ್ತು. ಸಾವರ್ಕರ್ ಪಾತ್ರದಲ್ಲಿ ಹೇಗೆ ಕಾಣಿಸುತ್ತೇನೆ ಎಂಬ ಕುತೂಹಲವೂ ಇತ್ತು. ಲುಕ್ ಟೆಸ್ಟ್ ಆದ ಬಳಿಕ ನನ್ನ ಮುಖ, ಅವರ ಮುಖಕ್ಕೆ ಮ್ಯಾಚ್ ಆಗುತ್ತದೆ ಅಂತನಿಸಿತು. ಚೆನ್ನಾಗಿ ತಯಾರಿ ನಡೆಸಿದರೆ, ನ್ಯಾಯ ಒದಗಿಸಬಲ್ಲೆ ಎಂಬ ವಿಶ್ವಾಸ ಮೂಡಿತು.

  • ದೈಹಿಕವಾಗಿಯೂ ಸವಾಲಿನ ಪಾತ್ರವಲ್ಲವೇ?

ಹೌದು, ಚಿತ್ರೀಕರಣ ಪ್ರಾರಂಭವಾದಾಗ ದಷ್ಟಪುಷ್ಟವಾಗಿಯೇ ಇರಬೇಕು. ನಂತರದ ಭಾಗದಲ್ಲಿ ತೂಕ ಇಳಿಸಿಕೊಂಡು, ತೆಳ್ಳಗಾಗಬೇಕಿದೆ. ಸಾವರ್ಕರ್ ಅವರ ವಯಸ್ಸಿಗೆ ತಕ್ಕಂತೆ ತೂಕ ಇಳಿಸಿಕೊಳ್ಳಬೇಕು. ಇಷ್ಟು ದಿನಗಳಲ್ಲಿ ಇಷ್ಟು ತೂಕ ಕಡಿಮೆ ಮಾಡಿಕೊಳ್ಳಲೇಬೇಕಾದ ಸವಾಲಿದೆ. ಹೀಗಾಗಿ ಮಾನಸಿಕವಾಗಿ ಮಾತ್ರವಲ್ಲದೇ ದೈಹಿಕವಾಗಿಯೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.

  • ಸಾವರ್ಕರ್ ಅವರ ಕುರಿತು ಒಬ್ಬೊಬ್ಬರದೂ ಒಂದೊಂದು ರೀತಿಯ ಅಭಿಪ್ರಾಯವಿದೆ. ಕೆಲವರಿಗೆ ಐತಿಹಾಸಿಕ ಪ್ರಾಮುಖ್ಯತೆ ಇರುವ ವ್ಯಕ್ತಿಯಾಗಿದ್ದರೆ, ಕೆಲವರಿಗೆ ವಿವಾದಾತ್ಮಕ...

ಇದೊಂದು ಅತ್ಯಂತ ಸವಾಲಿನ ಪಾತ್ರ. ಐತಿಹಾಸಿಕವಾಗಿ ಮಹತ್ವವಿರುವ ಕಾರಣ ಯಾವುದೇ ಕಲಾವಿದರಿಗೂ ಕುತೂಹಲ ಮೂಡಿಸುವ ಪಾತ್ರ. ಬೇರೆಯವರ ದೃಷ್ಟಿಕೋನ ಹೇಗಿರುತ್ತದೋ ಗೊತ್ತಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ. ಆದರೆ, ನಾನು ಒಬ್ಬ ನಟನಾಗಿ ಈ ಸಿನಿಮಾ ಹಾಗೂ ಪಾತ್ರವನ್ನು ಸ್ವೀಕರಿಸುತ್ತಿದ್ದೇನೆ.

  • ಬಾಲಿವುಡ್​ನಲ್ಲೂ ‘ಸ್ವಾತಂತ್ರವೀರ್ ಸಾವರ್ಕರ್’ ಹೆಸರಿನಲ್ಲಿ ಬಯೋಪಿಕ್ ಬರುತ್ತಿದೆ...

ಹೌದು, ಹಿಂದಿಯಲ್ಲೂ ವೀರ್ ಸಾವರ್ಕರ್ ಅವರ ಬಯೋಪಿಕ್ ಬರುತ್ತಿದೆ. ಈ ಸಿನಿಮಾ ಆಗುತ್ತಿದೆ ಅಂತ ತುಂಬ ದಿನಗಳ ಹಿಂದೆಯೇ ಗೊತ್ತಿತ್ತು. ಹಾಗಂತ ಕನ್ನಡ ಚಿತ್ರಕ್ಕೂ, ಬಾಲಿವುಡ್ ಸಿನಿಮಾಗೂ ಕ್ಲಾಷ್ ಆಗುವುದಿಲ್ಲ. ಅದು ಹಿಂದಿ ಭಾಷೆಯಲ್ಲಿ ಮೂಡಿಬರಲಿದೆ. ಇದು ಕನ್ನಡದಲ್ಲಿ ಮಾತ್ರ ತೆರೆಗೆ ಬರಲಿದೆ. ಆ ಚಿತ್ರಕ್ಕೆ ಅದರದೇ ಆದ ಜಾಗವಿರಲಿದೆ, ನಮ್ಮ ಸಿನಿಮಾಗೂ ಸಹ ಅದರದೇ ಜಾಗವಿರಲಿದೆ.

  • ಪಾತ್ರಕ್ಕಾಗಿ ಸಿದ್ಧತೆ ಹೇಗೆ ಮಾಡಿಕೊಳ್ಳುತ್ತಿದ್ದೀರಿ?

ಪಾತ್ರಕ್ಕೆ ನಾನು ಈಗಾಗಲೇ ಸಿದ್ಧತೆ ಪ್ರಾರಂಭಿಸಿದ್ದೇನೆ. ಸಾಮಾನ್ಯವಾಗಿ ಸಾವರ್ಕರ್ ಅವರ ಕುರಿತು ಎಲ್ಲರಿಗೂ ಎಷ್ಟು ವಿಷಯ ತಿಳಿದಿತ್ತೋ ಈ ಮೊದಲು ನನಗೂ ಅಷ್ಟೇ ವಿಷಯ ಗೊತ್ತಿತ್ತು. ಚಿತ್ರದಲ್ಲಿ ಅವಕಾಶ ಸಿಕ್ಕ ಬಳಿಕ, ನಿರ್ದೇಶಕರು ಹಲವು ವಿಷಯಗಳನ್ನು ತಿಳಿಸಿದರು. ನಾನೂ ಓದಿ ಮತ್ತಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಹೀಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net