ಇಂಡಿ ವಿಧಾನ ಸಭೆ ಕ್ಷೇತ್ರದಲ್ಲಿ ಪ್ರಗತಿ ಪರ್ವ, ಜು.14ರಂದು ಸಿಎಂ-ಡಿಸಿಎಂ ಆಗಮನ, ಪೂರ್ವಭಾವಿ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಹೇಳಿದ್ದೇನು ಗೊತ್ತಾ?

INDI MLA MEETING IN DC OFFICE
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳ ಸಭೆ ನಡೆಸಿದರು. ಡಿಸಿ ಟಿ.ಭೂಬಾಲನ್, ಸಿಇಒ ರಿಷಿ ಆನಂದ, ಎಎಸ್‌ಪಿ ಶಂಕರ ಮಾರಿಹಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ಇಂಡಿ ವಿಧಾನ ಸಭೆ ಕ್ಷೇತ್ರದಲ್ಲಿ ಪ್ರಗತಿ ಪರ್ವ ಆರಂಭಗೊಂಡಿದ್ದು, ಜು.14 ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಆಗಮಿಸಿ 4257 ಕೋಟಿ ರೂ.ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪೂರ್ವ ಸಿದ್ಧತೆ ಸಭೆ ನಡೆಸಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಇಂಡಿ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಿರುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಅಭಿವೃದ್ಧಿ ಕಾಮಗಾರಿಗಳ ವಿವರ

ಇಂಡಿ ಮತ್ತು ಚಡಚಣ ತಾಲೂಕಿನ 19 ಕೆರೆ ತುಂಬುವ ಯೋಜನೆ, ಜಲಜೀವನ್ ಮಿಷನ್ ಕಾಮಗಾರಿಗಳು, ಇಂಡಿ ನಗರದಲ್ಲಿ ನೂತನ ಶ್ರೀ ಸಿದ್ಧೇಶ್ವರ ಬೃಹತ್ ವಾಣಿಜ್ಯ ಸಂಕೀರ್ಣ ಮಾರುಕಟ್ಟೆ, ಇಂಡಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಪ್ರಗತಿ ಕಾಲನಿಯ ಸಿಸಿ ರಸ್ತೆ, ಹೊರ್ತಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿಗಳಿಗೆ ಹೆಚ್ಚುವರಿ ಕೊಠಡಿಗಳು ಹಾಗೂ ಮೂಲ ಸೌಕರ್ಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆ, ಇಂಡಿ, ಮಿರಗಿ ಗ್ರಾಮದ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್, ಇಂಡಿ ನಗರದ ಹೀರೇ ಇಂಡಿ ಹನುಮಾನ ಗುಡಿಯಿಂದ ಜಲದಪ್ಪನ ಕೆರೆವರೆಗೆ ಹಳ್ಳದ ಅಭಿವೃದ್ಧಿ, ಆಳೂರ ಗ್ರಾಮದಲ್ಲಿ ಸರ್ವೆ ನಂ. 128 ರಲ್ಲಿ ಬಾಂದಾರ, ನಿಂಬಾಳ ಗ್ರಾಮದ ಸಣ್ಣ ನೀರಾವರಿ ಕೆರೆ ಅಭಿವೃದ್ಧಿ, ಹಿರೇಬೇವನೂರ ಗ್ರಾಮದ ಇಂಗು ಕೆರೆ ಅಭಿವೃದ್ಧಿ, ಹಡಲಸಂಗ ಗ್ರಾಮದ ಸಣ್ಣ ನೀರಾವರಿ ಕೆರೆ ಅಭಿವೃದ್ಧಿ, ಝಳಕಿ ಹಾಗೂ ಇಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರೌಢ ಶಾಲೆ ಕಟ್ಟಡ ಸಾತಲಗಾಂವ ಪಿಐ, ಇಂಡಿ ತಾಲೂಕಿನ 4 ಅಂಗನವಾಡಿ ಕಟ್ಟಡಗಳು, ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿ ವಸತಿ ಗೃಹ ಹಾಗೂ ಝಳಕಿ ಡಿಪ್ಲೊಮಾ ಕಾಲೇಜಿನ ಹೆಚ್ಚುವರಿ ಕೊಠಡಿಗಳ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಹೇಳಿದರು.

ರಸ್ತೆ-ಸೇತುವೆ ಕಾಮಗಾರಿ

ಹೊರ್ತಿಯ ಶ್ರೀ ರೇವಣಸಿದ್ಧೇಶ್ವರ ಏತ ನಿರಾವರಿ ಯೋಜನೆ ಕಾಮಗಾರಿಗಳು, ತಿಡಗುಂದಿ ಶಾಖಾ ಕಾಲುವೆಯ ವಿಸ್ತರಣೆ ಕಿಮೀ 56.00 ರಿಂದ 65.58 ವರೆಗಿನ ವಿತರಣಾ ಜಾಲ ನಿರ್ಮಾಣದ ಕಾಮಗಾರಿ, ಚಡಚಣ-ಗಾಣಗಾಪೂರ (115 ಕಿ.ಮೀ.) ರಸ್ತೆ ಅಭಿವೃದ್ಧಿ (ಇಂಡಿ ಮತಕ್ಷೇತ್ರದ 48 ಕಿ.ಮೀ.), (ಪಡನೂರ-ಅಂಕಲಗಿ) ಭೀಮಾ ನದಿಗೆ ಸೇತುವೆ ಕಾಮಗಾರಿ, ಇಂಡಿ ರೈಲು ನಿಲ್ಯಾಣದಿಂದ ಹಲಸಂಗಿ ರಾಷ್ಟ್ರೀಯ ಹೆದ್ದಾರಿವರೆಗೆ ರಸ್ತೆ ಸುಧಾರಣೆ ಕಾಮಗಾರಿ (ಎನ್‌ಎಚ್-52), ಔರಾದ್-ಸದಾಶಿವಗಡ ರಾಜ್ಯ ಹೆದ್ದಾರಿ 34ರ ರಸ್ತೆ ಸುಧಾರಣೆ ಕಾಮಗಾರಿ, ಇಂಡಿ ಪಟ್ಟಣದಲ್ಲಿ ಜಿಟಿಟಿಸಿ ಕಾಲೇಜು ನಿರ್ಮಾಣ ಕಾಮಗಾರಿ, ಪ್ರಗತಿ ಪಥ ಯೋಜನೆಯಡಿ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಇಲಾಖೆಯ ಕಾಮಗಾರಿಗಳ ಶಂಕುಸ್ಥಾಪನೆ ನೆರವೆರಿಸಲಿದ್ದಾರೆ ಎಂದರು.

ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯಕ್ರಮ ನಿರ್ವಹಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆಯೂ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ವಹಿಸಿಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗೊಳಿಸಬೇಕೆಂದು ಶಾಸಕರು ಹೇಳಿದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಇಂಡಿ ಪಟ್ಟಣದಲ್ಲಿ ಆಯೋಜಿಸಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿ ಆಯೋಜನೆಗೆ ಪೂರ್ವ ಸಿದ್ಧತೆ ಕೈಗೊಳ್ಳಬೇಕು. ಯಾವುದೇ ಲೋಪಗಳಿಗೆ ಆಸ್ಪದ ನೀಡದೇ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.

ವೇದಿಕೆ ಸಿದ್ಧತೆ, ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಇಂಡಿ ಪಟ್ಟಣ ಸ್ವಚ್ಛತೆ, ವೇದಿಕೆ ನಿರ್ವಹಣೆ, ವೇದಿಕೆ ಅಲಂಕಾರ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ರಿಷಿ ಆನಂದ, ಎಎಸ್‌ಪಿ ಶಂಕರ್ ಮಾರಿಹಾಳ, ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಆಲಮಟ್ಟಿಯ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಬಸವರಾಜ, ರಾಂಪೂರ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ರವಿಶಂಕರ್, ಇಂಡಿ ಡಿವೈಎಸ್‌ಪಿ ಜಗದೀಶ್, ಇಂಡಿ ತಹಸೀಲ್ದಾರ್ ಬಿ.ಎಸ್.ಕಡಕಬಾವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net