2,000 ರೂ.ಗೆ ಅಸಿಸ್ಟೆಂಟ್​ ಆಗಿ ಕೆಲಸ! '3BHK'ಗೆ ಉತ್ತಮ ಪ್ರತಿಕ್ರಿಯೆ, ನಟ ಸಿದ್ಧಾರ್ಥ್ ಭಾವುಕ ನುಡಿ

ವಿಜಯವಾಣಿ (12)
Published on

3BHK: ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ತೆರೆಕಂಡ ತಮಿಳು ನಟ ಸಿದ್ಧಾರ್ಥ್ ಅಭಿನಯದ '3ಬಿಎಚ್​ಕೆ' ಸಿನಿಮಾ, ಸಿನಿಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ನಟನ ಅಭಿನಯಕ್ಕೆ ಮತ್ತು ಕಥಾಹಂದರಕ್ಕೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರವು ಗೆಲುವಿನ ಹಾದಿಯಲ್ಲಿ ಸಾಗುತ್ತಿರುವ ಬೆನ್ನಲ್ಲೇ ಸಿದ್ಧಾರ್ಥ್​​ ತಮ್ಮ ವೃತ್ತಿ ಜೀವನದ ಕೆಲವು ಕುತೂಹಲಕಾರಿ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಇದೇ ಜುಲೈ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ 3BHK, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯೊಂದಿಗೆ ವಿಮರ್ಶೆಯನ್ನು ಪಡೆಯುತ್ತಿದೆ. ಗಣೇಶ್ ನಿರ್ದೇಶನದ ಚಿತ್ರದಲ್ಲಿ ಸಿದ್ಧಾರ್ಥ್ ಮತ್ತು ಮೀತಾ ರಘುನಾಥ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಿರು ಸಮಾರಂಭದಲ್ಲಿ ಮನಬಿಚ್ಚಿ ಮಾತನಾಡಿದ ಸಿದ್ಧಾರ್ಥ್, ಕೇವಲ ಎರಡು ಸಾವಿರ ರೂ.ಗೆ ಸ್ಟಾರ್​ ನಿರ್ದೇಶಕ ಮಣಿರತ್ನಂ ಅವರಿಗೆ ಅಸಿಸ್ಟೆಂಟ್​ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

"ಅಂದು ನಾನು ಎಂಬಿಎ ಮುಗಿಸಿ, ಕಾರ್ಪೊರೇಟ್ ಕೆಲಸ ಮಾಡುವುದನ್ನು ಕೈಬಿಟ್ಟು, ಚಿತ್ರರಂಗಕ್ಕೆ ಕಾಲಿಟ್ಟೆ. ಮಣಿರತ್ನಂ ಅವರಿಗೆ ಸಹಾಯಕ ನಿರ್ದೇಶಕನಾಗಿ ಕೇವಲ ಎರಡು ಸಾವಿರ ರೂ.ಗೆ ಸೇರಿಕೊಂಡೆ. ನಂತರ ನನ್ನ ಪೋಷಕರು ನನ್ನ ಸ್ಥಿತಿಗತಿಯನ್ನು ನೋಡಿ ಚಿಂತಿತರಾದರು. ಅವರಿಗೆ ನಾನು ಏನಾಗುತ್ತೀನೋ ಎಂಬ ಭಯ ಕಾಡುತ್ತಿತ್ತು. ಅಲ್ಲಿಂದ ಆರಂಭಿಸಿದ ಜೀವನ 25 ವರ್ಷಗಳ ಬಳಿಕ ಇಂದು ಗಾಯಕ ಮತ್ತು ನಟನಾಗಿ ನಿಮ್ಮ ಮುಂದೆ ನಿಂತಿದ್ದೇನೆ" ಎಂದು ಸಿದ್ಧಾರ್ಥ್​ ಹೇಳಿದ್ದಾರೆ.

3 BHK ಚಿತ್ರದಲ್ಲಿ ಶರತ್‌ಕುಮಾರ್, ದೇವಯಾನಿ, ಚೈತ್ರ ಮತ್ತು ಯೋಗಿ ಬಾಬು ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಜುಲೈ 4ರಂದು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಂಡಿದೆ. ಪ್ರಸ್ತುತ ಚಿತ್ರವು ಉತ್ತಮ ಪ್ರತಿಕ್ರಿಯೆ ವಿಮರ್ಶೆಗಳೊಂದಿಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net